ADVERTISEMENT

ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಿ

ತರಬೇತಿಯಲ್ಲಿ ಬಿಎಲ್‌ಒಗಳಿಗೆ ಉಪ ವಿಭಾಗಾಧಿಕಾರಿ ಸೋಮಶೇಖರ್‌ ಕಿವಿಮಾತು

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 14:56 IST
Last Updated 9 ಸೆಪ್ಟೆಂಬರ್ 2019, 14:56 IST
ಬೂತ್ ಮಟ್ಟದ ಅಧಿಕಾರಿಗಳಿಗೆ ಕೋಲಾರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಉಪ ವಿಭಾಗಾಧಿಕಾರಿ ಸೋಮಶೇಖರ್ ಮಾತನಾಡಿದರು.
ಬೂತ್ ಮಟ್ಟದ ಅಧಿಕಾರಿಗಳಿಗೆ ಕೋಲಾರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಉಪ ವಿಭಾಗಾಧಿಕಾರಿ ಸೋಮಶೇಖರ್ ಮಾತನಾಡಿದರು.   

ಕೋಲಾರ: ‘ಬೂತ್‌ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಿದಾಗ ಮಾತ್ರ ಚುನಾವಣೆಗಳನ್ನು ಸುಸೂತ್ರವಾಗಿ ನಡೆಸಲು ಸಾಧ್ಯ’ ಎಂದು ಉಪ ವಿಭಾಗಾಧಿಕಾರಿ ಸೋಮಶೇಖರ್ ಕಿವಿಮಾತು ಹೇಳಿದರು.

ಜಿಲ್ಲಾ ಚುನಾವಣೆ ಶಾಖೆಯು ಬೂತ್ ಮಟ್ಟದ ಅಧಿಕಾರಿಗಳಿಗೆ ಇಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ಮತದಾರರ ಪಟ್ಟಿಯಲ್ಲಿನ ಲೋಪದಿಂದ ಅನೇಕ ಮಂದಿ ಮತದಾನ ಹಕ್ಕಿನಿಂದ ವಂಚಿತರಾಗಿದ್ದಾರೆ. ಇದು ಮತದಾನದ ಪರಿಣಾಮ ಬೀರುತ್ತದೆ’ ಎಂದು ತಿಳಿಸಿದರು.

‘ಮತದಾರರ ಪಟ್ಟಿ ಪರಿಷ್ಕರಣೆಯು ನಿರಂತರ ಪ್ರಕ್ರಿಯೆ. ಬೂತ್ ಮಟ್ಟದ ಅಧಿಕಾರಿಗಳು ಕಾಳಜಿ ವಹಿಸಿ ದೋಷರಹಿತ ಮತದಾರರ ಪಟ್ಟಿ ಸಿದ್ಧಪಡಿಸಬೇಕು. ಆಕ್ಷೇಪಣೆ ಇದ್ದಲ್ಲಿ ಸ್ಥಳದಲ್ಲೇ ಪರಿಶೀಲಿಸಿ ಬಗೆಹರಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಸ್ಥಳೀಯ ಸಂಸ್ಥೆ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಗ್ರಾಮ ಪಂಚಾಯಿತಿ, ವಿಧಾನಸಭೆ, ಲೋಕಸಭೆ ಹೀಗೆ ಒಂದಲ್ಲಾ ಒಂದು ಸಾರ್ವತ್ರಿಕ ಚುನಾವಣೆ ಎದುರಾಗುತ್ತಲೇ ಇರುತ್ತವೆ. ಹೀಗಾಗಿ ದೋಷರಹಿತ ಮತದಾರರ ಪಟ್ಟಿ ಸಿದ್ಧವಾಗಿರಬೇಕು. ಈ ದಿಸೆಯಲ್ಲಿ ಅ.15ರವರೆಗೆ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಸಲಾಗುತ್ತಿದೆ’ ಎಂದು ವಿವರಿಸಿದರು.

ಆಧಾರ ಸ್ತಂಭ: ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವತ್ರಿಕ ಚುನಾವಣೆ ಮೂಲಕ ಅಧಿಕಾರ ಸುಸೂತ್ರವಾಗಿ ಬದಲಾಗುತ್ತದೆ. ಮತದಾರರ ಪಟ್ಟಿಯು ಚುನಾವಣೆಯ ಆಧಾರ ಸ್ತಂಭ. ಚುನಾವಣೆಯ ಯಶಸ್ಸು ದೋಷರಹಿತ ಮತದಾರರ ಪಟ್ಟಿಯನ್ನು ಅವಲಂಬಿಸಿದೆ. ಅರ್ಹ ಮತದಾರರ ಹೆಸರು ಪಟ್ಟಿಯಿಂದ ಕೈಬಿಟ್ಟು ಹೋಗಬಾರದು. ಬಿಎಲ್‍ಒಗಳು ಮನೆ ಮನೆಗೆ ತೆರಳಿ ಹೊಸ ಮತದಾರರ ಸೇರ್ಪಡೆ, ಹೆಸರು ತಿದ್ದುಪಡಿ, ಮರಣ ಹೊಂದಿರುವವರ ಹೆಸರು ತೆಗೆಯುವ ಕೆಲಸವನ್ನು ಜವಾಬ್ದಾರಿಯಿಂದ ಮಾಡಬೇಕು’ ಎಂದು ಸೂಚಿಸಿದರು.

‘ಮೊಬೈಲ್‌ ಆ್ಯಪ್ ಮೂಲಕ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಮತ್ತು ಬದಲಾವಣೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯಲ್ಲಿ 116 ಸಾಮಾನ್ಯ ಸೇವಾ ಕೇಂದ್ರ ತೆರೆಯಲಾಗಿದೆ. ಮತದಾರರು ಈ ಕೇಂದ್ರಗಳಲ್ಲೂ ನೋಂದಣಿ ಮಾಡಿಕೊಳ್ಳಬಹುದು. ಮೂರ್ನಾಲ್ಕು ದಿನದಲ್ಲಿ ಬಿಎಲ್‍ಒಗಳಿಗೂ ಆ್ಯಪ್ ಬಿಡುಗಡೆಯಾಗಲಿದೆ. ಈ ಆ್ಯಪ್‌ ಬಳಸಿಕೊಂಡು ತಂತ್ರಾಂಶದಲ್ಲೇ ಮತದಾರರ ನೋಂದಣಿ, ಹೆಸರು ತಿದ್ದುಪಡಿ ಪ್ರಕ್ರಿಯೆ ನಡೆಸಬಹುದು’ ಎಂದು ವಿವರಿಸಿದರು.

ಲೋಪವಾದರೆ ತೊಂದರೆ: ‘ಮತದಾರರ ಅರ್ಜಿಗಳನ್ನು ಆನ್‌ಲೈನ್‌ಗೆ ದಾಖಲು ಮಾಡುವುದು ವಿಳಂಬವಾಗುತ್ತಿದೆ. ಬಿಎಲ್‍ಒಗಳು ಆಸಕ್ತಿಯಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಚುನಾವಣಾ ಕರ್ತವ್ಯದಲ್ಲಿ ಲೋಪ ಎಸಗಿದರೆ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಮಟ್ಟದ ತರಬೇತುದಾರು ಮಂಜುನಾಯಕ್‌ ಪ್ರಾತ್ಯಕ್ಷಿಕೆ ಬಿಎಲ್‍ಒಗಳಿಗೆ ತರಬೇತಿ ನೀಡಿದರು. ತಹಶೀಲ್ದಾರ್ ನಾಗವೇಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.