ADVERTISEMENT

ಮತಗಟ್ಟೆಗೆ ಅಗತ್ಯ ಸೌಕರ್ಯ ಕಲ್ಪಿಸಿ

ಸಭೆಯಲ್ಲಿ ಎಆರ್‌ಒಗಳಿಗೆ ಜಿಲ್ಲಾಧಿಕಾರಿ ಮಂಜುನಾಥ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 14:06 IST
Last Updated 13 ಮಾರ್ಚ್ 2019, 14:06 IST
ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕೋಲಾರದಲ್ಲಿ ಬುಧವಾರ ಸಹಾಯಕ ಚುನಾವಣಾಧಿಕಾರಿಗಳ ಸಭೆ ನಡೆಸಿದರು.
ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಕೋಲಾರದಲ್ಲಿ ಬುಧವಾರ ಸಹಾಯಕ ಚುನಾವಣಾಧಿಕಾರಿಗಳ ಸಭೆ ನಡೆಸಿದರು.   

ಕೋಲಾರ: ‘ಲೋಕಸಭೆ ಚುನಾವಣಾ ನೀತಿಸಂಹಿತೆ ಉಲ್ಲಂಘನೆಯಾದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಎಚ್ಚರಿಕೆ ನೀಡಿದರು.

ಇಲ್ಲಿ ಬುಧವಾರ ಸಹಾಯಕ ಚುನಾವಣಾಧಿಕಾರಿಗಳೊಂದಿಗೆ (ಎಆರ್‌ಒ) ಸಭೆಯಲ್ಲಿ ಮಾತನಾಡಿ, ‘ಮತಗಟ್ಟೆಗಳಿಗೆ ಖುದ್ದು ಭೇಟಿ ನೀಡಿ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಬೇಕು. ಮತಗಟ್ಟೆಗಳಿಗೆ ಅಗತ್ಯ ಸೌಕರ್ಯ ಕಲ್ಪಿಸಬೇಕು’ ಎಂದರು.

‘ಮತದಾನ ದಿನದಂದು ಮತಗಟ್ಟೆಗೆ ಹೆಚ್ಚಿನ ಮತದಾರರು ಬಂದ ಸಂದರ್ಭದಲ್ಲಿ ಅವರನ್ನು ಬಿಸಿಲಲ್ಲಿ ನಿಲ್ಲಿಸಬಾರದು. ವಿಶ್ರಾಂತಿ ಕೊಠಡಿಯ ವ್ಯವಸ್ಥೆ ಮಾಡಬೇಕು. ಇಲ್ಲವಾದಲ್ಲಿ ಪೆಂಡಾಲ್ ಹಾಕಿ ನೆರಳಿನ ವ್ಯವಸ್ಥೆ ಕಲ್ಪಿಸಬೇಕು. ಕುಡಿಯುವ ನೀರು, ಅಂಗವಿಕಲರಿಗೆ ರ‍್ಯಾಂಪ್‌ ವ್ಯವಸ್ಥೆ ಮಾಡಬೇಕು’ ಎಂದು ಹೇಳಿದರು.

ADVERTISEMENT

‘ಚೆಕ್‌ಪೋಸ್ಟ್‌ ಸಿಬ್ಬಂದಿಗೆ ಕುಡಿಯುವ ನೀರು, ಟಾರ್ಚ್ ಸೌಕರ್ಯ ಕಲ್ಪಿಸಬೇಕು. ಚೆಕ್‌ಪೋಸ್ಟ್‌ನಿಂದ 500 ಮೀಟರ್ ಹಿಂದಕ್ಕೆ ಹಾಗೂ ಮುಂದಕ್ಕೆ ಬ್ಯಾರಿಕೇಡ್ ಅಳವಡಿಸಬೇಕು. ಅಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಯು ತಪಾಸಣೆಗೆಂದು ರಸ್ತೆಯಲ್ಲಿ ವಾಹನಗಳಿಗೆ ಎದುರಾಗಿ ನಿಲ್ಲಬಾರದು. ಬದಲಿಗೆ ಬದಿಯಲ್ಲಿ ನಿಂತು ಕಾರ್ಯ ನಿರ್ವಹಿಸಬೇಕು’ ಎಂದು ತಿಳಿಸಿದರು.

ಕಾಮಗಾರಿ ಪಟ್ಟಿ ಸಿದ್ಧ: ‘ಚುನಾವಣಾ ದಿನಾಂಕ ಘೋಷಣೆಯಾದ ಮಾರ್ಚ್‌ 10ಕ್ಕೆ ಅನ್ವಯಿಸುವಂತೆ ಪ್ರಗತಿಯಲ್ಲಿರುವ ಕಾಮಗಾರಿಗಳು ಹಾಗೂ ಇನ್ನೂ ಆರಂಭವಾಗದ ಕಾಮಗಾರಿಗಳ ಪಟ್ಟಿ ಸಿದ್ಧವಿದೆ. ಈ ಪಟ್ಟಿ ಎಆರ್‌ಒಗಳ ಬಳಿ ಇರಬೇಕು’ ಎಂದು ಸೂಚಿಸಿದರು.

‘ಹಣ ಅಥವಾ ಇತರ ವಸ್ತುಗಳನ್ನು ಮತದಾರರಿಗೆ ಹಂಚಲು ತಂದಿರುವ ಬಗ್ಗೆ ದೂರು ಬಂದಾಗ ಮೊದಲು ಚುನಾವಣಾ ವೆಚ್ಚ ವೀಕ್ಷಕರ ಗಮನಕ್ಕೆ ತರಬೇಕು. ವೀಕ್ಷಕರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ತಪಾಸಣೆ ಮಾಡಿಸುತ್ತಾರೆ. ಯಾವುದೇ ಕಾರಣಕ್ಕೂ ಮನೆಗೆ ನುಗ್ಗಿ ಪರಿಶೀಲನೆ ಮಾಡಬೇಡಿ’ ಎಂದು ತಿಳಿಸಿದರು.

ಹೆಲಿಪ್ಯಾಡ್ ವ್ಯವಸ್ಥೆ: ‘ಚುನಾವಣಾ ಪ್ರಚಾರಕ್ಕೆ ಗಣ್ಯರು ಹೆಲಿಕಾಪ್ಟರ್ ಬಳಕೆಗೆ ಅನುಮತಿ ನೀಡುವ ಮುನ್ನ ಜಿಲ್ಲಾ ಚುನಾವಣಾಧಿಕಾರಿ ಗಮನಕ್ಕೆ ತರಬೇಕು. ಸಂಬಂಧಿಸಿದವರಿಂದ ಹಣ ಕಟ್ಟಿಸಿಕೊಂಡು ಲೋಕೋಪಯೋಗಿ ಇಲಾಖೆಯು ಹೆಲಿಪ್ಯಾಡ್ ವ್ಯವಸ್ಥೆ ಮಾಡಬೇಕು. ಸ್ಥಳದಲ್ಲಿ ಅಗ್ನಿಶಾಮಕ ವಾಹನ, ಆಂಬುಲೆನ್ಸ್‌ ನಿಯೋಜಿಸಬೇಕು. ಗಣ್ಯರು ಹೆಲಿಕಾಪ್ಟರ್‌ನಲ್ಲಿ ಬಂದರೆ ಫ್ಲೈಯಿಂಗ್ ಸ್ಕ್ವಾಡ್ ಸಿಬ್ಬಂದಿಯು ಹೆಲಿಕಾಪ್ಟರ್‌ ಪರಿಶೀಲನೆ ನಡೆಸಬೇಕು ಮತ್ತು ವಿಡಿಯೋ ಚಿತ್ರೀಕರಿಸಬೇಕು’ ಎಂದರು.

‘ಬೈಕ್‌ ರ‍್ಯಾಲಿ ಸಂದರ್ಭದಲ್ಲಿ ಒಂದೇ ಬಾರಿಗೆ 10ಕ್ಕಿಂತ ಹೆಚ್ಚು ಬೈಕ್‌ಗಳು ಹೋಗುವಂತಿಲ್ಲ. 200 ಮೀಟರ್ ಅಂತರದಲ್ಲಿ ಮತ್ತೆ 10 ವಾಹನಗಳಿಗೆ ಅವಕಾಶ ನೀಡಬಹುದು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ 4 ಮಂದಿ ಮಾತ್ರ ಅಭ್ಯರ್ಥಿ ಜತೆಗಿರಬಹುದು’ ಎಂದು ವಿವರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪುಷ್ಪಲತಾ, ಉಪ ವಿಭಾಗಾಧಿಕಾರಿ ಸೋಮಶೇಖರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.