ADVERTISEMENT

ಕಲೋತ್ಸವ ಸ್ಪರ್ಧೆ: ಚಿಣ್ಣರ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 14:14 IST
Last Updated 6 ಫೆಬ್ರುವರಿ 2020, 14:14 IST
ಕೋಲಾರದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಗುರುವಾರ ಬೆಳಗಾವಿ ಜಿಲ್ಲೆಯ ಮಕ್ಕಳು ತಮ್ಮ ಪ್ರತಿಭೆ ಮೂಲಕ ಯಕ್ಷಗಾನ ಕಲೆ ಅನಾವರಣಗೊಳಿಸಿ ಗಮನ ಸೆಳೆದರು.
ಕೋಲಾರದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಗುರುವಾರ ಬೆಳಗಾವಿ ಜಿಲ್ಲೆಯ ಮಕ್ಕಳು ತಮ್ಮ ಪ್ರತಿಭೆ ಮೂಲಕ ಯಕ್ಷಗಾನ ಕಲೆ ಅನಾವರಣಗೊಳಿಸಿ ಗಮನ ಸೆಳೆದರು.   

ಕೋಲಾರ: ಜಿಲ್ಲಾ ಕೇಂದ್ರದಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಯ 2ನೇ ದಿನ ವಿವಿಧ ಜಿಲ್ಲೆಗಳ ಮಕ್ಕಳು ಜಾನಪದ, ಸಾಂಪ್ರದಾಯಿಕ ಕಲೆಗಳ ಪ್ರದರ್ಶನದ ಮೂಲಕ ಪ್ರತಿಭೆ ಅನಾವರಣಗೊಳಿಸಿದರು.

ಬುಧವಾರ ಹಾಗೂ ಗುರುವಾರ ಇಡೀ ದಿನ ನಡೆದ ವಿವಿಧ 17 ಸ್ಪರ್ಧೆಗಳಲ್ಲಿ ಚಿಣ್ಣರು ತಮ್ಮ ಪ್ರತಿಭೆ ಪ್ರದರ್ಶಿಸಿದರು. ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ಸೇರಿದಂತೆ ಎಲ್ಲಾ ಅಧಿಕಾರಿಗಳು ಸ್ಪರ್ಧೆಯ ಸ್ಥಳದಲ್ಲೇ ಹಾಜರಿದ್ದು, ಮಕ್ಕಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಟ್ಟರು.

ಬೆಳಗಾವಿ ಜಿಲ್ಲೆ ಮಕ್ಕಳ ಡೊಳ್ಳು ಕುಣಿತ, ಮಂಡ್ಯ ಜಿಲ್ಲೆಯ ಮಕ್ಕಳ ಜಾನಪದ ನೃತ್ಯದಲ್ಲಿ ಡೊಳ್ಳು ಮತ್ತು ಪೂಜಾ ನೃತ್ಯ ಮಿಳಿತಗೊಂಡು ನೋಡುಗರನ್ನು ಮಂತ್ರಮುಗ್ಧವಾಗಿಸಿತು. ಕೊಪ್ಪಳ ಜಿಲ್ಲೆಯ ಚಿಣ್ಣರು ಪ್ರದರ್ಶಿಸಿದ ಹಾಲಕ್ಕಿ ಸಮುದಾಯದ ಕಲೆ ನೋಡುಗರ ಮನಸೂರೆಗೊಂಡಿತು.

ADVERTISEMENT

ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆದ ನಾಟಕ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರರ, ಜನಪದ ಸಾಹಿತ್ಯದ, ನೈತಿಕ ಮೌಲ್ಯ ಸಾರುವ ನಾಟಕ ಪ್ರದರ್ಶಿಸಿ ಜನಮನ ಸೆಳೆದರು. ವೀರಸಿಂಧೂರ ಲಕ್ಷ್ಮಣ ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಾಣಾರ್ಪಣೆ ಮಾಡಿದ ಸಿಂಧೂರ ಲಕ್ಷ್ಮಣನ ಜೀವನ ಚರಿತ್ರೆಯನ್ನು ಮಕ್ಕಳು ಮನಮುಟ್ಟುವಂತೆ ನಾಟಕವಾಗಿ ಪ್ರದರ್ಶಿಸಿ ಗಮನ ಸೆಳೆದರು.

ಹಿಂದಿ, ಕನ್ನಡ, ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ವಿವಿಧ ಜಿಲ್ಲೆಗಳ ಮಕ್ಕಳು ನಿರರ್ಗಳವಾಗಿ ಮಾತನಾಡಿ ತೀರ್ಪುಗಾರರ ಮನಗೆದ್ದರು.ದೃಶ್ಯಕಲೆ ಸ್ಪರ್ಧೆಗಳಲ್ಲಿ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಯಕ್ಷಗಾನ, ಗ್ರಾಮೀಣ ಜನಪದ ಕಲೆ ಪ್ರದರ್ಶಿಸಿದ್ದು ಕಂಡುಬಂತು. ಬಾಗಲಕೋಟೆ ಜಿಲ್ಲೆಯ ಮಕ್ಕಳಾದ ಪ್ರಾಚಿ ಸೋನಾಮಾಲ್ಕರ್, ಪ್ರೀತಿ, ಭಾಗ್ಯಶ್ರೀ, ಪ್ರಿಯಾಂಕ ಯಕ್ಷಗಾನ ಕಲೆಯನ್ನು ಜೇಡಿ ಮಣ್ಣು, ಚಿತ್ರಕಲೆ ಮತ್ತು ಕೈಕಸುಬಿನ ಕಲೆಯಿಂದ ಅನಾವರಣಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.