ADVERTISEMENT

ಸಹಕಾರ ಕ್ಷೇತ್ರದಲ್ಲೂ ರಾಜಕೀಯ: ಸಂಸದ ಬಾಬು

ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ಮತದಾರರ ಪಟ್ಟಿಗೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2024, 16:32 IST
Last Updated 24 ಡಿಸೆಂಬರ್ 2024, 16:32 IST
ಬಂಗಾರಪೇಟೆ ಕೆಂಪೇಗೌಡ ಸಮುದಾಯದ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿಯಲ್ಲಿ ಸಂಸದ ಮಲ್ಲೇಶ್ ಬಾಬು ಮಾತನಾಡಿದರು
ಬಂಗಾರಪೇಟೆ ಕೆಂಪೇಗೌಡ ಸಮುದಾಯದ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವಭಾವಿಯಲ್ಲಿ ಸಂಸದ ಮಲ್ಲೇಶ್ ಬಾಬು ಮಾತನಾಡಿದರು   

ಬಂಗಾರಪೇಟೆ: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್(ಪಿಎಲ್‌ಡಿ) ಚುನಾವಣೆ ಮತದಾರರ ಪಟ್ಟಿಯಿಂದ ಜೆಡಿಎಸ್ ಮತ್ತು ಬಿಜೆಪಿ ಷೇರುದಾರರ ಹೆಸರು ಕೈಬಿಟ್ಟಿರುವ ನಿರ್ಧಾರ ಪ್ರಶ್ನಿಸಿ ನ್ಯಾಯಾಲಯ ಮೊರೆ ಹೋಗುವುದು ಸೂಕ್ತ ಎಂದು ಸಂಸದ ಮಲ್ಲೇಶ್ ಬಾಬು ಸಲಹೆ ನೀಡಿದರು.

ಕೆಂಪೇಗೌಡ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಅವರಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದು ಸಮಂಜಸವಲ್ಲ. ಪಿಎಲ್‌ಡಿ ಬ್ಯಾಂಕ್‌ ಅಧಿಕಾರ ವಶಕ್ಕೆ ಪಡೆಯಲು ಹಾಗೂ ಚುನಾವಣೆಯಲ್ಲಿ ಸುಲಭವಾಗಿ ಜಯಗಳಿಸಲು ಬಿಜೆಪಿ, ಜೆಡಿಎಸ್‌ ಪಕ್ಷದ ಮತದಾರರ ಮತದಾನ ಹಕ್ಕನ್ನು ಉದ್ದೇಶ ಪೂರ್ವಕವಾಗಿ ರದ್ದುಗೊಳಿಸಿರುವುದು ಉತ್ತಮ ಬೆಳವಣಿಗೆಯಲ್ಲ ಎಂದರು.

ADVERTISEMENT

‘ಸಹಕಾರ ಕ್ಷೇತ್ರದಲ್ಲಿ ಸಹ ರಾಜಕಾರಣ ಮಾಡುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ. ಸಾವಿರಾರು ಸಂಖ್ಯೆಯಲ್ಲಿ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿರುವುದನ್ನು ಪ್ರಶ್ನಿಸಿ ಕೋರ್ಟ್ ಮೊರೆ ಹೋಗುವುದು ಸೂಕ್ತ’ ಎಂದು ಬಾಬು ಅಭಿಪ್ರಾಯಪಟ್ಟರು.

ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಸೇರಿದಂತೆ ಎಲ್ಲ ಚುನಾವಣೆಗಳನ್ನೂ ಎರಡೂ ಪಕ್ಷದವರು ಒಂದಾಗಿ ಎದುರಿಸಬೇಕು. ಅದಕ್ಕಾಗಿ ಸಮನ್ವಯ ಸಮಿತಿ ರಚನೆ ಮಾಡಿದರೆ ಉತ್ತಮ ಎಂದು ಸಲಹೆ ಮಾಡಿದರು.

ಕಳೆದ ಮೂರು ವಿಧಾನಸಭೆಯ ಚುನಾವಣೆಯಲ್ಲಿ ಹಾಲಿ ಶಾಸಕ ಗೆಲುವಿನ ಅಂತರ ಕುಗ್ಗುತ್ತಲಿದೆ. ಮುಂದಿನ ಚುನಾವಣೆಯಲ್ಲಿ ಸೋಲುವುದು ಖಚಿತ. ಯಾವುದೇ ಕಾರಣಕ್ಕೂ ಮೈತಿ ನಾಯಕರು ಹತಾಶರಾಗಬಾರದು ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಹೇಳಿದರು.

ಜನವರಿ 5 ರಂದು ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ನಡೆಯಲಿದೆ. ರಾಜ್ಯದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್‌ ಸರ್ಕಾರದ ಅಧಿಕಾರ ದುರುಪಯೋಗ ಪಡಿಸಿಕೊಂಡು ಉದ್ದೇಶಪೂರ್ವಕವಾಗಿ ಕೆಲವರ ಹೆಸರು ಕೈಬಿಡಲಾಗಿದೆ. ನಮ್ಮ ನಾಯಕರು ಕೋರ್ಟ್ ಮೊರೆ ಹೋಗಿ ತಡೆಯಾಜ್ಞೆ ತರಲಿದ್ದಾರೆ. ತಡೆಯಾಜ್ಞೆ ಸಿಗದಿದ್ದರೆ ಅವಿರೋಧ ಆಯ್ಕೆಗೆ ಅವಕಾಶ ನೀಡದೆ ಚುನಾವಣೆ ಎದುರಿಸಲು ಮುಂದಾಗಬೇಕು ಎಂದರು.

ಮಾಜಿ ಶಾಸಕ ಎಂ ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ ವಿ ಮಹೇಶ, ಮಂಡಲ ಅಧ್ಯಕ್ಷ ಸಂಪಂಗ ರೆಡ್ಡಿ, ಬಿಜೆಪಿ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ಶ್ರೀನಿವಾಸ್, ಜೆಡಿಎಸ್ ಅಧ್ಯಕ್ಷ ಮುನಿರಾಜು, ಕಪಾಲಿ ಶಂಕರ್, ಮಾರ್ಕಂಡೇ ಗೌಡ, ಹನುಮಪ್ಪ , ಸೀತಾರಾಮಪ್ಪ, ಪಾರ್ಥಸಾರಥಿ, ಶ್ರೀನಿವಾಸ್ ಮೂರ್ತಿ, ರಾಮಪ್ಪ,ಬೊಪ್ಪನಹಳ್ಳಿ ನಾರಾಯಣಪ್ಪ,ಹಾಲಪ್ಪ, ಪ್ರಕಾಶ,ವಡಗೂರು ರಾಮು ,ಗುಟ್ಟಹಳ್ಳಿ ಮಂಜುನಾಥ,ದೇವರಾಜ,ಯಲ್ಲಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.