ADVERTISEMENT

ಪ್ರಶ್ನೆಪತ್ರಿಕೆ ಸಾಗಣೆ: ಲೋಪವಾದರೆ ಶಿಸ್ತುಕ್ರಮ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2019, 15:48 IST
Last Updated 19 ಮಾರ್ಚ್ 2019, 15:48 IST
ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಸಾಗಣೆ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಕೋಲಾರದಲ್ಲಿ ಮಂಗಳವಾರ ಮಾರ್ಗಾಧಿಕಾರಿಗಳ ಸಭೆ ನಡೆಸಿದರು.
ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಸಾಗಣೆ ಸಂಬಂಧ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಕೋಲಾರದಲ್ಲಿ ಮಂಗಳವಾರ ಮಾರ್ಗಾಧಿಕಾರಿಗಳ ಸಭೆ ನಡೆಸಿದರು.   

ಕೋಲಾರ: ‘ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆ ಸಾಗಣೆ ಪ್ರಕ್ರಿಯೆಯಲ್ಲಿ ಲೋಪವಾದರೆ ಮಾರ್ಗಾಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಎಚ್ಚರಿಕೆ ನೀಡಿದರು.

ಇಲ್ಲಿ ಮಂಗಳವಾರ ನಡೆದ ತಾಲ್ಲೂಕಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಿಗೆ ಪ್ರಶ್ನೆಪತ್ರಿಕೆ ತಲುಪಿಸುವ ಮಾರ್ಗಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ‘ಮಾರ್ಗಾಧಿಕಾರಿಗಳು ಜಿಲ್ಲಾ ಖಜಾನೆ ಸಮೀಪ ಬೆಳಿಗ್ಗೆ 7 ಗಂಟೆಗೆ ಹಾಜರಿದ್ದು, ಪ್ರಶ್ನೆಪತ್ರಿಕೆ ಬಂಡಲ್‌ ಪಡೆದುಕೊಳ್ಳಬೇಕು. ಬಳಿಕ ಸಂಬಂಧಪಟ್ಟ ಪರೀಕ್ಷಾ ಕೇಂದ್ರಗಳಿಗೆ ಬೆಳಿಗ್ಗೆ 8-.45ರೊಳಗೆ ಪ್ರಶ್ನೆಪತ್ರಿಕೆ ಬಂಡಲ್‌ ತಲುಪಿಸಬೇಕು’ ಎಂದು ಸೂಚಿಸಿದರು.

‘ಪ್ರಶ್ನೆಪತ್ರಿಕೆ ಬಂಡಲ್‌ ಪಡೆಯುವಾಗ ಎಚ್ಚರ ವಹಿಸಿ. ನಿಗದಿಪಡಿಸಿದ ಪರೀಕ್ಷಾ ಕೇಂದ್ರ, ಆ ದಿನದ ವಿಷಯ, ಕೋಡ್‌ ಸಂಖ್ಯೆ ಗಮನಿಸಿ ಖಾತ್ರಿಪಡಿಸಿಕೊಳ್ಳಬೇಕು. ಖಜಾನೆಯಿಂದ ಪಡೆದ ಪ್ರಶ್ನೆಪತ್ರಿಕೆ ಬಂಡಲ್‌ಗಳನ್ನು  ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದ ಬಳಿಕ ಮುಖ್ಯ ಅಧೀಕ್ಷಕರಿಂದ ಸ್ವೀಕೃತಿ ಪತ್ರ ಪಡೆದುಕೊಳ್ಳಿ. ಅದರಲ್ಲಿ ಅವರ ಸಹಿ, ಮೊಹರು ಇರಬೇಕು’ ಎಂದು ತಿಳಿಸಿದರು.

ADVERTISEMENT

‘ಪ್ರಶ್ನೆಪತ್ರಿಕೆ ತಲುಪಿಸುವುದರ ಜತೆಗೆ ಪರೀಕ್ಷೆ ಮುಗಿದ ನಂತರ ಉತ್ತರ ಪತ್ರಿಕೆ ಬಂಡಲ್‌ಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಗೆ ತಲುಪಿಸಬೇಕು. ಉತ್ತರ ಪತ್ರಿಕೆ ಬಂಡಲ್‌ ಪಡೆದು ಬರುವಾಗ ಬಟ್ಟೆ ಕವರ್‌ನಲ್ಲಿ ಸೀಲ್ ಮಾಡಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ’ ಎಂದು ಹೇಳಿದರು.

‘ಉತ್ತರ ಪತ್ರಿಕೆ ಬಂಡಲ್‌ ಸಾಗಣೆ ವೇಳೆ ಯಾವುದೇ ಗೊಂದಲಕ್ಕೆ ಅವಕಾಶ ನೀಡಬಾರದು. ಆಯಾ ದಿನದ ಉತ್ತರ ಪತ್ರಿಕೆ ಬಂಡಲ್‌ಗಳನ್ನು ಡಿಡಿಪಿಐ ಕಚೇರಿಗೆ ತಲುಪಿಸುವಾಗ ನಿಯಮಾನುಸಾರ ಕೇಳುವ ಗೈರು ಹಾಜರಿ, ಪರೀಕ್ಷಾ ಅಕ್ರಮದ ದಾಖಲೆಪತ್ರಗಳನ್ನು ಮುಖ್ಯ ಅಧೀಕ್ಷಕರಿಂದ ಪಡೆದು ತಲುಪಿಸಿ’ ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ತಾಲ್ಲೂಕು ನೋಡಲ್ ಅಧಿಕಾರಿ ಮುನಿರತ್ನಯ್ಯಶೆಟ್ಟಿ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಚೌಡಪ್ಪ, ಮಾರ್ಗಾಧಿಕಾರಿಗಳಾದ ರಾಘವೇಂದ್ರ, ಬೈರೆಡ್ಡಿ, ವೆಂಕಟಾಚಲಪತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.