ADVERTISEMENT

ಬೆಳೆ ಪರಿಹಾರಕ್ಕೆ ಪ್ರಸ್ತಾವ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 20 ಮೇ 2019, 12:56 IST
Last Updated 20 ಮೇ 2019, 12:56 IST

ಕೋಲಾರ: ‘ಇತ್ತೀಚೆಗೆ ಜಿಲ್ಲೆಯಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿದ್ದರಿಂದ 2,132 ಹೆಕ್ಟೇರ್ ತೋಟಗಾರಿಕೆ ಬೆಳೆಗಳು ನಾಶವಾಗಿದ್ದು, ಬೆಳೆ ಪರಿಹಾರಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಬೆಳೆ ನಷ್ಟಕ್ಕೆ ಎಕರೆಗೆ ₹ 18 ಸಾವಿರ ಪರಿಹಾರ ನೀಡಲಾಗುವುದು. ಮಳೆಯಿಂದ ಸ್ವಲ್ಪ ಮಟ್ಟಿಗೆ ಮೇವಿನ ಸಮಸ್ಯೆ ನಿವಾರಣೆಯಾಗಿದ್ದು, 12 ವಾರಕ್ಕೆ ಮೇವು ಲಭ್ಯವಿದೆ’ ಎಂದರು.

‘ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹೊಗಳಗೆರೆ ತೋಟಗಾರಿಕೆ ಕ್ಷೇತ್ರದಲ್ಲಿ 49 ಮೆಟ್ರಿಕ್ ಟನ್ ಹಾಗೂ ಮುಳಬಾಗಿಲಿನಲ್ಲಿ 25 ಮೆಟ್ರಿಕ್ ಟನ್ ಮೇವು ದಾಸ್ತಾನು ಮಾಡಲಾಗಿದೆ. ರಾಸುಗಳಿಗೆ ಮೇವಿಲ್ಲದ ರೈತರಿಗೆ ಕೆ.ಜಿಗೆ ₹ 2 ದರದಲ್ಲಿ ಮೇವು ವಿತರಿಸಲಾಗುವುದು. ಜಿಲ್ಲೆಯಾದ್ಯಂತ ಹಂತ ಹಂತವಾಗಿ ಹಸಿರು ಮೇವು ಬೆಳೆಸಲಾಗಿದ್ದು, ಮೇವಿಗೆ ಯಾವುದೇ ಸಮಸ್ಯೆಯಿಲ್ಲ’ ಎಂದು ವಿವರಿಸಿದರು.

ADVERTISEMENT

‘2018ರ ಅಕ್ಟೋಬರ್‌ನಿಂದ ಮಾರ್ಚ್ ಅಂತ್ಯದವರೆಗೆ 369 ಕೊಳವೆ ಬಾವಿ ಕೊರೆಸಲಾಗಿದೆ. ಈ ಪೈಕಿ 262 ಕೊಳವೆ ಬಾವಿಗಳಲ್ಲಿ ನೀರು ಸಿಕ್ಕಿದೆ. ಸದ್ಯ 113 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಖಾಸಗಿ ಟ್ಯಾಂಕರ್ ಮೂಲಕ ಹಾಗೂ ಖಾಸಗಿ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ನಗರಸಭೆ ಮತ್ತು ಪುರಸಭೆ ವ್ಯಾಪ್ತಿಯಲ್ಲಿ ಸಮಸ್ಯೆ ಇರುವ ವಾರ್ಡ್‌ಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಟ್ಯಾಂಕರ್‌ ನೀರು ಸಾಲದಿದ್ದರೆ ನಗರಕ್ಕೆ ಸಮೀಪವಿರುವ ಖಾಸಗಿ ಕೊಳವೆ ಬಾವಿಗಳನ್ನು ಸ್ವಾಧೀನಪಡಿಸಿಕೊಂಡು ನೀರು ಕೊಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.