ADVERTISEMENT

ಜಿಲ್ಲೆಯಲ್ಲಿ 5 ದಿನ ಮಳೆ ಸಾಧ್ಯತೆ: ಕೃಷಿ ಕೇಂದ್ರ

ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಔಷಧೋಪಚಾರಕ್ಕೆ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2025, 5:59 IST
Last Updated 22 ಜುಲೈ 2025, 5:59 IST
   

ಕೋಲಾರ: ಜಿಲ್ಲೆಯಲ್ಲಿ ಮುಂದಿನ ಐದು ದಿನ ಭಾರಿ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದ್ದು, ಈ ಸಂಬಂಧ ಹಳದಿ ಅಲರ್ಟ್ ಘೋಷಿಸಲಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಪ್ರಕಟಣೆ ತಿಳಿಸಿದೆ.

ಜಿಲ್ಲಾ ಕೃಷಿ ಹವಾಮಾನ ಘಟಕ, ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವರದಿಯಂತೆ ಉತ್ತರ ಬಂಗಾಳಕೊಲ್ಲಿಯ ಮೇಲೆ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಜಿಲ್ಲೆಯಲ್ಲಿ ಮುಂದಿನ ಐದು ದಿನ ಉತ್ತಮ ಮಳೆಯಾಗಲಿದೆ. ಭಾರತೀಯ ಹವಾಮಾನ ಇಲಾಖೆ ದಕ್ಷಿಣ ಒಳನಾಡು ಪ್ರದೇಶಕ್ಕೆ ಜುಲೈ 21 ರಿಂದ 26 ರವರೆಗೆ ಹಳದಿ ಅಲರ್ಟ್ ಘೋಷಿಸಿದೆ. ಜಿಲ್ಲೆಯಾದ್ಯಂತ ಮಳೆ, ಮೋಡಕವಿದ ವಾತಾವರಣ ಹಾಗೂ ಹೆಚ್ಚು ಆದ್ರತೆಯುಳ್ಳ ಹವಾಗುಣ ಮುಂದುವರೆಯುವ ಕಾರಣ ಜಿಲ್ಲೆಯಲ್ಲಿ ಬೆಳೆದಿರುವಂತಹ ಹಲವಾರು ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಕೈಗೊಳ್ಳಬೇಕಾದ ಕೃಷಿ ಚಟುವಟಿಕೆಗಳ ಬಗ್ಗೆಯೂ ಸಲಹೆ ನೀಡಿದೆ.

ಕೃಷಿ ಸಲಹೆಗಳು:

ADVERTISEMENT

ನೆಲಗಡಲೆ/ಶೇಂಗಾ: ಬೆಳವಣಿಗೆ ಹಂತದಲ್ಲಿದ್ದು ಥ್ರಿಪ್ಸ್ ಮತ್ತು ಜಿಗಿಹುಳು ನಿರ್ವಹಣೆಗಾಗಿ ಡೈಮೆಥೊಯೇಟ್ 30 ಇ.ಸಿ. @ 1.7 ಮಿ.ಲೀ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ನಾಟಿ ಮಾಡಿದ ಮೂವತ್ತು ದಿನಗಳ ನಂತರ ಪ್ರತಿ ಹೆಕ್ಟೇರಿಗೆ 15 ಕಿ.ಗ್ರಾಂ. ಸಾರಜನಕ ಗೊಬ್ಬರವನ್ನು ಮೇಲು ಗೊಬ್ಬರವಾಗಿ ನೀಡಬೇಕು.

ತೊಗರಿ: ಬೆಳೆಯು ಬೆಳವಣಿಗೆ ಹಂತದಲ್ಲಿರುವುದರಿಂದ ಕಳೆಗಳ ಹತೋಟಿಗಾಗಿ ಅಂತರ ಬೇಸಾಯವನ್ನು ಕೈಗೊಳ್ಳಬೇಕು.

ರಾಗಿ: ಜುಲೈ ತಿಂಗಳಲ್ಲಿ ಬೆಳೆಯಬಹುದಾದ ರಾಗಿ ತಳಿಗಳು: ಎಂ.ಆರ್.1, ಎಂ.ಆರ್ 6, ಕೆ.ಎಂ.ಆರ್. 301, ಎಂ.ಎಲ್-365. ಬಿತ್ತನೆಗೆ ಮೊದಲು ಪ್ರತಿ ಕೆ.ಜಿ ಬೀಜಕ್ಕೆ 2 ಗ್ರಾಂ ಕಾರ್ಬನ್ಡೈಜಿಯಮ್‍ನಿಂದ ಬೀಜೋಪಚಾರ ಮಾಡಬೇಕು.

ಅವರೆ: ಎಚ್ ಎ -4 ತಳಿಯನ್ನು ಜುಲೈನಿಂದ ಆಗಸ್ಟ್ ತಿಂಗಳಲ್ಲಿ ಬಿತ್ತಲಾಗುತ್ತದೆ. ಎಕರೆಗೆ 10-12 ಕೆ.ಜಿ. ಯಷ್ಟು ಬಿತ್ತನೆ ಬೀಜ ಬೇಕಾಗುತ್ತದೆ. ಎಕರೆಗೆ ಬೇಕಾಗುವ 10 ರಿಂದ 12 ಕಿ.ಗ್ರಾಂ ಬೀಜಕ್ಕೆ ಶಿಫಾರಸ್ಸು ಮಾಡಿರುವ ಜೀವಾಣು ಗೊಬ್ಬರಗಳಾದ ರೈಜೋಬಿಯಂ 200 ಗ್ರಾಂ ಮತ್ತು ರಂಜಕ ಕರಗಿಸುವ ಜೀವಾಣು- 200 ಗ್ರಾಂ/ಎಕರೆಗೆ ಲೇಪನ ಮಾಡಿ ಅರ್ಧ ಘಂಟೆಯ ನಂತರ ಬಿತ್ತನೆ ಮಾಡಬೇಕು ಎಂದು ಸಲಹೆ ನೀಡಿದೆ.

ತೋಟಗಾರಿಕೆ ಸಲಹೆಗಳು: ನೀರಿನ ನಿರ್ವಹಣೆ: ಮುಂಗಾರು ಚುರುಕಾಗಿರುವ ಹಿನ್ನೆಲೆಯಲ್ಲಿ ರೈತರು ತಮ್ಮ ಜಮೀನಿನಲ್ಲಿ ಬಸಿಗಾಲುವೆ ವ್ಯವಸ್ಥೆಯನ್ನು ಕಲ್ಪಿಸುವುದು ಸೂಕ್ತವಾಗಿದೆ.

ತರಕಾರಿ ಬೆಳೆಗಳು ಮೊದಲ ಬೆಳವಣಿಗೆ ಹಂತದಲ್ಲಿದ್ದರೆ, 19:19:19 ರಸಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 2-5 ಗ್ರಾಂ. ನಂತೆ ಬೆರೆಸಿ ಸಿಂಪಡಿಸಿ ಅಥವಾ ನ್ಯಾನೋ ಯೂರಿಯಾವನ್ನು 4 ಮಿ. ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.

ತರಕಾರಿ ಬೆಳೆಗಳು ಹೂವು ಬಿಡುವ ಹಂತದ ಬೆಳೆಯಾದರೆ, ಕ್ಯಾಲ್ಸಿಯಂ ನೈಟ್ರೈಟ್ ಅನ್ನು 5 ಗ್ರಾಂ. ಪ್ರತಿ ಲೀಟರ್ ನೀರಿಗೆ ಮತ್ತು ಬೋರಿಕ್ ಆಮ್ಲ 2 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೇರಿಸಿ ಸಿಂಪರಣೆ ಮಾಡಬೇಕು. ಇದರಿಂದ ಕಾಯಿ ಕಚ್ಚುವ ಪ್ರಮಾಣ ಹೆಚ್ಚಾಗುವುದಲ್ಲದೇ ಹಣ್ಣಿನಲ್ಲಿ ಕಂಡುಬರುವ ಬಿರುಕುಗಳನ್ನು ಕಡಿಮೆಮಾಡುತ್ತದೆ ಜೊತೆಗೆ, ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ

ಮಾವು ಬೆಳೆ: ಹಳೆಯ ಮತ್ತು ನಿರುಪಯುಕ್ತ ಮಾವಿನ ಮರಗಳಲ್ಲಿ ಮೂರನೇ ಹಂತದ ರೆಂಬೆಗಳನ್ನು ಭೂಮಿಯ ಮೇಲ್ಮಟ್ಟದಿಂದ 15 ಅಡಿ ಎತ್ತರದಲ್ಲಿ ಚಾಟನಿ ಮಾಡಿ ಕತ್ತರಿಸಿ ತೆಗೆಯಬೇಕು. ಕತ್ತರಿಸಿದ ಭಾಗವನ್ನು ಶೇ. 1.0 ರ ಬೋರ್ಡೋ ಮುಲಾಮಿನಿಂದ/ಬ್ಲೈಟಾಕ್ಸ್ ನಿಂದ ಉಪಚರಿಸಬೇಕು ಅಥವಾ ಲೇಪಿಸಬೇಕು. ಇದನ್ನು ಜುಲೈ-ಆಗಸ್ಟ್ ತಿಂಗಳಲ್ಲಿ ಮಾಡಬೇಕು.

ರೇಷ್ಮೆ ಕೃಷಿ ಸಲಹೆ: ಜೇಡರ ಗುಂಪಿಗೆ ಸೇರಿದ ಕೀಟವಲ್ಲದ ಪೀಡೆಯಾದ ಹಳದಿ ಮೈಟ್‍ನುಸಿ ಪಾಲಿಫ್ಯಾಗೋಟಾರ್ಸೋನೀಮಸ್ ಲ್ಯಾಟೂಸ್ ಹಿಪ್ಪುನೇರಳೆ ತೋಟದಲ್ಲಿ ವೇಗವಾಗಿ ಹರಡಿ ಸೊಪ್ಪಿನ ಇಳುವರಿ ಮತ್ತು ಗುಣಮಟ್ಟವನ್ನು ಹಾನಿ ಮಾಡುತ್ತಿದೆ.

ಈ ಹುಳುಗಳು ಎಳೆಯ, ಕುಡಿ ಎಲೆಗಳ ರಸಹೀರಿ ಬೆಳೆಯುತ್ತವೆ. ಬಾಧಿತ ಎಲೆಗಳು ಕ್ರಮೇಣ ಕಂದು ಬಣ್ಣಕ್ಕೆ ತಿರುಗಿ ಅಂಚುಗಳು ಮೇಲ್ಮುಖ ಅಥವಾ ಕೆಳಮುಖವಾಗಿ ಸುರುಳಿಯಾಗುತ್ತವೆ.

ಮೈಟ್‍ನುಸಿ ನಿಯಂತ್ರಿಸಲು ಎಲೆಗಳ ಕೆಳಭಾಗದಲ್ಲಿ ರಭಸವಾಗಿ ಲೆಸರ್ ಇರಿಗೆಷನ್ ನೀಡುವುದು. ಪರಭಕ್ಷಕ ಕೀಟ ಬ್ಲಾಪ್ಟೋಸ್ಟೆಥಸ್ ಪಲ್ಲೆಸ್ಸೆನ್ಸ್ @ ಎಕರೆಗೆ 1000 ಅಪ್ಸರ/ಪ್ರೌಢ ಕೀಟಗಳನ್ನು ಹಿಪ್ಪುನೇರಳೆ ತೋಟಗಳಲ್ಲಿ ಬಿಡುಗಡೆ ಮಾಡುವುದು.

ಪ್ರಾಪರ್‍ಜೈಟ್ (57% ಇಸಿ) / ಕ್ಲೋರೊಪಿನಾಪೈರ್ (10% ಎಸ್.ಸಿ.) ರಾಸಾಯನಿಕವನ್ನು 1.5 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಕಟಾವು ಮಾಡಿದ 12-15 ದಿನಗಳ ನಂತರ ಗಿಡದ ಎಲ್ಲಾ ಭಾಗಗಳು ನೆನೆಯುವಂತೆ ಸಿಂಪಡಿಸಬೇಕು ಎಂದು ಪ್ರಕಟಣೆಯಲ್ಲಿ ಸಲಹೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.