ADVERTISEMENT

ಸ್ವಉದ್ಯೋಗಕ್ಕೆ ಉತ್ತೇಜನ ನೀಡಿ

ನಬಾರ್ಡ್‌ ಸಹಾಯಕ ಪ್ರಧಾನ ವ್ಯವಸ್ಥಾಪಕ ನಟರಾಜನ್ ಸಲಹೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 13:29 IST
Last Updated 7 ಜನವರಿ 2020, 13:29 IST
ಕೋಲಾರದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಜೋಡಿಪುರದ ಮಹಾಲಕ್ಷ್ಮಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ತಯಾರಿಸಿರುವ ಆಹಾರ ಪದಾರ್ಥಗಳ ಮಾಹಿತಿ ನೀಡಲಾಯಿತು.
ಕೋಲಾರದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಜೋಡಿಪುರದ ಮಹಾಲಕ್ಷ್ಮಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ತಯಾರಿಸಿರುವ ಆಹಾರ ಪದಾರ್ಥಗಳ ಮಾಹಿತಿ ನೀಡಲಾಯಿತು.   

ಕೋಲಾರ: ‘ಡಿಸಿಸಿ ಬ್ಯಾಂಕ್ ಹಾಗೂ ವಿವಿಧ ಇಲಾಖೆ ಮೂಲಕ ಸ್ವಸಹಾಯ ಗುಂಪುಗಳಿಗೆ ಸ್ವಉದ್ಯೋಗ ಕೈಗೊಳ್ಳಲು ಉತ್ತೇಜನ ನೀಡಿದರೆ ಕಾಯಕ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತದೆ’ ಎಂದು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‌ (ನಬಾರ್ಡ್‌) ಸಹಾಯಕ ಪ್ರಧಾನ ವ್ಯವಸ್ಥಾಪಕ ನಟರಾಜನ್ ತಿಳಿಸಿದರು.

ಇಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಬ್ಯಾಂಕ್‌ ಎಂದರೆ ಕೇವಲ ಸಾಲ ವಿತರಣೆ ಹಾಗೂ ವಸೂಲಾತಿಗಷ್ಟೇ ಸೀಮಿತವೆಂದು ಜನ ತಿಳಿದಿದ್ದಾರೆ. ಜೀವನ ರೂಪಿಸಿಕೊಳ್ಳಲು ಬ್ಯಾಂಕ್ ಸಹಕಾರಿಯಾಗುತ್ತದೆ ಎಂಬ ಭಾವನೆ ಜನರಲ್ಲಿ ಬರಬೇಕು’ ಎಂದರು.

‘ಮಹಿಳಾ ಸ್ವಸಹಾಯ ಸಂಘಗಳು ಸ್ವಉದ್ಯೋಗ ಕೈಗೊಳ್ಳಲು ಬ್ಯಾಂಕ್ ಜತೆಗೆ ವಿವಿಧ ಇಲಾಖೆ ಅಧಿಕಾರಿಗಳು ಸಹಕಾರ ನೀಡಬೇಕು. ಕೋಲಾರ ತಾಲ್ಲೂಕಿನ ದ್ಯಾಪಸಂದ್ರ ಎಸ್‌ಎಫ್‌ಸಿಎಸ್ ವ್ಯಾಪ್ತಿಯ ಜೋಡಿಪುರದ ಮಹಿಳೆಯರು ನಡೆಸುತ್ತಿರುವ ಚಟುವಟಿಕೆಗಳು ಇತರೆ ಸಂಘಗಳಿಗೆ ಮಾದರಿಯಾಗಿವೆ. ಇವರಿಂದ ಅಸಕ್ತ ಸಂಘಗಳ ಸದಸ್ಯರಿಗೆ ತರಬೇತಿ ಕೊಡಿಸುತ್ತೇವೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಗೋವಿಂದಗೌಡ ಹೇಳಿದರು.

ADVERTISEMENT

‘2002ರಲ್ಲಿ ಸಂಘ ರಚಿಸಿ ಹಣಕಾಸು ವ್ಯವಹಾರದ ಜತೆಗೆ ಸ್ವಉದ್ಯೋಗ ಚಟುವಟಿಕೆ ನಡೆಸಲಾಗುತ್ತಿದೆ. ಈಗ ಸಂಘದಲ್ಲಿ ₹ 11 ಲಕ್ಷ ಉಳಿತಾಯ ಹಣವಿದೆ’ ಎಂದು ಜೋಡಿಪುರದ ಮಹಾಲಕ್ಷ್ಮಿ ಮಹಿಳಾ ಸ್ವಸಹಾಯ ಸಂಘದ ಪ್ರತಿನಿಧಿ ಮಂಜುಳಾ ವಿವರಿಸಿದರು.

‘ಕೃಷಿ ಇಲಾಖೆಯಿಂದ ಯಂತ್ರೋಪಕರಣ ಖರೀದಿಸಿದ್ದು, ರಾಗಿ ಮಾಲ್ಟ್, ರಾಗಿ ಹಿಟ್ಟು, ಮೆಣಸಿನ ಪುಡಿ, ಪುಳಿಯೊಗರೆ ಪುಡಿ ಸೇರಿದಂತೆ ವಿವಿಧ ಸಾಂಬರು ಪದಾರ್ಥ ತಯಾರು ಮಾಡಲಾಗುತ್ತಿದೆ. ಸಂಘದ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆಯಿದೆ’ ಎಂದು ಮಾಹಿತಿ ನೀಡಿದರು.

ಉತ್ತಮ ಪ್ರತಿಕ್ರಿಯೆ: ‘ಆರಂಭದಲ್ಲಿ ತಯಾರಿಸಿದ ಆಹಾರ ಸಾಮಗ್ರಿ ಮಾರಾಟ ಮಾಡುವುದು ಹೇಗೆಂದು ಯೋಚನೆಯಾಗಿತ್ತು. ಸರ್ಕಾರಿ ಕಾರ್ಯಕ್ರಮಗಳ ಜಾಗದಲ್ಲಿ ಮಳಿಗೆ ಹಾಕಿ ಕಡಿಮೆ ಬೆಲೆಗೆ ಗುಣಮಟ್ಟದ ಆಹಾರ ಪದಾರ್ಥ ಮಾರಾಟ ಮಾಡುತ್ತಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ’ ಎಂದು ಹೇಳಿದರು.

‘ಸಂಘದಲ್ಲಿ ಉಳಿತಾಯವಾಗಿರುವ ₹ 11 ಲಕ್ಷದಲ್ಲಿ ಸದಸ್ಯರಿಗೆ ಶೇ 1ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗಿದ್ದು, ಸಮರ್ಪಕವಾಗಿ ಮರುಪಾವತಿಯಾಗುತ್ತಿದೆ. ಜತೆಗೆ ಚಟುವಟಿಕೆಯಲ್ಲಿ ಬರುವ ಲಾಭದ ಹಣವನ್ನು ಸದಸ್ಯರಿಗೂ ನೀಡಲಾಗುತ್ತಿದೆ’ ಎಂದು ವಿವರಿಸಿದರು.

ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ನಟರಾಜನ್, ‘ಇಂತಹ ಚಟುವಟಿಕೆ ನಡೆಸುವ ಸಂಘಗಳಿಗೆ ಹೆಚ್ಚಿನ ಉತ್ತೇಜನ ನೀಡಿದರೆ ಬ್ಯಾಂಕ್‌ಗಳ ಗುರಿ ಸಾಧನೆ ಮಾಡಬಹುದು’ ಎಂದು ಅಭಿಪ್ರಾಯಪಟ್ಟರು.

ಸಹಕಾರ ಇಲಾಖೆ ಉಪ ನಿಬಂಧಕ ನೀಲಪ್ಪನವರ್, ಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ರವಿ, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕಿ ಸೌಮ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.