ADVERTISEMENT

ರಾಹುಲ್ ಗಾಂಧಿ ಗಡಿಪಾರಿಗೆ ಪ್ರಧಾನಿಗೆ ಪತ್ರ: ಛಲವಾದಿ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 13:06 IST
Last Updated 13 ಜನವರಿ 2026, 13:06 IST
<div class="paragraphs"><p>ಛಲವಾದಿ ನಾರಾಯಣಸ್ವಾಮಿ</p></div>

ಛಲವಾದಿ ನಾರಾಯಣಸ್ವಾಮಿ

   

ಕೋಲಾರ: ರಾಹುಲ್ ಗಾಂಧಿ ಭಯೋತ್ಪಾದಕರು ಹಾಗೂ ದೇಶ ದ್ರೋಹಿಗಳ‌ ಜೊತೆ ಸಂಪರ್ಕ‌ ಹೊಂದಿದ್ದಾರೆ. ದೇಶದ ಬಗ್ಗೆ ಅವರಿಗೆ ಕಿಂಚಿತ್ತೂ ಗೌರವವಿಲ್ಲ. ಲೋಕಸಭೆ ಅಧಿವೇಶನ ನಡೆಯುವ ಸಂದರ್ಭದಲ್ಲಿ ವಿದೇಶಕ್ಕೆ ಹೋಗಿ ಭಾರತದ ವಿರುದ್ಧ ಹೇಳಿಕೆ ನೀಡುತ್ತಾರೆ. ದೇಶಕ್ಕೆ ಅಪಮಾನ ಮಾಡುತ್ತಿರುವ ಅವರನ್ನು ಗಡಿಪಾರು ‌ಮಾಡುವಂತೆ ಪ್ರಧಾನಿಗೆ ಪತ್ರ ಬರೆದಿದ್ದೇ‌ನೆ ಎಂದು ವಿಧಾನ ಪರಿಷತ್ ವಿರೋಧ‌ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ನಗರ ಹೊರವಲಯದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ನಕಲಿ ಗಾಂಧಿಗಳ ಹೆಸರನ್ನು ವಿಶ್ವವಿದ್ಯಾಲಯಗಳಿಗೆ,‌ ವಿಮಾನ‌ ನಿಲ್ದಾಣಗಳಿಗೆ, ರೈಲು ನಿಲ್ದಾಣಗಳಿಗೆ, ಸರ್ಕಾರಿ ಆಸ್ತಿಗಳಿಗೆ ಇಡಲಾಗಿದೆ. ಎಲ್ಲವನ್ನೂ ಕೂಡಲೇ ತೆಗೆದು ಹಾಕುವಂತೆಯೂ ಪತ್ರ ಬರೆದಿದ್ದೇನೆ’ ಎಂದರು.

ADVERTISEMENT

ಜವಾಹರಲಾಲ್‌ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹೆಸರಲ್ಲಿ ದೇಶದಲ್ಲಿ ಎಷ್ಟೊಂದು ಯೋಜನೆಗಳಿವೆ? ದೇಶವೇನು ಅವರ ಆಸ್ತಿಯೇ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ನಲ್ಲಿ ನೆಹರೂ ಹೊರತುಪಡಿಸಿ ಉಳಿದವರೆಲ್ಲಾ ನಕಲಿ ಗಾಂಧಿಗಳು. ಈ ದೇಶ ಲೂಟಿ‌ ಮಾಡಲು ಬಂದಿರುವ ಇವರೆಲ್ಲಾ ಗಾಂಧಿ ಕುಟುಂಬಕ್ಕೆ ಸೇರಿದವರಲ್ಲ. ಫಿರೋಜ್ ಖಾನ್ ಮದುವೆಯಾದ ಇಂದಿರಾ ಗಾಂಧಿ ಹೆಸರು ಇಂದಿರಾ ಖಾನ್ ಆಗಬೇಕಿತ್ತು. ಹಾಗೆಯೇ ರಾಜೀವ್ ಖಾನ್, ರಾಹುಲ್ ಖಾನ್ ಎಂದು ಆಗಬೇಕಿತ್ತು ಎಂದು ಟೀಕಾ ಪ್ರಹಾರ ನಡೆಸಿದರು.

ವಿಬಿ–ಜಿ ರಾಮ್‌ ಜಿ ಯೋಜನೆ ಜಾರಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೀಡಿರುವ ಪಂಥಾಹ್ವಾನವನ್ನು ನಾವು ಸ್ವೀಕರಿಸುತ್ತೇನೆ. ಮುಕ್ತ ಸಂವಾದಕ್ಕೆ ನಾವು ಸಿದ್ಧ. ವಿಧಾನಸೌಧದ ಮುಂದೆ ವೇದಿಕೆ ಸಿದ್ಧಪಡಿಸಲಿ ಎಂದು ಸವಾಲು ಹಾಕಿದರು.

ಎರಡು ದಿನಗಳ ವಿಶೇಷ ಅಧಿವೇಶನ‌ ಕರೆದಿರುವುದು ನಮಗೆ ಸಿಕ್ಕಿರುವ ಅದ್ಭುತ ಅವಕಾಶವಾಗಿದ್ದು, ನಾವು ಸ್ವಾಗತಿಸುತ್ತೇವೆ. ಈ ಮೂಲಕ ಅಕ್ರಮ‌ ಬಿಚ್ಚಿಡುತ್ತೇವೆ. ಕಾಂಗ್ರೆಸ್‌ನವರು ಬೇಕಾದರೆ ನ್ಯಾಯಾಲಯಕ್ಕೂ‌ ಹೋಗಲಿ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.