ADVERTISEMENT

ಆಸ್ತಿ ತೆರಿಗೆ ಬಾಕಿ: ಬೀಗಮುದ್ರೆಯ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 16:43 IST
Last Updated 18 ಸೆಪ್ಟೆಂಬರ್ 2020, 16:43 IST
ಕೋಲಾರದ ವಿವಿಧೆಡೆ ಶುಕ್ರವಾರ ಕಾರ್ಯಾಚರಣೆ ನಡೆಸಿದ ನಗರಸಭೆ ಅಧಿಕಾರಿಗಳು ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ಪಾವತಿಸುವಂತೆ ಕಟ್ಟಡ ಮಾಲೀಕರಿಗೆ ಎಚ್ಚರಿಕೆ ನೀಡಿದರು.
ಕೋಲಾರದ ವಿವಿಧೆಡೆ ಶುಕ್ರವಾರ ಕಾರ್ಯಾಚರಣೆ ನಡೆಸಿದ ನಗರಸಭೆ ಅಧಿಕಾರಿಗಳು ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆ ಪಾವತಿಸುವಂತೆ ಕಟ್ಟಡ ಮಾಲೀಕರಿಗೆ ಎಚ್ಚರಿಕೆ ನೀಡಿದರು.   

ಕೋಲಾರ: ನಗರದಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಕಟ್ಟಡ ಮಾಲೀಕರ ವಿರುದ್ಧ ಶುಕ್ರವಾರ ಕಾರ್ಯಾಚರಣೆ ನಡೆಸಿದ ನಗರಸಭೆ ಕಂದಾಯ ಅಧಿಕಾರಿಗಳು ಶೀಘ್ರವೇ ತೆರಿಗೆ ಪಾವತಿಸುವಂತೆ ಎಚ್ಚರಿಕೆ ನೀಡಿದರು.

ಹಲವು ವರ್ಷಗಳಿಂದ ಆಸ್ತಿ ತೆರಿಗೆ ಪಾವತಿಸದ, ಅರ್ಧ ತೆರಿಗೆ ಬಾಕಿ ಉಳಿಸಿಕೊಂಡಿರುವ ಆಸ್ತಿಗಳ ಮಾಲೀಕರಿಗೆ ನಗರಸಭೆಯಿಂದ ಹಲವು ಬಾರಿ ನೋಟಿಸ್‌ ಜಾರಿ ಮಾಡಿ ಶೀಘ್ರವೇ ತೆರಿಗೆ ಕಟ್ಟುವಂತೆ ಸೂಚಿಸಲಾಗಿತ್ತು. ಆದರೂ ಸಾಕಷ್ಟು ಆಸ್ತಿ ಮಾಲೀಕರು ಸ್ವಯಂಪ್ರೇರಿತರಾಗಿ ತೆರಿಗೆ ಪಾವತಿಸಿಲ್ಲ. ಹೀಗಾಗಿ ಅಧಿಕಾರಿಗಳು ಶಾರದಾ ಚಿತ್ರಮಂದಿರ ರಸ್ತೆ, ಕ್ಲಾಕ್‌ಟವರ್‌, ದೊಡ್ಡಪೇಟೆ ಸೇರಿದಂತೆ ಹಲವೆಡೆ ದಿಢೀರ್‌ ಕಾರ್ಯಾಚರಣೆ ನಡೆಸಿದರು.

ಕೆಲ ಆಸ್ತಿ ಮಾಲೀಕರು, ‘ತೆರಿಗೆ ಪಾವತಿಗೆ ಸ್ವಲ್ಪ ಕಾಲಾವಕಾಶ ನೀಡಿ. ಕಂತಿನ ರೂಪದಲ್ಲಿ ತೆರಿಗೆ ಪಾವತಿಸುತ್ತೇವೆ’ ಎಂದು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು, ‘ಹಣಕಾಸು ವರ್ಷದ ಆರಂಭದಲ್ಲಿ ಕಂತಿನ ರೂಪದಲ್ಲಿ ತೆರಿಗೆ ಪಾವತಿಸಲು ಅವಕಾಶವಿತ್ತು. ನೋಟಿಸ್ ನೀಡಿದ ನಂತರ ಅದಕ್ಕೆ ಅವಕಾಶವಿಲ್ಲ. ಬಾಕಿ ತೆರಿಗೆ ಪಾವತಿಸದಿದ್ದರೆ ಬೀಗಮುದ್ರೆ ಹಾಕುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ಮೀನಮೇಷ: ‘ನಗರಸಭೆ ಸಿಬ್ಬಂದಿ ವೇತನ ಹಾಗೂ ದೈನಂದಿನ ಕಾರ್ಯ ಚಟುವಟಿಕೆ ನಿರ್ವಹಣೆಗೆ ಸಾಕಷ್ಟು ಹಣ ಖರ್ಚಾಗುತ್ತದೆ. ಈ ಖರ್ಚು ವೆಚ್ಚವನ್ನು ತೆರಿಗೆ ಹಣದಲ್ಲಿ ನಿಭಾಯಿಸಬೇಕು. ಆದ ಕಾರಣ ಆಸ್ತಿ ಮಾಲೀಕರು ಕಡ್ಡಾಯವಾಗಿ ತೆರಿಗೆ ಪಾವತಿಸಬೇಕು’ ಎಂದು ನಗರಸಭೆ ಆಯುಕ್ತ ಆರ್‌.ಶ್ರೀಕಾಂತ್‌ ಸೂಚಿಸಿದರು.

‘ತೆರಿಗೆದಾರರಿಗೆ ಹಲವು ಬಾರಿ ನೋಟಿಸ್ ಜಾರಿ ಮಾಡಿದರೂ ತೆರಿಗೆ ಪಾವತಿಗೆ ಮೀನಮೇಷ ಎಣಿಸುತ್ತಿದ್ದಾರೆ. ಇದು ಸರಿಯಲ್ಲ. ಕಂದಾಯ ಅಧಿಕಾರಿಗಳು ತೆರಿಗೆ ಬಾಕಿ ಉಳಿಸಿಕೊಂಡಿರುವವರಿಗೆ ನೋಟಿಸ್ ಜಾರಿ ಮಾಡುವುದಕ್ಕೂ ಮುನ್ನವೇ ಆಸ್ತಿ ಮಾಲೀಕರು ತೆರಿಗೆ ಪಾವತಿಸಬೇಕು. ಆ ಮೂಲಕ ನಗರದ ಅಭಿವೃದ್ಧಿಗೆ ಸಹಕರಿಸಬೇಕು’ ಎಂದು ಮನವಿ ಮಾಡಿದರು.

‘ಜನರ ತೆರಿಗೆ ಹಣದಿಂದಲೇ ನಗರದಲ್ಲಿ ಅಭಿವೃದ್ಧಿ ಆಗಬೇಕು. ತೆರಿಗೆದಾರರು ಸಕಾಲಕ್ಕೆ ತೆರಿಗೆ ಕಟ್ಟದಿದ್ದರೆ ನಗರದ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ. ಈ ಸಂಗತಿ ಅರಿತು ಶೀಘ್ರವೇ ತೆರಿಗೆ ಪಾವತಿಸಬೇಕು. ಶುಕ್ರವಾರದ ಕಾರ್ಯಾಚರಣೆಯಲ್ಲಿ ಸುಮಾರು ₹ 10 ಲಕ್ಷ ತೆರಿಗೆ ಬಾಕಿ ಸಂಗ್ರಹಿಸಲಾಯಿತು’ ಎಂದು ಹೇಳಿದರು.

ನಗರಸಭೆ ಕಂದಾಯ ಅಧಿಕಾರಿ ಚಂದ್ರು, ಕಂದಾಯ ನಿರೀಕ್ಷಕ ತ್ಯಾಗರಾಜ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.