ADVERTISEMENT

97 ಸಾವಿರ ರೈತರಿಗೆ ₹ 19.78 ಕೋಟಿ

ಪಿ.ಎಂ. ಕಿಸಾನ್ ಯೋಜನೆಯ 20ನೇ ಕಂತಿನ ಹಣ ಬಿಡುಗಡೆ: ಸಂಸದ ಭಾಗಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 2:19 IST
Last Updated 5 ಆಗಸ್ಟ್ 2025, 2:19 IST
ಕೋಲಾರದ ಕೆವಿಕೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಂಸದ ಎಂ.ಮಲ್ಲೇಶ್‌ ಬಾಬು ಉದ್ಘಾಟಿಸಿದರು
ಕೋಲಾರದ ಕೆವಿಕೆಯಲ್ಲಿ ನಡೆದ ಕಾರ್ಯಕ್ರಮವನ್ನು ಸಂಸದ ಎಂ.ಮಲ್ಲೇಶ್‌ ಬಾಬು ಉದ್ಘಾಟಿಸಿದರು    

ಕೋಲಾರ: ಪಿಎಂ ಕಿಸಾನ್ ಯೋಜನೆಯಡಿ 20ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಜಿಲ್ಲೆಯ 97 ಸಾವಿರ ರೈತರಿಗೆ ನೇರವಾಗಿ ₹ 19.78 ಕೋಟಿ ಜಮೆಯಾಗಿದೆ ಎಂದು ಸಂಸದ ಎಂ.ಮಲ್ಲೇಶ್‌ ಬಾಬು ತಿಳಿಸಿದರು.

ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಆಶ್ರಯದಲ್ಲಿ ರೈತರಿಗೆ ‘ಪಿಎಂ ಕಿಸಾನ್ 20ನೇ ಕಂತಿನ ಹಣ ಬಿಡುಗಡೆ’ ಅಂಗವಾಗಿ ಉತ್ತರ ಪ್ರದೇಶದ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ನೇರ ಪ್ರಸಾರ ಕಾರ್ಯಕ್ರಮವನ್ನು ನಗರ ಹೊರವಲಯದಲ್ಲಿರುವ ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೆವಿಕೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಸಂಸದರು ಉದ್ಘಾಟಿಸಿ ಮಾತನಾಡಿದರು.

‘ಇತ್ತೀಚಿನ ದಿನಗಳಲ್ಲಿ ಜಿಲ್ಲೆಯ ಮಣ್ಣಿನ ಆರೋಗ್ಯ ತೀರಾ ಹದಗೆಟ್ಟಿದೆ. ಸಾವಯವ ಮತ್ತು ನೈಸರ್ಗಿಕ ಕೃಷಿಗೆ ಒತ್ತು ನೀಡಬೇಕು. ಎರೆಹುಳು ಗೊಬ್ಬರ ಉತ್ಪಾದಿಸಿ ಬಳಸಲು ಆದ್ಯತೆ ನೀಡಬೇಕು. ಆದಾಯ ವೃದ್ಧಿಗೆ ರೈತರು ಒಂದೇ ಬೆಳೆ ಬೆಳೆಯದೆ ಇತರ ಬೆಳೆ ಬೆಳೆಯುವ ಪ್ರವೃತ್ತಿಯನ್ನು ಅಳವಡಿಸಿಕೊಳ್ಳಬೇಕು’ ಎಂದರು.

ADVERTISEMENT

‘ರೈತ ಉತ್ಪಾದಕ ಸಂಸ್ಥೆಗಳನ್ನು ನಿರ್ಮಿಸಿಕೊಂಡಲ್ಲಿ ಮಾರ್ಕೆಟಿಂಗ್ ಮಾಡುವುದು ಸುಲಭವಾಗುತ್ತದೆ. ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯು ರೈತರಿಗೆ ಪರಿಕರ ಖರೀದಿಗೆ ತುಂಬಾ ಸಹಕಾರಿಯಾಗಿದೆ. ಬ್ಯಾಂಕಿನಿಂದ ಸಾಲ ಅಥವಾ ಸಬ್ಸಿಡಿ ಪಡೆದು ಫುಡ್ ಪ್ರೊಸೆಸಿಂಗ್ ಯುನಿಟ್‍ ಅನ್ನು ರೈತರು ಸ್ಥಾಪಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಶಿವಾನಂದ ಹೊಂಗಲ ಮಾತನಾಡಿ, ‘ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೋಲಾರದ 97 ಸಾವಿರ ಫಲಾನುಭವಿಗಳಿಗೆ 20ನೇ ಕಂತಿನಲ್ಲಿ ₹ 19.78 ಕೋಟಿ ವರ್ಗಾವಣೆಯಾಗುತ್ತಿದೆ. ಇದು ಕೃಷಿ ಪರಿಕರಗಳ ಖರೀದಿಗೆ ಅನುಕೂಲವಾಗಲಿದೆ’ ಎಂದರು.

ಕೃಷಿ ಜಂಟಿ ನಿರ್ದೇಶಕಿ ಎಂ.ಆರ್‌.‌ಸುಮಾ, ಪ್ರಸ್ತುತ ಸಾಲಿನ ಕೃಷಿ ಇಲಾಖೆಯ ಕಾರ್ಯಕ್ರಮಗಳ ಹಾಗೂ ಯೋಜನೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ತಾಂತ್ರಿಕ ಕಾರ್ಯಾಗಾರದಲ್ಲಿ ನೈಸರ್ಗಿಕ ಕೃಷಿಯ ಮಹತ್ವದ ಕುರಿತು ಮಣ್ಣು ವಿಜ್ಞಾನಿ ಅನಿಲ್ ಕುಮಾರ್ ಎಸ್. ಹಾಗೂ ಕೃಷಿಯಲ್ಲಿ ಜೈವಿಕ ಪೀಡೆ ನಾಶಕಗಳ ಮಹತ್ವ ಮತ್ತು ಬಳಕೆ ಕುರಿತು ಸಸ್ಯ ಸಂರಕ್ಷಣೆ ವಿಜ್ಞಾನಿ ಮಂಜುನಾಥ ರೆಡ್ಡಿ ಟಿ.ಬಿ., ಮಾಹಿತಿ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ತೋಟಗಾರಿಕೆ ಮಹಾವಿದ್ಯಾಲಯ ಡೀನ್‍ ರಾಘವೇಂದ್ರ ಕೆ. ಮೆಸ್ತಾ, ಚಿಟ್ನಹಳ್ಳಿ ಗ್ರಾಮದ ಪ್ರಗತಿಪರ ರೈತ ನಾಗರಾಜ್ ಸಿ.ಎಸ್., ಕೆವಿಕೆ ವಿಜ್ಞಾನಿಗಳಾದ ಶಶಿಧರ್ ಕೆ.ಆರ್., ಆಶಾ ಕೆ.ಎಂ. ಹಾಗೂ ಕೃಷಿ ಇಲಾಖೆಯ ಆತ್ಮ ಸಿಬ್ಬಂದಿ ಹಾಗೂ ಸುಮಾರು 105 ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.