ADVERTISEMENT

ಬಂಗಾರಪೇಟೆ: ಗಡಿಯಲ್ಲಿ ರಾಜ್ಯೋತ್ಸವ ಆಚರಣೆ ಸವಾಲು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2022, 6:50 IST
Last Updated 2 ನವೆಂಬರ್ 2022, 6:50 IST
ಬಂಗಾರಪೇಟೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಉದ್ಘಾಟಿಸಿದರು
ಬಂಗಾರಪೇಟೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಉದ್ಘಾಟಿಸಿದರು   

ಬಂಗಾರಪೇಟೆ: ‘ರಾಜ್ಯದ ಮಧ್ಯಭಾಗದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವುದು ದೊಡ್ಡದಲ್ಲ. ಗಡಿ ಭಾಗದಲ್ಲಿ ಆಚರಣೆ ಮಾಡುವುದು ನಿಜಕ್ಕೂ ಸವಾಲಿನ ಕೆಲಸ’ ಎಂದು ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

ಪಟ್ಟಣದ ಪುರಸಭೆ ಕಚೇರಿ ಮುಂಭಾಗ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಂಗಾರಪೇಟೆ ಗಡಿಭಾಗವಾಗಿದ್ದು, ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಮತ್ತು ತಮಿಳು ಭಾಷಿಕರಿದ್ದಾರೆ. ಒಂದು ಕಡೆ ಎಕ್ಕಡ; ಮತ್ತೊಂದು ಕಡೆ ಎನ್ನಡ ಇವೆರಡರ ಮಧ್ಯೆ ಕನ್ನಡ ಮೆಟ್ಟಿನಿಲ್ಲಬೇಕಿದೆ ಎಂದರು.

ADVERTISEMENT

ಪಟ್ಟಣದಲ್ಲಿ 1976ರಲ್ಲಿಯೇ ಕನ್ನಡ ಭವನ ಕಟ್ಟಲು ಪುರಸಭೆ ಸ್ಧಳ ನೀಡಿತು. ಮತ್ತೆ 50*100 ಅಡಿ ಜಾಗ ಕೂಡ ನೀಡಲಾಗಿದೆ. ಎರಡ್ಮೂರು ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಎಂದರು.

ನ. 4ಮತ್ತು 5ರಂದು ತಾಲ್ಲೂಕಿಗೆ ನಾಡಪ್ರಭು ಕೆಂಪೇಗೌಡರ ರಥ ಆಗಮಿಸಲಿದೆ. ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಸ್ವಾಗತಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.

ತಹಶೀಲ್ದಾರ್ ಎಂ. ದಯಾನಂದ ಮಾತನಾಡಿ, ಆಲೂರು ವೆಂಕಟರಾಯರ ನೇತೃತ್ವದಲ್ಲಿ ರಾಜ್ಯದಲ್ಲಿ ಏಕೀಕರಣದ ಚಳವಳಿಯೇ ನಡೆಯಿತು. ಈ ಕಾಲದ ವಿದ್ಯಾರ್ಥಿಗಳಿಗೆ ಇದರ ಕಲ್ಪನೆಯೇ ಇರದು. ಇತಿಹಾಸವನ್ನು ಮುಂದಿನ ಪೀಳಿಗೆಗೆ ಮುಟ್ಟಿಸುವಲ್ಲಿ ಸೋಲುತ್ತಿದ್ದೇವೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ ಎಂದು ಹೇಳಿದರು.

ಜಗತ್ತಿನ ಅತ್ಯಂತ ಪ್ರಾಚೀನ ಭಾಷೆ ನಮ್ಮದು. ಶ್ರೇಷ್ಠ ಸಾಹಿತ್ಯ ರಚಿಸಿದವರು ಕನ್ನಡಿಗರು. ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದವರು ಕನ್ನಡಿಗರು. ದೇಶದ ಉದ್ದಗಲಕ್ಕೂ ವಿವಿಧ ಕ್ಷೇತ್ರದಲ್ಲಿ ಕನ್ನಡಿಗರು ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು
ಹೇಳಿದರು.

ಕಳೆಕಟ್ಟಿದ ಮೆರವಣಿಗೆ: ಪಟ್ಟಣದಲ್ಲಿ ಕನ್ನಡ ರಾಜ್ಯೋತ್ಸವ ಮೆರವಣಿಗೆ ನಡೆಯಿತು. ಶಾಸಕ ನಾರಾಯಣಸ್ವಾಮಿ ಮೆರವಣಿಗೆಗೆ ಚಾಲನೆ ನೀಡಿದರು. ಪಂಚಾಯಿತಿಗೊಂದು ಸ್ತಬ್ಧ ಚಿತ್ರ ಸೇರಿದಂತೆ ವಿವಿಧ ಇಲಾಖೆಗಳಿಂದ ಸ್ತಬ್ಧ ಚಿತ್ರಗಳು ಭಾಗವಹಿಸಿದ್ದವು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ಫರ್ಜಾನ ಸುಹೇಲ್, ಉಪಾಧ್ಯಕ್ಷೆ ಬಿ.ಎಸ್. ಶಾರದ ವಿವೇಕಾನಂದ, ಕರಾಸನೌ ಸಂಘದ ಅಧ್ಯಕ್ಷ ಸಿ. ಅಪ್ಪಯ್ಯಗೌಡ, ಕನ್ನಡ ಸಾಹಿತ್ಯ ಪರಿಷತ್‌ನ ತಾಲ್ಲೂಕು ಅಧ್ಯಕ್ಷ ಆರ್. ಸಂಜೀವಪ್ಪ, ಪುರಸಭೆ ಮುಖ್ಯಾಧಿಕಾರಿ ಚಲಪತಿ, ಇಒ ವೆಂಕಟೇಶಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎನ್. ಸುಕನ್ಯ, ಪುರಸಭೆ ಮಾಜಿ ಅಧ್ಯಕ್ಷೆ ಗಂಗಮ್ಮ ರಂಗರಾಮಯ್ಯ, ಸದಸ್ಯರಾದ ಎಸ್. ವೆಂಕಟೇಶ್, ಗೋವಿಂದ, ರೇಣುಕಾ, ಪೂನ್ನಿ, ಕನ್ನಡ ಗೀತೆ ಗಾಯನ ತಂಡದ ಮಾರುತಿ ಪ್ರಸಾದ್, ವಾದ್ಯ ತಂಡದ ಬಿ.ಟಿ. ಆನಂದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.