ADVERTISEMENT

ಎಸ್ಸೆಸ್ಸೆಲ್ಸಿ ಪರೀಕ್ಷೆ: ಮಕ್ಕಳನ್ನು ಸಿದ್ಧಗೊಳಿಸಿ

ಸಭೆಯಲ್ಲಿ ಮುಖ್ಯ ಶಿಕ್ಷಕರಿಗೆ ಡಿಡಿಪಿಐ ಕೃಷ್ಣಮೂರ್ತಿ ಸೂಚನೆ‌

​ಪ್ರಜಾವಾಣಿ ವಾರ್ತೆ
Published 10 ಜೂನ್ 2021, 17:55 IST
Last Updated 10 ಜೂನ್ 2021, 17:55 IST

ಕೋಲಾರ: ‘ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಶಿಕ್ಷಣ ಸಚಿವರು ನಿರ್ಧರಿಸಿದ್ದು, ಅದಕ್ಕೆ ತಕ್ಕಂತೆ ಹೊಸ ಮಾದರಿ ಪ್ರಶ್ನೆಪತ್ರಿಕೆ ಬಗ್ಗೆ ಮಕ್ಕಳಿಗೆ ಮಾರ್ಗದರ್ಶನ ನೀಡಿ ಪರೀಕ್ಷೆಗೆ ಸಿದ್ಧಗೊಳಿಸಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣಮೂರ್ತಿ ಮುಖ್ಯ ಶಿಕ್ಷಕರಿಗೆ ಸೂಚಿಸಿದರು.

ಜಿಲ್ಲೆಯ ಮುಳಬಾಗಿಲು ಮತ್ತು ಕೋಲಾರ ತಾಲ್ಲೂಕಿನ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಜತೆ ಇಲ್ಲಿ ಬುಧವಾರ ನಡೆದ ಆನ್‌ಲೈನ್‌ ಸಭೆಯಲ್ಲಿ ಮಾತನಾಡಿ, ‘ಇಲಾಖೆ ಪರೀಕ್ಷೆ ನಡೆಸಲು ಎಲ್ಲಾ ಸಿದ್ಧತೆ ಮಾಡುತ್ತಿದೆ. ಈಗಾಗಲೇ ಪರೀಕ್ಷಾ ಕೇಂದ್ರಗಳ ಪುನರ್‌ರಚನೆಗೆ ಆದೇಶ ನೀಡಲಾಗಿದೆ’ ಎಂದು ತಿಳಿಸಿದರು.

‘20 ದಿನ ಮುಂಚಿತವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ದಿನಾಂಕ ತಿಳಿಸಲಾಗುವುದು. ವಿದ್ಯಾರ್ಥಿಗಳೊಂದಿಗೆ ಆನ್‌ಲೈನ್‌ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಸಂಪರ್ಕದಲ್ಲಿದ್ದು ಕಲಿಕೆ ಬಗ್ಗೆ ಗಮನ ಹರಿಸಬೇಕು. ಈ ಹಿಂದೆ ಇದ್ದ ಪರೀಕ್ಷೆ ಬಗ್ಗೆ ಮಕ್ಕಳಿಗೆ ಅರಿವಿತ್ತು. ಆದರೆ, ಕೋವಿಡ್‌ ಹಿನ್ನೆಲೆಯಲ್ಲಿ ಪರೀಕ್ಷಾ ವಿಧಾನವೇ ಬದಲಾಗಿದೆ. ಕೇವಲ 2 ದಿನದಲ್ಲಿ ಪರೀಕ್ಷೆ ಮುಗಿಯಲಿದೆ. 120 ಅಂಕಗಳ 2 ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಮಕ್ಕಳು ಪರೀಕ್ಷೆ ಬರೆಯಬೇಕಾಗುತ್ತದೆ’ ಎಂದು ವಿವರಿಸಿದರು.

ADVERTISEMENT

‘ಭಾಷಾ ವಿಷಯಗಳು ಹಾಗೂ ಕೋರ್ ವಿಷಯಗಳಿಗೆ ಸಂಬಂಧಿಸಿದಂತೆ 2 ಹಂತದಲ್ಲಿ ಪರೀಕ್ಷೆ ನಡೆಯಲಿದೆ. ಪ್ರಥಮ ಭಾಷೆ, ದ್ವಿತೀಯ ಭಾಷೆ ಹಾಗೂ ತೃತೀಯ ಭಾಷೆಗೆ ತಲಾ 40 ಅಂಕಗಳಂತೆ ಒಟ್ಟು 120 ಅಂಕಗಳ ಒಂದು ಪರೀಕ್ಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದಂತೆ 40 ಅಂಕಗಳಿಗೆ ಒಟ್ಟು 120 ಅಂಕಗಳ ಪರೀಕ್ಷೆ ನಡೆಸಲಾಗುವುದು’ ಎಂದು ಮಾಹಿತಿ ನೀಡಿದರು.

‘ಪ್ರಶ್ನೆಪತ್ರಿಕೆ ವಿನ್ಯಾಸ ಹಾಗೂ ಪರೀಕ್ಷಾ ಪದ್ಧತಿ ಬಗ್ಗೆ ವಿದ್ಯಾರ್ಥಿಗಳಿಗೆ ದೂರವಾಣಿ ಮೂಲಕ ಮಾರ್ಗದರ್ಶನ ನೀಡಿ. ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಅಭ್ಯಾಸ ಮಾಡುವಂತೆ ಹೇಳಿ. ನಿರಂತರವಾಗಿ ಮಕ್ಕಳ ಸಂಪರ್ಕದಲ್ಲಿರಿ. 8 ಮತ್ತು 9ನೇ ತರಗತಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳ ಮೌಲ್ಯಾಂಕವನ್ನು ಎಸ್‍ಎಟಿಎಸ್‌ನಲ್ಲಿ ದಾಖಲು ಮಾಡುವುದು ಕಡ್ಡಾಯ. 2021–22ನೇ ಸಾಲಿಗೆ ಸೇತುಬಂಧ ಕಾರ್ಯಕ್ರಮ ನಡೆಸಲು ಸಿದ್ಧತೆ ನಡೆಸಿ’ ಎಂದು ಸೂಚಿಸಿದರು.

ಲಸಿಕೆ ಪಡೆಯಿರಿ: ‘ಮುಖ್ಯ ಶಿಕ್ಷಕರು, ಶಿಕ್ಷಕರು ಪೋಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಝೂಮ್ ಸಭೆ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿ ಪರೀಕ್ಷಾ ಸಿದ್ಧತೆ ಹಾಗೂ ಬದಲಾದ ಪರೀಕ್ಷಾ ವ್ಯವಸ್ಥೆ ಬಗ್ಗೆ ಮಾರ್ಗದರ್ಶನ ನೀಡಿ. ಪರೀಕ್ಷಾ ಕಾರ್ಯಕ್ಕೆ ನಿಯೋಜನೆಗೊಳ್ಳುವ ಶಿಕ್ಷಕರು ಕಡ್ಡಾಯವಾಗಿ ಕೋವಿಡ್ ಲಸಿಕೆ ಪಡೆಯಬೇಕು’ ಎಂದು ಎಸ್ಸೆಸ್ಸೆಲ್ಸಿ ಜಿಲ್ಲಾ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ತಿಳಿಸಿದರು.

‘ಕ್ಷೇತ್ರ ಶಿಕ್ಷಣಾಧಿಕಾರಿಗಳು ಪರೀಕ್ಷಾ ಕೇಂದ್ರಗಳನ್ನು ಮರು ಪರಿಶೀಲನೆ ಮಾಡಿ ಒಂದು ಕೊಠಡಿಗೆ 10ರಿಂದ 12 ಆಸನಗಳ ವ್ಯವಸ್ಥೆ ಮಾಡಿ. ಪರೀಕ್ಷಾ ಕೇಂದ್ರಗಳಲ್ಲಿ ಮೂಲಸೌಕರ್ಯಗಳು ಲಭ್ಯವಿರುವಂತೆ ಸಿದ್ಧತೆ ಮಾಡಿ. ಕೋವಿಡ್ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಪಾಲಿಸಲು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.