ADVERTISEMENT

ಗರ್ಭಿಣಿ ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ

ಅವಧಿ ಮೀರಿದ ಔಷಧ– ಮಾತ್ರೆ ಪತ್ತೆ: ಆಸ್ಪತ್ರೆಗೆ ಬೀಗಮುದ್ರೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2019, 13:00 IST
Last Updated 3 ಸೆಪ್ಟೆಂಬರ್ 2019, 13:00 IST
ಸುಧಾ
ಸುಧಾ   

ಕೋಲಾರ: ಹೆರಿಗೆಗಾಗಿ ನಗರದ ಗಣೇಶ್‌ ಹೆಲ್ತ್‌ ಕೇರ್‌ ಆಸ್ಪತ್ರೆಗೆ ದಾಖಲಾಗಿದ್ದ ಸುಧಾ (22) ಎಂಬ ಗರ್ಭಿಣಿ ಮೃತಪಟ್ಟಿದ್ದು, ಅವರ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

ತಾಲ್ಲೂಕಿನ ಮುದುವತ್ತಿ ಗ್ರಾಮದ ಸುಧಾ ಅವರನ್ನು ಸೋಮವಾರ ಗಣೇಶ್‌ ಹೆಲ್ತ್‌ ಕೇರ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಬೆಳಗಿನ ಜಾವ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣಕ್ಕೆ ವೈದ್ಯೆ ಡಾ.ಲತಾ ಚುಚ್ಚುಮದ್ದು ಕೊಟ್ಟಿದ್ದರು. ನಂತರ ಸುಧಾ ಮೃತಪಟ್ಟಿದ್ದಾರೆ. ಅವರು ಆಸ್ಪತ್ರೆಗೆ ಬರುವುದಕ್ಕೂ ಮುನ್ನವೇ ಮಗು ಹೊಟ್ಟೆಯಲ್ಲೇ ಮೃತಪಟ್ಟಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

‘ವೈದ್ಯೆ ಲತಾ ಅವರು ಅವಧಿ ಮೀರಿದ ಚುಚ್ಚುಮುದ್ದು ನೀಡಿದ ಕಾರಣದಿಂದ ಪತ್ನಿ ಮೃತಪಟ್ಟಿದ್ದಾರೆ. ಮಗು ಸಹ ಹೊಟ್ಟೆಯಲ್ಲೇ ಮೃತಪಟ್ಟಿದೆ. ಪತ್ನಿ ಹಾಗೂ ಮಗುವಿನ ಸಾವಿಗೆ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯವೇ ಕಾರಣ’ ಎಂದು ಆರೋಪಿಸಿ ಸುಧಾ ಅವರ ಪತಿ ವೆಂಕಟರಾಮ್‌ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ADVERTISEMENT

ವೈದ್ಯೆ ಲತಾ ಹಾಗೂ ಆಸ್ಪತ್ರೆ ಸಿಬ್ಬಂದಿಯನ್ನು ಬಂಧಿಸುವವರೆಗೂ ಶವ ತೆಗೆದುಕೊಳ್ಳುವುದಿಲ್ಲ ಎಂದು ಪಟ್ಟು ಹಿಡಿದ ಮೃತರ ಸಂಬಂಧಿಕರು ಆಸ್ಪತ್ರೆ ಎದುರು ಧರಣಿ ನಡೆಸಿದರು. ಬಳಿಕ ಪೊಲೀಸರು ಶಿಸ್ತುಕ್ರಮದ ಭರವಸೆ ನೀಡಿ ಧರಣಿನಿರತರ ಮನವೊಲಿಸಿದರು. ನಂತರ ಶ್ರೀ ನರಸಿಂಹರಾಜ ಜಿಲ್ಲಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬ ಸದಸ್ಯರಿಗೆ ಶವ ಹಸ್ತಾಂತರಿಸಲಾಯಿತು.

‘ಸುಧಾ ಅವರ ರಕ್ತದೊತ್ತಡ ಪ್ರಮಾಣ ತುಂಬಾ ಕಡಿಮೆಯಿತ್ತು. ಮಗು ಹೊಟ್ಟೆಯಲ್ಲೇ ಮೃತಪಟ್ಟಿದ್ದರಿಂದ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯಲು ವೈದ್ಯರು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಅಷ್ಟರಲ್ಲೇ ಸುಧಾ ಮೃತಪಟ್ಟರು. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಅವರ ಸಾವಿನ ಕಾರಣ ಗೊತ್ತಾಗಲಿದೆ’ ಎಂದು ಆಸ್ಪತ್ರೆ ಮಾಲೀಕ ಡಾ.ಗಣೇಶ್‌ ಸುದ್ದಿಗಾರರಿಗೆ ತಿಳಿಸಿದರು.

ಬೀಗಮುದ್ರೆ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎನ್.ವಿಜಯ್‌ಕುಮಾರ್‌, ಔಷಧ ನಿಯಂತ್ರಣ ಇಲಾಖೆ ಅಧಿಕಾರಿಗಳು ಆಸ್ಪತ್ರೆ ಹಾಗೂ ಆಸ್ಪತ್ರೆಯ ಔಷಧ ಮಾರಾಟ ಮಳಿಗೆಯಲ್ಲಿ ಪರಿಶೀಲನೆ ಮಾಡಿದಾಗ ಅವಧಿ ಮೀರಿದ ಔಷಧ, ಮಾತ್ರೆ ಮಾರುತ್ತಿರುವುದು ಪತ್ತೆಯಾಯಿತು. ಹೀಗಾಗಿ ಅಧಿಕಾರಿಗಳು ಆಸ್ಪತ್ರೆಗೆ ಬೀಗಮುದ್ರೆ ಹಾಕಿದರು.

‘ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆಯಡಿ ಗಣೇಶ್‌ ಹೆಲ್ತ್‌ ಕೇರ್‌ ಆಸ್ಪತ್ರೆ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಆಸ್ಪತ್ರೆಗೆ ಬೀಗಮುದ್ರೆ ಹಾಕಿದ್ದು, ಆಸ್ಪತ್ರೆಯಲ್ಲಿದ್ದ 15ಕ್ಕೂ ಹೆಚ್ಚು ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ’ ಎಂದು ವಿಜಯ್‌ಕುಮಾರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.