ADVERTISEMENT

ಮುಂದುವರಿದ ವರುಣ ದೇವನ ಅಬ್ಬರ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 12:39 IST
Last Updated 13 ಅಕ್ಟೋಬರ್ 2021, 12:39 IST

ಕೋಲಾರ: ಜಿಲ್ಲೆಯಲ್ಲಿ ವರುಣ ದೇವನ ಅಬ್ಬರ ಮುಂದುವರಿದಿದ್ದು, ಮಂಗಳವಾರ ರಾತ್ರಿ ಸುರಿದ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಗೆ ರೈತರ ಬದುಕು ನೀರು ಪಾಲಾಗಿದೆ.

ಜಮೀನುಗಳಲ್ಲಿ ಮಳೆ ನೀರು ಕೆರೆಯಂತೆ ನಿಂತಿದ್ದು, ರಾಗಿ ಹಾಗೂ ಶೇಂಗಾ ಬೆಳೆ ಕೊಳೆಯಲಾರಂಭಿಸಿವೆ. ಸತತ ಮಳೆಗೆ ಜಿಲ್ಲೆಯ ಬಹುಪಾಲು ಕೆರೆಗಳು ತುಂಬಿ ಕೋಡಿ ಹರಿದಿದ್ದು, ಕೆರೆಯ ಅಕ್ಕಪಕ್ಕದ ಜಮೀನುಗಳು ಜಲಾವೃತವಾಗಿವೆ. ಹಲವೆಡೆ ಮಳೆ ನೀರು ಜಮೀನುಗಳಲ್ಲಿ ಹಳ್ಳದಂತೆ ಹರಿಯುತ್ತಿದ್ದು, ಬೆಳೆಗಳು ಕೊಚ್ಚಿ ಹೋಗಿವೆ. ಜಮೀನುಗಳಲ್ಲಿನ ಕೊಳವೆ ಬಾವಿ, ಕೃಷಿ ಯಂತ್ರೋಪಕರಣಗಳು ನೀರಿನಲ್ಲಿ ಮುಳುಗಿವೆ.

ಮಳೆಯ ಕಾರಣಕ್ಕೆ ವಾತಾವರಣದಲ್ಲಿ ತೇವಾಂಶ ಹೆಚ್ಚಳಗೊಂಡು ತೋಟಗಾರಿಕೆ ಬೆಳೆಗಳು ಮತ್ತು ಹಣ್ಣಿನ ಬೆಳೆಗಳಲ್ಲಿ ಶಿಲೀಂಧ್ರ ರೋಗ ಕಾಣಿಸಿಕೊಂಡಿದೆ. ಹೂವು ಕಟಾವಿಗೆ ಸಮಸ್ಯೆಯಾಗಿದ್ದು, ಹೂವುಗಳು ಜಮೀನಿನಲ್ಲೇ ಕೊಳೆಯಲಾರಂಭಿಸಿವೆ. ಜಮೀನುಗಳು ಕೆಸರು ಗದ್ದೆಯಂತಾಗಿದ್ದು, ಬೆಳೆ ನಷ್ಟದ ಸಮೀಕ್ಷೆಗೂ ಮಳೆರಾಯ ಬಿಡುವು ಕೊಟ್ಟಿಲ್ಲ.

ADVERTISEMENT

ಜಿಲ್ಲೆಯಲ್ಲಿ ಮಂಗಳವಾರ (ಅ.12) ರಾತ್ರಿಯಿಂದ ಬುಧವಾರ (ಅ.13) ಬೆಳಿಗ್ಗೆವರೆಗೆ ಸರಾಸರಿ 42 ಮಿಲಿ ಮೀಟರ್‌ ಮಳೆಯಾಗಿದೆ. ಇನ್ನೂ 2 ದಿನ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.