ADVERTISEMENT

ಫಲಿತಾಂಶದ ಬಳಿಕ ರಾಜಕೀಯ ಧೃವೀಕರಣ: ಶಾಸಕ ಸುಧಾಕರ್‌

'ಬಿಜೆಪಿ ನಾಯಕರಿಗೆ ಭ್ರಮೆ'

​ಪ್ರಜಾವಾಣಿ ವಾರ್ತೆ
Published 6 ಮೇ 2019, 13:09 IST
Last Updated 6 ಮೇ 2019, 13:09 IST

ಕೋಲಾರ: ‘ಲೋಕಸಭೆ ಚುನಾವಣೆಯ ಮತ ಎಣಿಕೆ ನಂತರ ರಾಜಕೀಯ ಧೃವೀಕರಣ ಆಗುತ್ತದೆ’ ಎಂದು ಚಿಕ್ಕಬಳ್ಳಾಪುರದ ಕಾಂಗ್ರೆಸ್‌ ಶಾಸಕ ಕೆ.ಸುಧಾಕರ್‌ ಹೇಳಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಚುನಾವಣಾ ಫಲಿತಾಂಶ ಘೋಷಣೆಯಾದ ಬಳಿಕ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಆ ಪಕ್ಷದ ನಾಯಕರು ಭ್ರಮೆಯಲ್ಲಿದ್ದಾರೆ’ ಎಂದು ಟೀಕಿಸಿದರು.

‘ತಮ್ಮ ಪಕ್ಷ ಅಧಿಕಾರದ ಗದ್ದುಗೆ ಹಿಡಿಯಲಿದೆ ಎಂದು ತುಂಬಾ ಹುಮ್ಮಸ್ಸಿನಲ್ಲಿರುವ ಬಿಜೆಪಿ ಮುಖಂಡರು ನನಗೆ ಗಾಳ ಹಾಕುತ್ತಿದ್ದಾರೆ. ಈ ಮಾತಿಗೆ ಈಗಾಗಲೇ ಸಾಕಷ್ಟು ಬಾರಿ ಸಮಜಾಯಿಷಿ ನೀಡಿದ್ದೇನೆ. ಆದರೆ, ನಾನು ಎಂದೆಂದಿಗೂ ಕಾಂಗ್ರೆಸ್ ಶಾಸಕ’ ಎಂದರು.

ADVERTISEMENT

‘ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಎಲ್ಲವೂ ನೆಟ್ಟಗಿಲ್ಲ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಸರ್ಕಾರ ಬೇಕಿದೆ. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿಯಾದರೆ ವೈಯಕ್ತಿಕವಾಗಿ ನನಗೆ ಮತ್ತು ಪಕ್ಷಕ್ಕೆ ಒಳ್ಳೆಯದಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ರಾಜ್ಯದಲ್ಲಿ ಕಾಂಗ್ರೆಸ್ ಬೆಂಬಲದಿಂದ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕುಮಾರಸ್ವಾಮಿಯವರ ನಾಯಕತ್ವ ಒಳ್ಳೆಯದೆಂದು ತೀರ್ಮಾನಿಸಿದ್ದಾರೆ. ಹೀಗಾಗಿ ನಾವು ಕೂಡ ಒಪ್ಪಿ ಸಹಕಾರ ನೀಡಿದ್ದೇವೆ. ಹೇಗೋ ಸರ್ಕಾರ ನಡೆಯುತ್ತಿದೆ. ಮುಖ್ಯಮಂತ್ರಿ ವಿಚಾರದಲ್ಲಿ ಹೈಕಮಾಂಡ್ ನಿರ್ಧಾರ ಬದಲಿಸಿದರೆ ಅದಕ್ಕೂ ಬದ್ಧ’ ಎಂದು ಸ್ಪಷ್ಪಪಡಿಸಿದರು.

‘ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಕ್ಕೆ ಬದ್ಧನಾಗಿ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯಿಲಿ ಪರ ಕೆಲಸ ಮಾಡಿದ್ದೇನೆ. ಮುಂದೆ ಏನಾಗುತ್ತದೆ ಎಂದು ಈಗಲೇ ಹೇಳಲಾಗದು. ಸರ್ಕಾರದಲ್ಲಿ ನನಗೆ ಅವಕಾಶ ತಪ್ಪಿದ್ದರೂ ಭವಿಷ್ಯದಲ್ಲಿ ಒಳ್ಳೆಯದಾಗುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅತೃಪ್ತಿ ನಿಜ: ‘ಕಾಂಗ್ರೆಸ್‌ನ ಅನೇಕ ಶಾಸಕರಿಗೆ ಅತೃಪ್ತಿ ಇರುವುದು ನಿಜ. ಆದರೆ, ಪಕ್ಷ ಮತ್ತು ಸಿದ್ಧಾಂತ ಮುಖ್ಯ. ವೈಯಕ್ತಿಕ ನೋವು, ಅತೃಪ್ತಿ, ರಾಜಕೀಯ ಸಿದ್ಧಾಂತ, ಸೈದ್ಧಾಂತಿಕ ನಂಬಿಕೆ ನಡುವೆ ಆಯ್ಕೆ ಮುಖ್ಯ. ಸೈದ್ಧಾಂತಿಕ ನಂಬಿಕೆ ಮತ್ತು ಸಿದ್ಧಾಂತದ ಕಾರಣಕ್ಕೆ ನನ್ನ ಅಸಮಾಧಾನ ಹೊರ ಹಾಕದೆ ಮೌನವಾಗಿದ್ದೇನೆ’ ಎಂದು ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಾಲನೆ ಆಗಿದೆಯೇ ಎಂದು ಸುದ್ದಿಗಾರರು ಪ್ರಶ್ನಿಸಿದ್ದಕ್ಕೆ, ‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದ ಕೆಲವೆಡೆ ಕಾಂಗ್ರೆಸ್‌ ನಾಯಕರು ಒಟ್ಟಾಗಿ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಿಲ್ಲ. ಜೆಡಿಎಸ್ ಮುಖಂಡರು ಸಹ ಪಕ್ಷದ ಪರ ಪ್ರಚಾರ ಮಾಡಿಲ್ಲ. ಚುನಾವಣಾ ಫಲಿತಾಂಶ ಅವಲೋಕಿಸಿ ಯಾರು ಏನು ಮಾಡಿದ್ದಾರೆ, ಮಾಡಿಲ್ಲ ಎಂದು ವಿಶ್ಲೇಷಿಸಬಹುದು’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.