ADVERTISEMENT

ಜಿಲ್ಲೆಯ ಇತಿಹಾಸ ಪಠ್ಯದಲ್ಲಿ ಪ್ರಕಟಿಸಿ

ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸಂಸದ ಮುನಿಸ್ವಾಮಿ ಸಲಹೆ

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2019, 5:44 IST
Last Updated 18 ಆಗಸ್ಟ್ 2019, 5:44 IST
ಕೋಲಾರದಲ್ಲಿ ಶನಿವಾರ ಆರಂಭವಾದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿದರು.
ಕೋಲಾರದಲ್ಲಿ ಶನಿವಾರ ಆರಂಭವಾದ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿದರು.   

ಕೋಲಾರ: ‘ಚಳವಳಿಗಳ ತವರು ಕೋಲಾರ ಜಿಲ್ಲೆಯಲ್ಲಿ ಪ್ರತಿಯೊಂದು ಸ್ಥಳಕ್ಕೂ ನೂರಾರು ವರ್ಷಗಳ ಇತಿಹಾಸವಿದ್ದು, ಈ ಮಾಹಿತಿಯನ್ನು ಪಠ್ಯಪುಸ್ತಕಗಳಲ್ಲಿ ಪ್ರಕಟಿಸಿದರೆ ಅನುಕೂಲವಾಗುತ್ತದೆ’ ಎಂದು ಸಂಸದ ಎಸ್.ಮುನಿಸ್ವಾಮಿ ಅಭಿಪ್ರಾಯಪಟ್ಟರು.

ಇಲ್ಲಿ ಶನಿವಾರ ರಾಜ್ಯ ಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ‘ಜಿಲ್ಲೆ, ರಾಜ್ಯಕ್ಕೆ ಸಂಬಂಧಪಡದ ವಿಚಾರಗಳೆಲ್ಲಾ ಪಠ್ಯಪುಸ್ತಕಗಳಲ್ಲಿವೆ. ಮಕ್ಕಳು ಈ ವಿಷಯಗಳನ್ನು ತಿಳಿಯುತ್ತಿದ್ದಾರೆ. ಆದರೆ, ಸ್ಥಳೀಯವಾಗಿ ನಮ್ಮ ಜಿಲ್ಲೆಯ ಕುರಿತ ಮಾಹಿತಿ ಮಕ್ಕಳಿಗೆ ಇಲ್ಲವಾಗಿದೆ’ ಎಂದರು.

‘ಹೈದರಾಲಿ, ಟಿಪ್ಪು ಸುಲ್ತಾನ್‌, ಕೋಲಾರಮ್ಮ ದೇವಾಲಯ, ಗಂಗರು, ಚೋಳರು ಆಳ್ವಿಕೆ ಇಂತಹ ಅನೇಕ ಇತಿಹಾಸದ ಮಾಹಿತಿಯನ್ನು ಪಠ್ಯಪುಸ್ತಕಗಳಲ್ಲಿ ಪ್ರಕಟಿಸುವುದು ಸಾರ್ಥಕ ಸಂಗತಿ. ಸಂಶೋಧನೆ ಕೈಗೊಂಡು ಪುಸ್ತಕ ರಚಿಸಬೇಕು’ ಎಂದು ಸಲಹೆ ನೀಡಿದರು.

ADVERTISEMENT

‘ಕೋಲಾರದಲ್ಲಿ ಹುಟ್ಟಿದ ಹೋರಾಟದ ಹಾಡುಗಳು ರಾಜ್ಯ, ರಾಷ್ಟ್ರದಲ್ಲಿ ಖ್ಯಾತಿಯಾಗಿವೆ. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಕೋಲಾರ ಜಿಲ್ಲೆಯಲ್ಲಿ ಎಲ್ಲಾ ರಂಗಗಳನ್ನೂ ಕಾಣಬಹುದು. ವಿಶ್ವಕ್ಕೆ ಚಿನ್ನ ನೀಡಿದ ಕೋಲಾರ ಜಿಲ್ಲೆಯು ಇಂದು ನೀರಿಗೆ ಪರಿತಪಿಸುತ್ತಿರುವುದು ವಿಷಾದನೀಯ’ ಎಂದು ಬೇಸರ ವ್ಯಕ್ತಪಡಿಸಿದರು.

ಭಾಷಣಕ್ಕೆ ಸೀಮಿತವಲ್ಲ: ಪರಿಷತ್ತು ಕೇವಲ ಭಾಷಣಕ್ಕೆ ಸೀಮಿತವಾದ ಸಂಸ್ಥೆಯಲ್ಲ. ಪ್ರಾಮಾಣಿಕ, ಜನಪರ ಶಕ್ತಿಯನ್ನು ಹೊಂದಿರುವ ವಿಶ್ವದ ಮೊದಲ ಸಂಸ್ಥೆ ಇದಾಗಿದೆ’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್ ಹೇಳಿದರು.

‘ಹೋರಾಟದ ನೆಲೆ ಕೋಲಾರದಲ್ಲೇ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ ಮಾಡಲು ಹಿಂದಿನ ವರ್ಷವೇ ತೀರ್ಮಾನಿಸಲಾಗಿತ್ತು. ದಲಿತ ಸಾಹಿತ್ಯಕ್ಕೆ ಬೇಕಾದ ಪ್ರಾತಿನಿದ್ಯ, ಅವಕಾಶ ಪ್ರಕಟಣೆಯಲ್ಲಿ ಸಿಕ್ಕಿಲ್ಲ ಎಂಬುದನ್ನು ತಿಳಿದು 10 ದಲಿತ ಸಾಹಿತ್ಯ ಸಂಪುಟ ಬಿಡುಗಡೆ ಮಾಡಲು ತೀರ್ಮಾನಿಸಿದೆವು. ಅದರಂತೆ ಸಾಂಕೇತಿಕವಾಗಿ 5 ಸಂಪುಟ ಬಿಡುಗಡೆ ಮಾಡಲಾಗಿದೆ’ ಎಂದು ವಿವರಿಸಿದರು.

‘ಪರಿಷತ್ತು 5 ರಾಜ್ಯಗಳಲ್ಲಿ ಘಟಕಗಳನ್ನು ಹೊಂದಿದ್ದು, 900ಕ್ಕೂ ಹೆಚ್ಚು ದಲಿತರು, ಮಹಿಳೆಯರಿಗೂ ಕಾರ್ಯಕಾರಿ ಸಮಿತಿಯಲ್ಲಿ ಪ್ರಾತಿನಿಧ್ಯ ಕಲ್ಪಿಸಲಾಗಿದೆ’ ಎಂದರು.

ವೇದಿಕೆಗೆ ಆಹ್ವಾನ: ಸಮ್ಮೇಳನದ ಉದ್ಘಾಟನೆ ವೇಳೆ ವೇದಿಕೆಯಲ್ಲಿ ಮಹಿಳಾ ಗಣ್ಯರೂ ಇಲ್ಲವೆಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದಾಗ ಸಮ್ಮೇಳನಾಧ್ಯಕ್ಷ ಎಲ್‌.ಹನುಮಂತಯ್ಯ ಅವರ ಪತ್ನಿ ವಿಜಯಾಂಬಿಕೆ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ನಿರ್ದೇಶಕಿ ಕೆ.ಎಂ.ಜಾನಕಿ ಅವರನ್ನು ವೇದಿಕೆಗೆ ಆಹ್ವಾನಿಸಲಾಯಿತು.

ಕನ್ನಡ ಸಾಹಿತ್ಯ ಪರಿಷತ್‌ ರಾಜ್ಯ ಗೌರವ ಕಾರ್ಯದರ್ಶಿ ರಾಜಶೇಖರ ಹತಗುಂದಿ, ಜಿಲ್ಲಾ ಘಟಕದ ಅಧ್ಯಕ್ಷ ನಾಗಾನಂದ ಕೆಂಪರಾಜ್, ಕೋಶಾಧ್ಯಕ್ಷ ಎಸ್.ಮುನಿಯಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.