ADVERTISEMENT

ರಸ್ತೆ ದುರಸ್ತಿಗೆ ಒತ್ತಾಯಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 6:16 IST
Last Updated 20 ಸೆಪ್ಟೆಂಬರ್ 2019, 6:16 IST
ಆರ್‌ಪಿಐ ಕಾರ್ಯಕರ್ತರು ರಸ್ತೆ ದುರಸ್ತಿಗೆ ಒತ್ತಾಯಿಸಿ ಕೋಲಾರದಲ್ಲಿ ಗುರುವಾರ ಧರಣಿ ನಡೆಸಿ ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಶಿವಪ್ರಕಾಶ್‌ ಅವರಿಗೆ ಮನವಿ ಸಲ್ಲಿಸಿದರು.
ಆರ್‌ಪಿಐ ಕಾರ್ಯಕರ್ತರು ರಸ್ತೆ ದುರಸ್ತಿಗೆ ಒತ್ತಾಯಿಸಿ ಕೋಲಾರದಲ್ಲಿ ಗುರುವಾರ ಧರಣಿ ನಡೆಸಿ ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ಶಿವಪ್ರಕಾಶ್‌ ಅವರಿಗೆ ಮನವಿ ಸಲ್ಲಿಸಿದರು.   

ಕೋಲಾರ: ನಗರದ ರಸ್ತೆಗಳ ದುರಸ್ತಿಗೆ ಒತ್ತಾಯಿಸಿ ಭಾರತೀಯ ರಿಪಬ್ಲಿಕನ್‌ ಪಕ್ಷದ (ಆರ್‌ಪಿಐ) ಕಾರ್ಯಕರ್ತರು ಇಲ್ಲಿ ಗುರುವಾರ ಅರಹಳ್ಳಿಗೇಟ್ ಬಳಿಯ ಮಿಲ್ಲತ್ ವೃತ್ತದಲ್ಲಿ ರಸ್ತೆತಡೆ ಮಾಡಿ ಧರಣಿ ನಡೆಸಿದರು.

‘ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಅಮೃತ್‌ ಯೋಜನೆಯಡಿ ನಗರದಲ್ಲಿ ಕೈಗೊಂಡಿರುವ ಒಳಚರಂಡಿ ಕಾಮಗಾರಿಯು ನಗರವಾಸಿಗಳಿಗೆ ಶಾಪವಾಗಿದೆ. ಕಾಮಗಾರಿಗಾಗಿ ರಸ್ತೆಗಳನ್ನು ಮನಸೋಇಚ್ಛೆ ಅಗೆಯಲಾಗಿದೆ. ಕಾಮಗಾರಿ ಪೂರ್ಣಗೊಂಡ ನಂತರ ಗುತ್ತಿಗೆದಾರರು ರಸ್ತೆ ದುರಸ್ತಿ ಮಾಡಿಲ್ಲ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಒಳಚರಂಡಿ ಕಾಮಗಾರಿ ಹಾಗೂ ಮಳೆಯಿಂದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ರಸ್ತೆಗಳು ತುಂತುರು ಮಳೆಗೂ ರಾಡಿಯಾಗುತ್ತಿವೆ. ಗುಂಡಿಮಯ ರಸ್ತೆಗಳಿಂದ ನಗರ ಸೌಂದರ್ಯ ಹಾಳಾಗಿದ್ದು, ದೂಳಿನ ಆರ್ಭಟ ಹೆಚ್ಚಿದೆ. ನಗರವಾಸಿಗಳು ಹಾಗೂ ವಾಹನ ಸವಾರರು ಪ್ರತಿನಿತ್ಯ ಬವಣೆ ಪಡುವಂತಾಗಿದೆ’ ಎಂದು ಆರ್‌ಪಿಐ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬೇಟಪ್ಪ ದೂರಿದರು.

ADVERTISEMENT

‘ಗುಂಡಿಮಯ ರಸ್ತೆಗಳು ಜನರ ಪಾಲಿಗೆ ಮೃತ್ಯುಕೂಪವಾಗಿ ಪರಿಣಮಿಸಿವೆ. ಅಧಿಕಾರಿಗಳು ನೆಪಕ್ಕೆ ಗುಂಡಿಗಳಿಗೆ ಜಲ್ಲಿ ಪುಡಿ ಹಾಗೂ ಮಣ್ಣು ಸುರಿಸಿ ರಸ್ತೆಗೆ ಡಾಂಬರು ಹಾಕಿರುವುದಾಗಿ ಬಿಲ್‌ ಮಂಜೂರು ಮಾಡಿದ್ದಾರೆ. ಈ ಅಕ್ರಮದಲ್ಲಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಕೋಟಿಗಟ್ಟಲೆ ಹಣ ದೋಚಿದ್ದಾರೆ’ ಎಂದು ಆರೋಪಿಸಿದರು.

ಜವಾಬ್ದಾರಿಯಿಲ್ಲ: ‘ರಸ್ತೆ ಅವ್ಯವಸ್ಥೆಯಿಂದ ಆಗಾಗ್ಗೆ ಅಪಘಾತ ಸಂಭವಿಸುತ್ತಿವೆ. ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ರಸ್ತೆ ಸರಿಪಡಿಸುವ ಜವಾಬ್ದಾರಿಯಿಲ್ಲ. ಸಾರ್ವಜನಿಕರು ರಸ್ತೆ ದುರಸ್ತಿಗೆ ಒತ್ತಾಯಿಸಿದರೆ ಕುಂಟು ನೆಪ ಹೇಳುತ್ತಾ ಕಾಲ ದೂಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ರಸ್ತೆ ದುರಸ್ತಿ ಮಾಡದ ಗುತ್ತಿಗೆದಾರರಿಗೆ ಬಿಲ್‌ ಪಾವತಿಸಬಾರದು. ರಸ್ತೆಗಳಿಗೆ ಶೀಘ್ರವೇ ಡಾಂಬರು ಹಾಕಬೇಕು. ಕಳಪೆ ಕಾಮಗಾರಿ ಸಂಬಂಧ ಅಧಿಕಾರಿಗಳನ್ನು ಅಮಾನತು ಮಾಡಬೇಕು’ ಎಂದು ಒತ್ತಾಯಿಸಿದರು.

ಆರ್‌ಪಿಐ ಜಿಲ್ಲಾ ಘಟಕದ ಉಪಾಧ್ಯಕ್ಷ ಸಿ.ಜಿ.ಕುಪೇಂದ್ರ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್‌, ಜಿಲ್ಲಾ ಯುವ ಘಟಕದ ಅಧ್ಯಕ್ಷ ಮುನೇಶ್‌, ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಖಾದಿರ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.