ADVERTISEMENT

ಬಾಲಕನ ಹತ್ಯೆ ಪ್ರಕರಣ: ಆರೋಪಿಗಳ ಕಾಲಿಗೆ ಗುಂಡೇಟು, ಬಂಧನ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 10:00 IST
Last Updated 9 ನವೆಂಬರ್ 2023, 10:00 IST
<div class="paragraphs"><p>ಬಂಧನ </p></div>

ಬಂಧನ

   

ಕೋಲಾರ: ನಗರದಲ್ಲಿ ಈಚೆಗೆ ನಡೆದಿದ್ದ 17 ವರ್ಷದ ಕಾರ್ತಿಕ್‌ ಸಿಂಗ್‌ ಎಂಬ ಪಿಯು ಮೊದಲ ವರ್ಷದ ವಿದ್ಯಾರ್ಥಿಯನ್ನು ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ನಸುಕಿನಲ್ಲಿ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಮುಳಬಾಗಿಲು ತಾಲ್ಲೂಕಿನ ದೇವರಾಯಸಮುದ್ರ ಗ್ರಾಮದ ಬಳಿ ನಡೆದ ಕಾರ್ಯಾಚರಣೆ ವೇಳೆ ತಮ್ಮ ಮೇಲೆ ಹಲ್ಲೆ ನಡೆಸಿದ ಇಬ್ಬರು ಬಾಲಕರ ಕಾಲುಗಳಿಗೆ ಪೊಲೀಸರು ಆತ್ಮರಕ್ಷಣೆಗಾಗಿ ಗುಂಡು ಹೊಡೆದಿದ್ದಾರೆ. ಜಿಲ್ಲೆಯಲ್ಲಿ ಕಳೆದ 15 ದಿನಗಳಲ್ಲಿ ವಿವಿಧ ಆರೋಪಿಗಳ ಮೇಲೆ ನಡೆದಿರುವ ನಾಲ್ಕನೇ ಫೈರಿಂಗ್‌ ಇದಾಗಿದೆ. 

ADVERTISEMENT

ಈ ಪ್ರಕರಣದಲ್ಲಿ ಈವರೆಗೆ ಒಟ್ಟು ಏಳು ಆರೋಪಿಗಳನ್ನು ಬಂಧಿಸಿದ್ದು, ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಇವರಲ್ಲಿ ನಾಲ್ವರು 18 ವರ್ಷದ ಒಳಗಿನವರು.

ನಗರದ ಪೇಟೆಚಾಮನಹಳ್ಳಿ ಬಡಾವಣೆಯ ಬಾಪೂಜಿ ಶಾಲೆ ಆವರಣದಲ್ಲಿ ಶುಕ್ರವಾರ (ನ.3) ರಾತ್ರಿ ಕಾರ್ತಿಕ್‌ ಸಿಂಗ್‌ ಎಂಬಾತನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.

‘ಪ್ರಕರಣಎ ಆರೋಪಿಗಳು ಹೊರರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದರು. ಗುಂಡೇಟಿನಿಂದ ಗಾಯಗೊಂಡಿರುವ ಇಬ್ಬರು ಆರೋಪಿಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ. ಅಂದು ಆರೋಪಿಗಳು ಮದ್ಯಪಾನ ಮಾಡಿ ಬಾಲಕನನ್ನು ಕೊಲೆ ಮಾಡಿದ್ದರು.

ವೈಯಕ್ತಿಕ ದ್ವೇಷ, ವೈಮನಸ್ಯವೇ ಈ ಕೊಲೆಗೆ ಕಾರಣ. ಹಣದ ವಿಚಾರ, ಹುಡುಗಿಗೆ ಸಂದೇಶ ಕಳುಹಿಸಿದ ವಿಚಾರಕ್ಕೆ ಸಂಬಂಧಿಸಿದ ಮಾಹಿತಿಯೂ ಇದ್ದು, ಡಿವೈಎಸ್‌ಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ’ ಎಂದು ಕೇಂದ್ರ ವಲಯ ಐಜಿಪಿ ಬಿ.ಆರ್‌.ರವಿಕಾಂತೇಗೌಡ ಸುದ್ದಿಗಾರರಿಗೆ ಮಾಹಿತಿ ನೀಡಿದರು.

‘ಆರೋಪಿಗಳಲ್ಲಿ ಒಬ್ಬಾತ ಹೆಡ್‌ ಕಾನ್‌ಸ್ಟೆಬಲ್‌ ಪುತ್ರ ಇದ್ದಾನೆ. ಈತ ವಿವಿಧ ವಿಚಾರಗಳಿಂದ ಪ್ರಭಾವಿತನಾಗಿ ಡಾನ್‌ ಆಗಬೇಕು ಅಂದುಕೊಂಡಿದ್ದ. ಫೆಬ್ರುವರಿಯಲ್ಲಿ ಹಲ್ಲೆ ಕೂಡ ನಡೆಸಿದ್ದ. ಆಗ ಐಪಿಸಿ 307 ಪ್ರಕರಣ ದಾಖಲಿಸಿ ಬಾಲ ನ್ಯಾಯಾಲಯಕ್ಕೆ ಒಪ್ಪಿಸಲಾಗಿತ್ತು. ಅಲ್ಲದೇ ರೀಲ್ಸ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದ. ಈ ಹಂತದಲ್ಲಿ ನಿಗಾ ಇಡಲು ವಿಫಲವಾಗಿದ್ದಕ್ಕೆ ಕೋಲಾರ ನಗರ ಠಾಣೆ ಇನ್‌ಸ್ಪೆಕ್ಟರ್‌ ಅಮಾನತು ಮಾಡಲಾಗಿದೆ. ಹಲ್ಲೆ, ರೀಲ್ಸ್‌, ಕೊಲೆ ಪ್ರಕರಣ ಸೇರಿ ಒಟ್ಟು ಮೂರು ಪ್ರಕರಣಗಳಲ್ಲಿ 13 ಜನರನ್ನು ಬಂದಿಸಲಾಗಿದೆ. ಇವರಲ್ಲಿ 8 ಮಂದಿ 18 ವರ್ಷದೊಳಗಿನವರಾಗಿದ್ದಾರೆ’ ಎಂದು ತಿಳಿಸಿದರು. ‘ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಮಕ್ಕಳ ಬ್ಯಾಗ್‌ ತಪಾಸಣೆ ನಡೆಸಿದಾಗ ಮೊಬೈಲ್‌, ಸಿಗರೇಟು, ತಂಬಾಕು ಕೂಡ ಸಿಕ್ಕಿವೆ’ ಎಂದು ಹೇಳಿದರು.

ಪತ್ತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರಿಗೆ ಈ ವೇಳೆ ನಗದು ಬಹುಮಾನ ಘೋಷಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಂ.ನಾರಾಯಣ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವಿ.ಬಿ.ಭಾಸ್ಕರ್‌, ಡಿವೈಎಸ್‌ಪಿ ಮಲ್ಲೇಶ್‌ ಇದ್ದರು.

ಈ ಪ್ರಕರಣ ಸಂಬಂಧ ಕರ್ತವ್ಯ ಲೋಪದ ಮೇಲೆ ಎಂ.ನಾರಾಯಣ ನಗರ ಪೊಲೀಸ್‌ ಠಾಣೆಯ ಮೂವರು ಸಿಬ್ಬಂದಿಯನ್ನು ಈಗಾಗಲೇ ಅಮಾನತು ಮಾಡಿದ್ದಾರೆ.

ಬಂಧಿತ ಇಬ್ಬರು ಆರೋಪಿಗಳು ಉಳಿದ ಆರೋಪಿಗಳನ್ನು ತೋರಿಸುವುದಾಗಿ ಪೊಲೀಸರ ಕಣ್ಣಿಗೆ ಮಣ್ಣು ಎರಚಿ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಆಗ ಕಾಲಿಗೆ ಗುಂಡು ಹೊಡೆದು ಬಂಧಿಸಲಾಗಿದೆ.
-ಬಿ.ಆರ್‌.ರವಿಕಾಂತೇಗೌಡ, ಐಜಿಪಿ, ಕೇಂದ್ರ ವಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.