ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರವಾಗಿ ನಡೆಸಿ

ಪರೀಕ್ಷಾ ನೋಡಲ್ ಅಧಿಕಾರಿಗಳಿಗೆ ಡಿಡಿಪಿಐ ರತ್ನಯ್ಯ ಸೂಚನೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2020, 17:11 IST
Last Updated 3 ಜೂನ್ 2020, 17:11 IST

ಕೋಲಾರ: ‘ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ರಕ್ಷಣೆಗೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡು ಸುಸೂತ್ರವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ರತ್ನಯ್ಯ ತಾಲ್ಲೂಕಿನ ಪರೀಕ್ಷಾ ನೋಡಲ್ ಅಧಿಕಾರಿಗಳಿಗೆ ಸೂಚಿಸಿದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಸಂಬಂಧ ಇಲ್ಲಿ ಬುಧವಾರ ನಡೆದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ತಾಲ್ಲೂಕು ನೋಡಲ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಕೊರೊನಾ ಸೋಂಕು ಹರಡುವಿಕೆ ತಡೆಗೆ ವಿದ್ಯಾರ್ಥಿಗಳಿಗೆ ಮಾಸ್ಕ್ ವಿತರಿಸಬೇಕು ಮತ್ತು ಸ್ಯಾನಿಟೈಸರ್ ಬಳಕೆ ಮಾಡಬೇಕು’ ಎಂದು ಹೇಳಿದರು.

‘ವಿದ್ಯಾರ್ಥಿಗಳಿಗೆ ಬಸ್‌ ಸೌಕರ್ಯ ಕಲ್ಪಿಸಲು ಕ್ರಿಯಾಯೋಜನೆ ಸಿದ್ಧಪಡಿಸಿ. ವಲಸೆ ವಿದ್ಯಾರ್ಥಿಗಳ ಕೇಂದ್ರವಾರು ಮಾಹಿತಿಯನ್ನು ಶಾಲೆಗಳ ಮುಖ್ಯ ಶಿಕ್ಷಕರಿಂದ ಪಡೆದು ಪರೀಕ್ಷೆಗೆ ಆಯಾ ಕೇಂದ್ರಗಳಲ್ಲಿ ಆಸನ ವ್ಯವಸ್ಥೆ ಮಾಡಬೇಕು. ಪರೀಕ್ಷಾ ಕೇಂದ್ರವನ್ನು ಪ್ರತಿನಿತ್ಯ ಸ್ಯಾನಿಟೈಸ್‌ ಮಾಡಬೇಕು’ ಎಂದು ತಿಳಿಸಿದರು.

ADVERTISEMENT

‘ಪರೀಕ್ಷಾ ಕೇಂದ್ರದ ಮುಖ್ಯದ್ವಾರದಲ್ಲಿ ಪ್ರತಿನಿತ್ಯ ವಿದ್ಯಾರ್ಥಿಗಳ ಮತ್ತು ಸಿಬ್ಬಂದಿಯ ಥರ್ಮಲ್ ಸ್ಕ್ರೀನಿಂಗ್ ಮಾಡಬೇಕು. ಕೊಠಡಿಗಳಲ್ಲಿ ಅಂತರ ಕಾಯ್ದುಕೊಳ್ಳುವಿಕೆ ಮುಖ್ಯ. ಹೊರ ರಾಜ್ಯಗಳಿಂದ ಗಡಿ ದಾಟಿ ಬರಲು ಸಾಧ್ಯವಾಗದ ವಿದ್ಯಾರ್ಥಿಗಳಿದ್ದರೆ ಮಾಹಿತಿ ಪಡೆದು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಬೇಕು’ ಎಂದರು.

ನೀರಿನ ವ್ಯವಸ್ಥೆ: ‘ಪರೀಕ್ಷಾ ಕೇಂದ್ರದಲ್ಲಿನ ಶೌಚಾಲಯಗಳನ್ನು ಪ್ರತಿನಿತ್ಯ ಸ್ವಚ್ಚಗೊಳಿಸಬೇಕು. ಮಕ್ಕಳಿಗೆ ಸಾಧ್ಯವಾದಷ್ಟು ಮನೆಯಿಂದಲೇ ಕುಡಿಯುವ ನೀರು ತರುವಂತೆ ಸಲಹೆ ನೀಡಿ. ಜತೆಗೆ ಕೇಂದ್ರದಲ್ಲೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿ’ ಎಂದು ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಸೂಚನೆ ನೀಡಿದರು.

‘ಮಂಡಳಿಯಿಂದ ಬಂದಿರುವ ಸ್ಯಾನಿಟೈಸರ್‌ಗಳನ್ನು ಪರೀಕ್ಷೆ ಆರಂಭವಾಗುವ ಮುನ್ನ ದಿನ ಕೇಂದ್ರದ ಮುಖ್ಯ ಅಧೀಕ್ಷಕರಿಗೆ ಒದಗಿಸಬೇಕು. ಪರೀಕ್ಷಾ ವೇಳಾಪಟ್ಟಿ ಬಗ್ಗೆ ಮಕ್ಕಳಿಗೆ ಸಮಗ್ರ ಮಾಹಿತಿ ನೀಡಿ. ಪರೀಕ್ಷಾ ಕೇಂದ್ರಗಳಲ್ಲಿ ವೈದ್ಯಕೀಯ ಸೌಲಭ್ಯ ಕಲ್ಪಿಸಿ. ಪರೀಕ್ಷೆ ಸಂಬಂಧ ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ’ ಎಂದು ತಿಳಿಸಿದರು.

ಬಿಇಒಗಳಾದ ಕೆ.ಎಸ್.ನಾಗರಾಜಗೌಡ, ಮಾಧವರೆಡ್ಡಿ, ಉಮಾದೇವಿ, ಗಿರಿಜೇಶ್ವರಿದೇವಿ, ಎವೈಪಿಸಿ ಸಿದ್ದೇಶ್, ಡಿಪಿಒ ಮಂಜುನಾಥ್, ವಿಷಯ ಪರಿವೀಕ್ಷಕರಾದ ಶಶಿವಧನ, ಕೃಷ್ಣಪ್ಪ, ಗಾಯತ್ರಿ, ವೆಂಕಟೇಶಪ್ಪ ಹಾಗೂ ತಾಲ್ಲೂಕು ನೋಡಲ್ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.