ADVERTISEMENT

ಪ್ರಧಾನಿ ಮೋದಿ ಬಂಡವಾಳಶಾಹಿಗಳ ಕೈಗೊಂಬೆ: ಪ್ರಕಾಶ್ ಗುಡುಗು

ಕಾರ್ಮಿಕರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 1 ಮೇ 2019, 14:44 IST
Last Updated 1 ಮೇ 2019, 14:44 IST
ಕೋಲಾರದಲ್ಲಿ ಬುಧವಾರ ನಡೆದ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಪ್ರಕಾಶ್ ಮಾತನಾಡಿದರು.
ಕೋಲಾರದಲ್ಲಿ ಬುಧವಾರ ನಡೆದ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಪ್ರಕಾಶ್ ಮಾತನಾಡಿದರು.   

ಕೋಲಾರ: ‘ಕಾರ್ಮಿಕರ ಪರವಾದ ಕಾನೂನು ರೂಪುಗೊಳ್ಳಲು ಬಂಡವಾಳಶಾಹಿಗಳ ಕೈಗೊಂಬೆಯಾಗಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರವನ್ನು ಬಗ್ಗು ಬಡಿಯಬೇಕು’ ಎಂದು ಸಿಐಟಿಯು ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಪ್ರಕಾಶ್ ಅಭಿಪ್ರಾಯಪಟ್ಟರು.

ಸಿಐಟಿಯು ವತಿಯಿಂದ ಇಲ್ಲಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿ, ‘ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಕಾರ್ಮಿಕರಿಗಾಗಿ ರಚಿತವಾದ ಕಾನೂನುಗಳನ್ನು ಕೈಬಿಟ್ಟು 4 ಕಾರ್ಮಿಕ ಸಂಹಿತೆ ಜಾರಿಗೆ ತರಲು ಹೊರಟಿದೆ’ ಎಂದು ಕಿಡಿಕಾರಿದರು.

‘ಸಂಬಳಕ್ಕಾಗಿ ಶ್ರಮ ಮಾರಿಕೊಳ್ಳುವ ಎಲ್ಲರೂ ಕಾರ್ಮಿಕರೇ ಎಂಬುದನ್ನು ಪ್ರತಿಯೊಬ್ಬರೂ ಮನಗಾಣಬೇಕು. ಕಾರ್ಮಿಕರ ಹಿತರಕ್ಷಣೆ ಹಾಗೂ ಕಾನೂನುಗಳ ಉಳಿವಿಗಾಗಿ ಮುಂದೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಸರ್ಕಾರದ ವಿರುದ್ಧ ಐಕ್ಯ ಹೋರಾಟ ನಡೆಸಬೇಕು’ ಎಂದು ಕಿವಿಮಾತು ಹೇಳಿದರು.

ADVERTISEMENT

‘ವಿಶ್ವ ಕಾರ್ಮಿಕರ ದಿನಾಚರಣೆಗೆ 129 ವರ್ಷ ಸಂದಿದೆ. 1886ರ ಮೇ 1ರಂದು ಅಮೆರಿಕದಲ್ಲಿ ವಿವಿಧ ಕ್ಷೇತ್ರಗಳ ಕಾರ್ಮಿಕರು ದಿನಕ್ಕೆ 8 ತಾಸು ಕೆಲಸದ ಅವಧಿಯ ಕಾನೂನು ರೂಪಿಸುವಂತೆ ಒತ್ತಾಯಿಸಿ ಹೋರಾಟ ನಡೆಸಿದ್ದರು. ಅವರ ಮೇಲೆ ಮೇ 4ರಂದು ಗೋಲಿಬಾರ್ ನಡೆದು ಅನೇಕರು ಮೃತಪಟ್ಟರು. ಮತ್ತೆ ಕೆಲವರನ್ನು ಬಂಧಿಸಲಾಯಿತು. 8 ಜನರಿಗೆ ನ್ಯಾಯಾಲಯ ಮರಣದಂಡನೆ ವಿಧಿಸಿತ್ತು. ಆ 8 ಮಂದಿಯಲ್ಲಿ ಮೂವರು ಖುಲಾಸೆಯಾದರು. ಒಬ್ಬರು ಜೈಲಿನಲ್ಲಿ ಮೃತಪಟ್ಟರು ಹಾಗೂ 4 ಮಂದಿಯನ್ನು ನೇಣಿಗೇರಿಸಲಾಯಿತು’ ಎಂದು ವಿವರಿಸಿದರು.

‘1889ರ ಮೇ 1ರಂದು ಫ್ರಾನ್ಸ್‌ನಲ್ಲಿ ಕಾರ್ಮಿಕರ ನೆನಪಿನಲ್ಲಿ ದಿನಾಚರಣೆ ಆರಂಭಿಸಲಾಯಿತು. 1890ರಲ್ಲಿ ಜಗತ್ತಿನಲ್ಲೆಡೆ ಕಾರ್ಮಿಕರ ದಿನಾಚರಣೆಗೆ ಚಾಲನೆ ಸಿಕ್ಕಿತು. 1923ರಲ್ಲಿ ಮೊದಲ ಬಾರಿಗೆ ಮದ್ರಾಸ್ ಕಾರ್ಮಿಕರ ಸಂಘವು ಕಾರ್ಮಿಕರ ದಿನ ಆಚರಿಸಿತು. ರಾಜ್ಯದಲ್ಲಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಸರ್ಕಾರದ ಅವಧಿಯಲ್ಲಿ ಕಾರ್ಮಿಕರ ದಿನಾಚರಣೆಗೆ ಸರ್ಕಾರಿ ರಜೆ ಘೋಷಿಸಲಾಯಿತು’ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಮೊದಲು: ‘ರಾಜ್ಯದ ಭದ್ರಾವತಿಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ 1941ರಲ್ಲಿ ಕಾರ್ಮಿಕ ಸಂಘಟನೆ ವತಿಯಿಂದ ಮೊದಲ ಬಾರಿಗೆ ಕಾರ್ಮಿಕರ ದಿನ ಆಚರಿಸಲಾಯಿತು. ಆಗ ಮೈಸೂರು ಮಹಾರಾಜರ ಆಳ್ವಿಕೆಯಲ್ಲೂ ಗೋಲಿಬಾರ್ ನಡೆದು ಇಬ್ಬರು ಕಾರ್ಮಿಕರು ಮತ್ತು ಒಂದು ಮಗು ಮೃತಪಟ್ಟಿತ್ತು’ ಎಂದರು.

‘ಜಿಲ್ಲೆಯ ಕೆಜಿಎಫ್‌ನ ಚಿನ್ನದ ಗಣಿ ಕಾರ್ಮಿಕರು ಸಹ ದಿನಕ್ಕೆ 16 ತಾಸು ಕೆಲಸ ಮಾಡಲು ಸಾಧ್ಯವಾಗದೆ ತಪ್ಪಿಸಿಕೊಂಡು ಹೋಗುತ್ತಿದ್ದರು. ಇದನ್ನು ತಡೆಯಲು ಕಾರ್ಮಿಕರ ಕೈಗೆ ಕಬ್ಬಿಣದ ಕೋಳ ಹಾಕಲಾಗಿತ್ತು. ಕಾರ್ಮಿಕರು ಎಲ್ಲೇ ತಪ್ಪಿಸಿಕೊಂಡು ಹೋದರೂ ಹುಡುಕಿ ಮತ್ತೆ ಎಳೆದುಕೊಂಡು ಬರಲಾಗುತ್ತಿತ್ತು. ಇದರ ವಿರುದ್ಧ ನಡೆದ ಹೋರಾಟದಲ್ಲಿ 6 ಕಾರ್ಮಿಕರು ಹುತಾತ್ಮರಾದರು’ ಎಂದು ಸ್ಮರಿಸಿದರು.

ಗುತ್ತಿಗೆ ಪದ್ಧತಿಗಿಂತ ಹೀನಾಯ: ‘ಮೋದಿ ನೇತೃತ್ವದ ಸರ್ಕಾರ ಕಾರ್ಮಿಕ ಕಾಯಿದೆಗಳಿಗೆ ತಿದ್ದುಪಡಿ ತಂದು 4 ಕಾರ್ಮಿಕ ಸಂಹಿತೆ ರೂಪಿಸಲು ಹೊರಟಿದೆ. ಅಲ್ಲದೇ, ಗುತ್ತಿಗೆ ಪದ್ಧತಿಗಿಂತಲೂ ಹೀನಾಯವಾಗಿರುವ ನಿಗದಿತ ಅವಧಿಯ ಉದ್ಯೋಗ (ಎಫ್‌ಟಿಇ) ಅನುಷ್ಠಾನಗೊಳಿಸಿದೆ. ಇದರಡಿ ಉದ್ಯೋಗಿಗೆ ಭವಿಷ್ಯ ನಿಧಿ, ಇಎಸ್‍ಐ, ಗ್ರಾಚ್ಯೂಟಿ, ಬೋನಸ್ ಸೌಲಭ್ಯವಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಕೇಂದ್ರವು ಕನಿಷ್ಠ ವೇತನ ನೀಡಿಕೆ ಹಾಗೂ 1969ರ ಅಪ್ರೆಂಟಿಶಿಪ್‌ ಕಾಯಿದೆ ಮಾರ್ಪಡಿಸಿ ನೀಮ್ (ನ್ಯಾಷನಲ್ ಎಂಪ್ಲಾಯಿಮೆಂಟ್ ಎನಾನ್ಸ್‌ಮೆಂಟ್‌ ಮಿಷನ್‌) ಜಾರಿಗೊಳಿಸಿದೆ. ಕೈಗಾರಿಕೆಗಳಲ್ಲಿ ತರಬೇತಿ ಹೆಸರಿನಲ್ಲಿ ಅಭ್ಯರ್ಥಿಗೆ ಕಡಿಮೆ ಸಂಬಳ ನೀಡಿ ಪೂರ್ಣ ಪ್ರಮಾಣದ ಉತ್ಪಾದನೆಯಲ್ಲಿ ತೊಡಗಿಸಿ ಬಂಡವಾಳಶಾಹಿಗಳಿಗೆ ಲಾಭ ಮಾಡಿ ಕೊಡುತ್ತಿದೆ’ ಎಂದು ಟೀಕಿಸಿದರು.

ಬಾಂಬ್‌ ಎಸೆದಿದ್ದರು: ‘ದೇಶದಲ್ಲಿ ಬ್ರಿಟೀಷ್ ಸರ್ಕಾರ ಸಾರ್ವಜನಿಕ ಸುರಕ್ಷತಾ ಮಸೂದೆ ಮತ್ತು ಕಾರ್ಮಿಕ ವಿವಾದ ವಸೂದೆ ಜಾರಿಗೆ ತರಲು ಮುಂದಾದಾಗ ಅದರ ವಿರುದ್ಧ ನಡೆದ ಹೋರಾಟದ ಭಾಗವಾಗಿ ಭಗತ್‌ಸಿಂಗ್‌ ಸಂಸತ್‌ ಮೇಲೆ ಬಾಂಬ್‌ ಎಸೆದಿದ್ದರು. ಭಗತ್‌ಸಿಂಗ್‌ ಕಾರ್ಮಿಕರ ಪರವಾಗಿ ಹೋರಾಟ ನಡೆಸಿದ್ದರೆಂಬ ಸಂಗತಿ ಸಾಕಷ್ಟು ಮಂದಿಗೆ ತಿಳಿದಿಲ್ಲ. ಭಗತ್‌ಸಿಂಗ್‌ರನ್ನು ನೇಣಿಗೇರಿಸಿದ್ದಕ್ಕೆ ಅವರ ಕಾರ್ಮಿಕರ ಪರ ನಿಲುವು ಸಹ ಕಾರಣವಾಗಿತ್ತು’ ಎಂದು ಸ್ಮರಿಸಿದರು.

‘ಕಾರ್ಮಿಕರ ಕಾನೂನುಗಳನ್ನು ಪೂರ್ತಿಯಾಗಿ ಕಿತ್ತೆಸೆದು ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಬಂಡವಾಳಶಾಹಿಗಳ ಪರವಾದ ಕಾನೂನು ಜಾರಿಗೆ ತರಲು ಹೊರಟಿರುವ ಮೋದಿ ದೇಶ ಪ್ರೇಮಿಯೇ ಅಥವಾ ಕಾರ್ಮಿಕರ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸುತ್ತಿರುವ ಭಗತ್‌ಸಿಂಗ್‌ ಪರಂಪರೆಯ ಕಾರ್ಮಿಕ ಮುಖಂಡರು ದೇಶಪ್ರೇಮಿಗಳೋ?’ ಎಂದು ಪ್ರಶ್ನಿಸಿದರು.

ಬಗ್ಗು ಬಡಿಯಬೇಕು: ‘ದೇಶದಲ್ಲಿ 47 ಕೋಟಿ ಕಾರ್ಮಿಕರ ಪೈಕಿ 3 ಕೋಟಿ ಮಂದಿ ಸಂಘಟಿತ ವಲಯದಲ್ಲಿದ್ದಾರೆ. ಉಳಿದ 44 ಕೋಟಿ ಮಂದಿ ಅಸಂಘಟಿತ ಕಾರ್ಮಿಕರಿದ್ದಾರೆ. ಈ ವರ್ಗದವರ ಪರವಾಗಿ ಕಾರ್ಮಿಕ ಕಾನೂನು ರೂಪುಗೊಳ್ಳಲು ಬಂಡವಾಳಶಾಹಿಗಳ ಪರವಾದ ಸರ್ಕಾರವನ್ನು ಬಗ್ಗು ಬಡಿಯಬೇಕು. ಕಾರ್ಮಿಕ ವಿರೋಧಿ ನೀತಿ ಜಾರಿಗೊಳಿಸುತ್ತಿರುವ ಮೋದಿ ಅವರಿಗೆ ಕಾರ್ಮಿಕ ವರ್ಗದ ಮೇಲೆ ಕಾಳಜಿಯಿಲ್ಲ’ ಎಂದು ಗುಡುಗಿದರು.

ದಲ್ಲಾಳಿಗಳಂತೆ ಕೆಲಸ: ‘ಕಾರ್ಮಿಕ ದಿನಾಚರಣೆ ಹಿಂದಿರುವ ತ್ಯಾಗ ಬಲಿದಾನ ನೆನೆಯದೆ ಕ್ರಿಯಾ ವಿಧಿವಿಧಾನದ ರೀತಿ ಆಚರಿಸುವ ಸ್ಥಿತಿಗೆ ತಲುಪಿರುವ ಶ್ರಮಿಕ ವರ್ಗ ಕ್ರಿಯಾಶೀಲತೆ ಕಳೆದುಕೊಳ್ಳುತ್ತಿದೆಯೇ ಎಂಬ ಆತಂಕ ಶುರುವಾಗಿದೆ. ಕಾರ್ಮಿಕರ ಪರವಾಗಿ ನಿಲ್ಲಬೇಕಾದ ಕಾರ್ಮಿಕ ಇಲಾಖೆ ಹಾಗೂ ಸರ್ಕಾರವು ದಲ್ಲಾಳಿಗಳ ರೀತಿ ಕೆಲಸ ಮಾಡುತ್ತಿವೆ’ ಎಂದು ಸಿಪಿಎಂ ಜಿಲ್ಲಾ ಘಟಕದ ಕಾರ್ಯದರ್ಶಿ ಮಂಡಳಿ ಸದಸ್ಯ ಗಾಂಧಿನಗರ ನಾರಾಯಣಸ್ವಾಮಿ ಕಳವಳ ವ್ಯಕ್ತಪಡಿಸಿದರು.

ಸಿಐಟಿಯು ತಾಲ್ಲೂಕು ಘಟಕದ ಅಧ್ಯಕ್ಷೆ ವೆಂಕಟಲಕ್ಷ್ಮಿ, ಜಿಲ್ಲಾ ಅಂಗನವಾಡಿ ನೌಕರರ ಸಂಘದ (ಸಿಐಟಿಯು ಸಂಯೋಜಿತ) ಅಧ್ಯಕ್ಷೆ ಮುನಿರಾಜಮ್ಮ, ತಾಲ್ಲೂಕು ಘಟಕದ ಅಧ್ಯಕ್ಷೆ ಕಲ್ಪನಾ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.