ADVERTISEMENT

ರಾಜ್‌ಪೇಟ್ ರೋಡ್‌: ಒತ್ತುವರಿ ತೆರವಿಗೆ ಭರವಸೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 2:38 IST
Last Updated 25 ಮಾರ್ಚ್ 2022, 2:38 IST
ಜೋಡಕೃಷ್ಣಾಪುರದಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ತಹಶೀಲ್ದಾರ್ ಕೆ.ಎನ್. ಸುಜಾತಾ, ಸರ್ಕಲ್‌ ಇನ್‌ಸ್ಪೆಕ್ಟರ್ ವೆಂಕಟೇಶ್‌, ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ಗುರುವಾರ ಸ್ಥಳ ಪರಿಶೀಲನೆ ನಡೆಸಿದರು
ಜೋಡಕೃಷ್ಣಾಪುರದಲ್ಲಿ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಬಗ್ಗೆ ತಹಶೀಲ್ದಾರ್ ಕೆ.ಎನ್. ಸುಜಾತಾ, ಸರ್ಕಲ್‌ ಇನ್‌ಸ್ಪೆಕ್ಟರ್ ವೆಂಕಟೇಶ್‌, ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ಗುರುವಾರ ಸ್ಥಳ ಪರಿಶೀಲನೆ ನಡೆಸಿದರು   

ಕೆಜಿಎಫ್‌: ‘ಸರ್ಕಾರಿ ಜಮೀನು ಒತ್ತುವರಿಯಾಗಿದ್ದರೆ ಅದನ್ನು ತೆರವುಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಲಾಗುವುದು’ ಎಂದು ತಹಶೀಲ್ದಾರ್ ಕೆ.ಎನ್‌. ಸುಜಾತಾ ಹೇಳಿದರು.

ತಾಲ್ಲೂಕಿನ ರಾಜ್‌ಪೇಟ್ ರೋಡಿನ ಬಳಿ ಇರುವ ಜೋಡಿ ಕೃಷ್ಣಾಪುರ ಗ್ರಾಮಕ್ಕೆ ಗುರುವಾರ ಭೇಟಿ ನೀಡಿದ್ದ ಅವರು, ಸರ್ವೆ ನಂ. 3ರಲ್ಲಿ ಒತ್ತುವರಿಯಾಗಿದೆ ಎಂದು ಹೇಳಲಾದ ಪ್ರದೇಶವನ್ನು ವೀಕ್ಷಿಸಿದರು.

ಈ ನಂಬರ್‌ನಲ್ಲಿ ಖಾಸಗಿ ವ್ಯಕ್ತಿಯೊಬ್ಬರಿಗೆ ಎರಡು ಎಕರೆ ಜಮೀನು ಮಂಜೂರಾಗಿದೆ ಎಂದು ಹೇಳಲಾಗುತ್ತಿದೆ. ಅವರ ದಾಖಲೆಗಳನ್ನು ತರಲು ತಿಳಿಸಲಾಗಿದೆ. ಅಕಸ್ಮಾತ್ ಮಂಜೂರಾದ ಜಾಗಕ್ಕಿಂತ ಹೆಚ್ಚಿನ ಜಾಗವನ್ನು ಅವರು ಅತಿಕ್ರಮ ಮಾಡಿಕೊಂಡಿದ್ದರೆ ಜಿಲ್ಲಾಡಳಿತದ ಮೂಲಕ ತೆರವುಗೊಳಿಸಲಾಗುವುದು. ರಾಜಕಾಲುವೆಯನ್ನು ಮುಚ್ಚಿ ಸಮತಟ್ಟು ಮಾಡಿರುವುದು ಗೋಚರವಾಗುತ್ತಿದೆ. ಅದನ್ನು ತೆರವುಗೊಳಿಸಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ತಹಶೀಲ್ದಾರ್
ತಿಳಿಸಿದರು.

ADVERTISEMENT

ಕೋಳಿ ಪುಕ್ಕಗಳಿಂದ ಕೂಡಿದ ಮುಖ್ಯರಸ್ತೆಯನ್ನು ವೀಕ್ಷಿಸಿದ ಅವರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿದರು.

‘ನಮಗೆ ಶಾಲೆಗೆ ಬರಲು ದಾರಿ ಇಲ್ಲ. ಕೋಳಿ ಪುಕ್ಕ, ಮಾಂಸದ ತ್ಯಾಜ್ಯಗಳನ್ನು ಶಾಲೆಗೆ ಬರುವ ದಾರಿಯಲ್ಲಿ ಹಾಕುತ್ತಿದ್ದಾರೆ. ಊರಿನ ಕಸ ಕೂಡ ಇಲ್ಲಿಯೇ ಸುರಿಯುತ್ತಾರೆ. ಶಾಲೆಯಲ್ಲಿದ್ದರೂ ವಾಸನೆ ಬರುತ್ತಿದೆ. ಮಳೆ ಬಂದರೆ ಶಾಲೆಗೆ ಬರಲು ಕೂಡ ಸಾಧ್ಯವಾಗುವುದಿಲ್ಲ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಸರ್ಕಲ್‌ ಇನ್‌ಸ್ಪೆಕ್ಟರ್ ವೆಂಕಟೇಶ್‌, ಸಹಾಯಕ ಸಬ್‌ ಇನ್‌ಸ್ಪೆಕ್ಟರ್ ಶಶಿಕಲಾ, ರಾಜಸ್ವ ನಿರೀಕ್ಷಕ ನಾರಾಯಣಸ್ವಾಮಿ, ಶ್ರೀನಿವಾಸಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು, ಮುಖಂಡರಾದ ತ್ರಿಲೋಕಚಂದ್ರ, ಸುಬ್ರಹ್ಮಣಿ, ವಿಶ್ವನಾಥ ರೆಡ್ಡಿ, ಶಿವ, ಬಾಬು, ಮಲ್ಲಿಕಾರ್ಜುನ ರೆಡ್ಡಿ, ಬಾಷ, ಜೆ.ಕೆ. ಪುರ ರಘು, ಆನಂದ್‌, ನೂರುಲ್ಲಾ, ವಿಶ್ವನಾಥ್, ವೇಣುಗೋಪಾಲ್‌ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.