ಕೋಲಾರ: ಇಲ್ಲಿ ಸೋಮವಾರ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಆಸ್ತಿ ತೆರಿಗೆ ವಸೂಲಾತಿ ವಿಚಾರವಾಗಿ ಕಾವೇರಿದ ಚರ್ಚೆ ನಡೆದು ಸಭೆಯು ಗೊಂದಲದ ಗೂಡಾಯಿತು.
ನಗರಸಭಾ ಸದಸ್ಯರಾದ ಬಿ.ಎಂ.ಮುಬಾರಕ್, ಎಸ್.ಆರ್.ಮುರಳಿಗೌಡ, ರಾಕೇಶ್ ಹಾಗೂ ಅಂಬರೀಶ್ ಹಿಂದಿನ ಸಾಮಾನ್ಯ ಸಭೆಯ ನಡಾವಳಿಗಳನ್ನು ಪ್ರಸ್ತಾಪಿಸಿ ಚರ್ಚೆಗೆ ಇಳಿದರು. ಆಗ ಸದಸ್ಯರ ನಡುವೆ ವಾಗ್ವಾದ ನಡೆದು ಸಭೆಯಲ್ಲಿ ಗೊಂದಲ ಸೃಷ್ಟಿಯಾಯಿತು. ಬಳಿಕ ಶಾಸಕ ಕೆ.ಶ್ರೀನಿವಾಸಗೌಡರು ಮಧ್ಯಪ್ರವೇಶಿಸಿ ಸದಸ್ಯರನ್ನು ಸಮಾಧಾನಪಡಿಸಿದರು.
‘ಆರ್.ಎಲ್.ಜಾಲಪ್ಪ ಆಸ್ಪತ್ರೆ ಹಾಗೂ ದೇವರಾಜ ಅರಸು ವೈದ್ಯಕೀಯ ಕಾಲೇಜು ₹ 13 ಕೋಟಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿವೆ. ಈ ವಿಚಾರವಾಗಿ ಹಿಂದಿನ ಸಭೆಯಲ್ಲೂ ಚರ್ಚಿಸಲಾಗಿತ್ತು. ಜತೆಗೆ ತೆರಿಗೆ ವಸೂಲಿ ಮಾಡುವಂತೆ ಕಂದಾಯ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚಿಸಲಾಗಿತ್ತು. ಆದರೆ, ಅಧಿಕಾರಿಗಳು ತೆರಿಗೆ ವಸೂಲಿ ಮಾಡದೆ ನಿರ್ಲಕ್ಷ್ಯ ತೋರಿದ್ದಾರೆ’ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
‘ಜಾಲಪ್ಪ ಅವರು ಕಂದಾಯ ಸಚಿವರಾಗಿದ್ದಾಗ ಅವರ ಎಲ್ಲಾ ಆಸ್ತಿಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿದ್ದಾರೆ. ಅಧಿಕಾರಿಗಳ ಬೇಜವಾಬ್ದಾರಿಯಿಂದ ಆಸ್ತಿ ತೆರಿಗೆ ಸರಿಯಾಗಿ ವಸೂಲಾಗುತ್ತಿಲ್ಲ. ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ತೆರಿಗೆ ವಸೂಲಿ ಮಾಡುತ್ತಿಲ್ಲ. ಅಧಿಕಾರಿಗಳ ಮನಸ್ಥಿತಿ ಬದಲಾಗದಿದ್ದರೆ ಜಿಲ್ಲಾಧಿಕಾರಿಗೆ ಹಾಗೂ ಪೌರಾಡಳಿತ ನಿರ್ದೇಶನಾಲಯಕ್ಕೆ ದೂರು ಕೊಡುತ್ತೇವೆ’ ಎಂದು ಸದಸ್ಯ ಮುರಳಿಗೌಡ ಎಚ್ಚರಿಕೆ ನೀಡಿದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಮುಬಾರಕ್, ‘ಜಾಲಪ್ಪ ಅವರಿಗೆ ಸೇರಿದ 41 ಆಸ್ತಿಗಳು ನಗರಸಭೆ ವ್ಯಾಪ್ತಿಗೆ ಬರುತ್ತವೆ. ಈ ಪೈಕಿ 9 ಆಸ್ತಿಗಳನ್ನು ಶೈಕ್ಷಣಿಕ ಮತ್ತು ವೈದ್ಯಕೀಯ ಸೇವೆಯ ಉದ್ದೇಶಕ್ಕೆ ತೋರಿಸಿದ್ದಾರೆ. ಉಳಿದ ಆಸ್ತಿಗಳಿಗೆ ಅವರು ತೆರಿಗೆ ಪಾವತಿಸಲೇಬೇಕು. ಸಕಾಲಕ್ಕೆ ತೆರಿಗೆ ವಸೂಲಿ ಮಾಡದಿದ್ದರೆ ಸಿಬ್ಬಂದಿಯ ವೇತನ ತಡೆ ಹಿಡಿಯಿರಿ’ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ಪ್ರಸಾದ್, ‘ತೆರಿಗೆ ಬಾಕಿ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಅಲ್ಲದೇ, ಜಿಲ್ಲಾಧಿಕಾರಿ ನೇತೃತ್ವದಲ್ಲಿ ದೇವರಾಜ ಅರಸು ವೈದ್ಯಕೀಯ ಕಾಲೇಜಿಗೆ ತೆರಳಿ ಆಡಳಿತ ಮಂಡಳಿ ಸದಸ್ಯರೊಂದಿಗೆ ಚರ್ಚಿಸಲಾಗಿದೆ’ ಎಂದು ತಿಳಿಸಿದರು. ಆಗ ನಗರಸಭೆ ಕಂದಾಯ ನಿರೀಕ್ಷಕ ಚಂದ್ರು, ‘ತೆರಿಗೆ ಪ್ರಕರಣವು ನ್ಯಾಯಾಲಯದಲ್ಲಿದೆ’ ಎಂದರು.
ವಕೀಲರ ಬದಲಾವಣೆ: ‘ನಗರಸಭೆಪರ ವಕೀಲರು ಆಸ್ತಿ ಉಳಿಸುವ ಪ್ರಯತ್ನ ಮಾಡುತ್ತಿಲ್ಲ. ಹೀಗಾಗಿ ಅವರನ್ನು ಬದಲಾವಣೆ ಮಾಡಲು ಹಿಂದಿನ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೂ ಅವರನ್ನು ಯಾಕೆ ಬದಲಾವಣೆ ಮಾಡಿಲ್ಲ? ಅವರು ಈವರೆಗೆ ನಗರಸಭೆಯ ಆಸ್ತಿಗಳ ಸಂಬಂಧ ನ್ಯಾಯಾಲಯದಲ್ಲಿ ಎಷ್ಟು ಕೇವಿಯಟ್ ಹಾಕಿದ್ದಾರೆ?’ ಎಂದು ಮುರಳಿಗೌಡ ಪ್ರಶ್ನಿಸಿದರು.
‘ವಕೀಲರನ್ನು ಬದಲಾವಣೆ ಮಾಡಿದರೆ ಲಕ್ಷಾಂತರ ಹಣ ವಾವತಿಸಬೇಕಾಗುತ್ತದೆ. ವಕೀಲರು ನ್ಯಾಯಾಲಯದಲ್ಲಿ ಕೇವಿಯಟ್ ದಾಖಲು ಮಾಡದಿರುವುದಕ್ಕೆ ಅಧಿಕಾರಿಗಳ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣ. ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಆಸಕ್ತಿಯಿಂದ ಕೆಲಸ ಮಾಡಿದರೆ ಯಾವುದೂ ಕಷ್ಟವಲ್ಲ’ ಎಂದು ಮುಬಾರಕ್ ಹೇಳಿದರು.
ಹರಾಜಿನಲ್ಲಿ ಅವ್ಯವಹಾರ: ‘ವಿಷಾಯವಾರು ಚರ್ಚೆ ಮಾಡೋಣ. ನಗರಸಭೆ ವಾಣಿಜ್ಯ ಮಳಿಗೆಗಳ ಹರಾಜಿನಲ್ಲಿ ಅವ್ಯವಹಾರ ನಡೆದಿದೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು’ ಎಂದು ಸದಸ್ಯ ಪ್ರಸಾದ್‌ಬಾಬು ಒತ್ತಾಯಿಸಿದರು.
ಅಧ್ಯಕ್ಷೆ ಶ್ವೇತಾ, ಉಪಾಧ್ಯಕ್ಷ ಪ್ರವೀಣ್‌ಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಮಂಜುನಾಥ್ ಸದಸ್ಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.