ADVERTISEMENT

‌ಹಳಿ ತಪ್ಪಿದ ರೈಲಿನಂತಾಗಿರುವ ರಾಜಕಾರಣ: ಮಹಿಮ ಪಟೇಲ್

ಜೆಡಿಯು ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಮಹಿಮ ಪಟೇಲ್ ಚಾಲನೆ, 50 ಸಾವಿರ ಸದಸ್ಯತ್ವ ಗುರಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2026, 5:24 IST
Last Updated 4 ಫೆಬ್ರುವರಿ 2026, 5:24 IST
ಕೋಲಾರ ತಾಲ್ಲೂಕಿನ ಕಲ್ಲಂಡೂರಿನಲ್ಲಿ ಜೆಡಿಯು ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದ ಪಕ್ಷದ ರಾಜ್ಯ ಅಧ್ಯಕ್ಷ ಮಹಿಮ ಜೆ.ಪಟೇಲ್‌, ರಾಜ್ಯ ಯುವ ಘಟಕದ ಅಧ್ಯಕ್ಷ ಡಾ.ಕೆ.ನಾಗರಾಜ್‌ ಹಾಗೂ ಪಕ್ಷದ ಹಿರಿಯ ಉಪಾಧ್ಯಕ್ಷ ಸುಭಾಷ್‌ ಅವರನ್ನು ಸನ್ಮಾನಿಸಲಾಯಿತು
ಕೋಲಾರ ತಾಲ್ಲೂಕಿನ ಕಲ್ಲಂಡೂರಿನಲ್ಲಿ ಜೆಡಿಯು ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದ ಪಕ್ಷದ ರಾಜ್ಯ ಅಧ್ಯಕ್ಷ ಮಹಿಮ ಜೆ.ಪಟೇಲ್‌, ರಾಜ್ಯ ಯುವ ಘಟಕದ ಅಧ್ಯಕ್ಷ ಡಾ.ಕೆ.ನಾಗರಾಜ್‌ ಹಾಗೂ ಪಕ್ಷದ ಹಿರಿಯ ಉಪಾಧ್ಯಕ್ಷ ಸುಭಾಷ್‌ ಅವರನ್ನು ಸನ್ಮಾನಿಸಲಾಯಿತು   

ಕೋಲಾರ: ರಾಜ್ಯದಾದ್ಯಂತ ಪ್ರವಾಸ ಮಾಡಿ‌ ಸದಸ್ಯತ್ವ ನೋಂದಣಿ ಮಾಡುವ ಮೂಲಕ ಜೆಡಿಯು ಪಕ್ಷಕ್ಕೆ ಬಲ ತುಂಬುವ ಕೆಲಸ ಮಾಡಲಾಗುವುದು. 50 ಸಾವಿರ ಮಂದಿಗೆ ಸದಸ್ಯತ್ವ ನೀಡುವ ಗುರಿ ಇದೆ. ಮುಂದಿನ ದಿನಗಳಲ್ಲಿ ನಮ್ಮದೇ ಅಥವಾ ಬೆಂಬಲಿತ ಸರ್ಕಾರ ರಚಿಸುವ ಮಹಾಕಾಂಕ್ಷೆ ‌ಇದೆ ಎಂದು ಜೆಡಿಯು ಪಕ್ಷದ ರಾಜ್ಯ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಮಹಿಮ ಜೆ.ಪಟೇಲ್ ತಿಳಿಸಿದರು.

ತಾಲ್ಲೂಕಿನ ಕಲ್ಲಂಡೂರಿನಲ್ಲಿ ಮಂಗಳವಾರ ನಡೆದ ಜನತಾದಳ (ಸಂಯುಕ್ತ) ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪಕ್ಷಕ್ಕೆ ಸೇರಲು ಜನರೇ ‌ಮುಂದೆ ಬಂದು ಅರ್ಜಿ ಹಾಕುವ ರೀತಿ ಪಕ್ಷ ಕಟ್ಟಬೇಕು. ಸಿದ್ಧಾಂತದ ಆಧಾರದ ಮೇಲೆ ಹಾಗೂ ಜನರು ನಮ್ಮ ಪಕ್ಷದತ್ತ ವಾಲುವಂಥ ರೀತಿಯಲ್ಲಿ ಪಕ್ಷ ಕಟ್ಟಬೇಕು. ಈ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.

ADVERTISEMENT

ಈಗಿನ ರಾಜಕಾರಣ ಎಂದರೆ ಹಳಿ ತಪ್ಪಿದ ರೈಲು ಇದ್ದಂತೆ. ನಾವೆಲ್ಲಾ ಆ ರೈಲು ಹತ್ತಿದ್ದೇವೆ, ಯಾವ ದಿಕ್ಕಿನತ್ತ ಹೋಗುತ್ತಿದ್ದೇವೆ ಎಂಬುದೇ ಗೊತ್ತಾಗುವುದಿಲ್ಲ. ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಎಂದರೆ ಪರಸ್ಪರ ಬೈಯ್ದುಕೊಳ್ಳುವುದೇ ಆಗಿದೆ. ಇದನ್ನು ಸರಿಪಡಿಸುವ ಕೆಲಸವನ್ನು ಜೆಡಿಯು ಪಕ್ಷದಿಂದ ಮಾಡಬೇಕಿದೆ. ಪಾಪದ ದಿಕ್ಕಿಗೆ ಹೋಗದೆ ಜನರಿಗೆ ಒಳ್ಳೆಯದನ್ನು ಮಾಡುವ ದಿಕ್ಕಿನಲ್ಲಿ ಸಾಗಬೇಕಿದೆ ಎಂದು ನುಡಿದರು.

ಈಗ ಬರೀ ಪ್ರತಿಕ್ರಿಯಾತ್ಮಕ ಆಲೋಚನೆ ನಡೆಯುತ್ತಿದೆ. ಜಗತ್ತಿನಲ್ಲಿ ನಡೆಯುತ್ತಿರುವ ಯಾವುದೋ ಘಟನೆಗೆ ನಾವು ಪ್ರತಿಕ್ರಿಯಿಸುತ್ತಿದ್ದೇವೆ. ಪರಸ್ಪರ ದೂಷಣೆಗಿಂತ ನಾವು ರಾಜ್ಯಕ್ಕೆ ಏನು ಕೊಡುಗೆ ನೀಡಬಹುದು ಎಂಬುದರ ಬಗ್ಗೆ ಚಿಂತನೆ ಮಾಡಬೇಕಿದೆ ಎಂದು ಹೇಳಿದರು.

ಸಾವಯವ ಕೃಷಿ ಹಾಗೂ ಪರಿಸರದ ಬಗ್ಗೆ ಚಿಂತಿಸಬೇಕಿದೆ. ಪ್ರಕೃತಿ ಕಡೆ ಗಮನ ಹರಿಸಬೇಕಿದೆ. ಈ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಹಾಗೂ ಜೆಡಿಯು ರಾಜ್ಯ ಯುವ ಘಟಕದ ಅಧ್ಯಕ್ಷ ಕಲ್ಲಂಡೂರು ಡಾ.ನಾಗರಾಜ್ ಮಾತನಾಡಿ, ‘ಸದಸ್ಯತ್ವ ನೋಂದಣಿ ಅಭಿಯಾನ ರಾಷ್ಟ್ರದಾದ್ಯಂತ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ನಡೆಯುತ್ತಿದೆ. ರಾಜ್ಯದಲ್ಲಿ ಮಹಿಮ ಪಟೇಲ್ ನೇತೃತ್ವದಲ್ಲಿ ಆರಂಭಿಸಲಾಗಿದೆ. ಮಹಿಳೆಯರು ಹಾಗೂ ಯುವಕರಿಗೆ ಪಕ್ಷದ ಸಿದ್ಧಾಂತ ತಿಳಿಸಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುತ್ತಿದೆ’ ಎಂದರು.

ಭ್ರಷ್ಟಾಚಾರ ರಹಿತ ಆಡಳಿತದ ಗುರಿ ನಮ್ಮದು. ಸರ್ವೋದಯದ ಧ್ಯೇಯಗಳಾದ ಉತ್ತಮ ಆಡಳಿತ, ಉತ್ತಮ ಆರೋಗ್ಯ, ಉತ್ತಮ ಶಿಕ್ಷಣ, ಉತ್ತಮ ಪರಿಸರ ಹಾಗೂ ಉತ್ತಮ ಕೃಷಿ ಜನರಿಗೆ ಬೇಕು. ವಾಯುಮಾಲಿನ್ಯದ ಕಾರಣ ಶ್ವಾಸಕೋಶದ ಕಾಯಿಲೆ ಬರುತ್ತಿದೆ. ರಾಸಾಯನಿಕ ಹಾಕಿ ಬೆಳೆದ ತರಕಾರಿಯಿಂದ ವಿವಿಧ ರೋಗ ಬರುತ್ತಿವೆ. ಹೀಗಾಗಿ, ಸಾವಯವ ಕೃಷಿಗೆ ಒತ್ತು ನೀಡಬೇಕಿದೆ. ಈ ಐದು ಅಂಶ ಇಟ್ಟುಕೊಂಡು ರಾಜ್ಯದಲ್ಲಿ ಜೆಡಿಯು ಪಕ್ಷ ಪುನಶ್ಚೇತನಗೊಳಿಸುವ ಕೆಲಸ ನಡೆಯುತ್ತಿದೆ. ಪಕ್ಷವನ್ನು ಎಲ್ಲಾ ವರ್ಗದವರು ಸೇರಿ ಕಟ್ಟಲು ಸಂಕಲ್ಪ ಮಾಡಲಾಗಿದೆ. ಸದಸ್ಯರಾಗಿ ಪಕ್ಷಕ್ಕೆ ದುಡಿಯಬೇಕಿದೆ ಎಂದು ಹೇಳಿದರು.

ಪಕ್ಷಕ್ಕಾಗಿ ಕೆಲಸ ಮಾಡುವವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶಗಳು ಸಿಗಲಿವೆ. ಮಹಿಳೆಯರು ಹಾಗೂ ಯುವಕರಿಗೆ ಹೆಚ್ಚಿನ ಆದ್ಯತೆ ಸಿಗಲಿದೆ. ಜೆಡಿಯು ಈಗ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್‌ಡಿಎ ಭಾಗವಾಗಿದೆ. ಮುಂದೆ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಎನ್‌ಡಿಎ ಭಾಗವಾಗಿ ಸ್ಪರ್ಧಿಸಲು ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ಮೂಡಣ ಬಾಗಿಲು, ಮೂಡಣ ದಿಕ್ಕು ಎನಿಸಿರುವ ಕೋಲಾರ ಜಿಲ್ಲೆಯಿಂದಲೇ ಎಲ್ಲಾ ಕಾರ್ಯಕ್ರಮ ಆರಂಭಿಸಲಾಗುತ್ತದೆ. ಹೀಗಾಗಿ, ಸದಸ್ಯತ್ವವನ್ನೂ ಇಲ್ಲಿಂದ ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ಜೆಡಿಯು ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಕಲಾವತಿ ಮಾತನಾಡಿ, ‘ಮೊದಲು ನಾವೆಲ್ಲಾ ಹೊಸದಾಗಿ ಪಕ್ಷದ ಸದಸ್ಯರಾಗಬೇಕು. ಮುಂದೆ ನಾವು ಇರುವ ಸ್ಥಳಗಳಲ್ಲಿ ಸದಸ್ಯತ್ವ ನೋಂದಣಿ ಅಭಿಯಾನ ನಡೆಸಬೇಕು' ಎಂದರು.

ಪಕ್ಷದ ಹಿರಿಯ ಉಪಾಧ್ಯಕ್ಷ ಸುಭಾಷ್ ಮಾತನಾಡಿ, ‘ಸದಸ್ಯರಾಗುವುದು ಎಂದರೆ ಸಸಿ ನೆಟ್ಟಂತೆ. ಅದು ಮುಂದೆ ಮರವಾಗಿ ಬೆಳೆಯಬಹುದು. ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಮಾಡಿರುವ ಕೆಲಸಗಳು ನಮ್ಮ ಮುಂದೆ ಇವೆ. ಸದಸ್ಯರಾಗಿ ಪಕ್ಷ ಬಲಪಡಿಸಬೇಕು’ ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಕಚೇರಿಗಳಲ್ಲಿ ಏನೇ ಕೆಲಸ ಮಾಡಿಸಿಕೊಳ್ಳಲು ಹಣ ನೀಡಬೇಕಾದ ಪರಿಸ್ಥಿತಿ ಇದೆ. ಭ್ರಷ್ಟಾಚಾರ ತೊಲಗಬೇಕು, ದೇಶದ ಅಭಿವೃದ್ಧಿಗೆ, ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ಪಕ್ಷದ ಪ್ರಧಾನ ಕಾರ್ಯದರ್ಶಿ ರಂಗನಾಥ್, ಉಪಾಧ್ಯಕ್ಷೆ ಮೈನಾವತಿ, ವಕ್ತಾರ ರಮೇಶ್ ಗೌಡ, ಯುವ ಘಟಕದ ರಾಜ್ಯ ಕಾರ್ಯದರ್ಶಿ ರಘು, ರಾಜ್ಯ ಕಾರ್ಯದರ್ಶಿ ನೇತ್ರಾ ಗೌಡ, ಮುಖಂಡರಾದ ಸಾಯಿಚರಣ್, ಅಂಬರೀಷ್, ಚಂದ್ರು, ಡಾ.ಸಹನಾ, ಸುಮಾ, ಮಲ್ಲಮ್ಮ, ನಂಜುಂಡಪ್ಪ, ಮಂಜುನಾಥಗೌಡ, ನಾರಾಯಣಸ್ವಾಮಿಗೌಡ, ರಾಹುಲ್, ಸಗೀರ್ ಅಹ್ಮದ್, ಪ್ರದೀಪ್, ವಿಶ್ವನಾಥ್, ಸೂರಿ, ಶಿಲ್ಪಾ, ನಾರಾಯಣರೆಡ್ಡಿ, ಪಾಪಣ್ಣ, ಮೋತಿಲಾಲ್, ನಿರ್ಮಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.