ADVERTISEMENT

ಪ್ರೇಯಸಿ ಮೇಲೆ ಅತ್ಯಾಚಾರ: ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2018, 16:18 IST
Last Updated 4 ಜುಲೈ 2018, 16:18 IST

ಕೋಲಾರ: ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ರಾಜೇಶ್ (30) ಎಂಬಾತನಿಗೆ ಇಲ್ಲಿನ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 7 ವರ್ಷ ಜೈಲು ಶಿಕ್ಷೆ ಹಾಗೂ ₹ 12 ಸಾವಿರ ದಂಡ ವಿಧಿಸಿದೆ.

ಕೋಲಾರ ತಾಲ್ಲೂಕಿನ ನರಸಾಪುರ ಗ್ರಾಮದ ರಾಜೇಶ್‌ ತನ್ನ ಊರಿನ ಬಾಲಕಿಯನ್ನು ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿದ್ದ. ನಂತರ ಆಕೆ ಮೇಲೆ 2016ರ ಏ.2ರಂದು ಅತ್ಯಾಚಾರ ಎಸಗಿ ಮದುವೆಯಾಗಲು ನಿರಾಕರಿಸಿದ್ದ. ಈ ಬಗ್ಗೆ ಬಾಲಕಿ ಪ್ರಶ್ನೆ ಮಾಡಿದ್ದಕ್ಕೆ ರಾಜೇಶ್‌ ಮತ್ತು ಕುಟುಂಬ ಸದಸ್ಯರು ಆಕೆ ಮೇಲೆ ಹಲ್ಲೆ ನಡೆಸಿದ್ದರು.

ಬಳಿಕ ಬಾಲಕಿ ನೀಡಿದ ದೂರು ಆಧರಿಸಿ ವೇಮಗಲ್ ಠಾಣೆ ಪೊಲೀಸರು ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ, ವಂಚನೆ ಹಾಗೂ ಹಲ್ಲೆ ಆರೋಪದಡಿ ರಾಜೇಶ್‌ನನ್ನು ಬಂಧಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ.ಎಸ್.ರೇಖಾ ಅವರು ರಾಜೇಶ್‌ಗೆ ಶಿಕ್ಷೆ ಮತ್ತು ದಂಡ ವಿಧಿಸಿ ಬುಧವಾರ ಆದೇಶ ಹೊರಡಿಸಿದರು.

ADVERTISEMENT

ಅತ್ಯಾಚಾರ: 7 ವರ್ಷ ಜೈಲು

ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಪವನ್‌ ಕಲ್ಯಾಣ್‌ (24) ಎಂಬಾತನಿಗೆ ಎರಡನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 7 ವರ್ಷ ಜೈಲು ಶಿಕ್ಷೆ ಹಾಗೂ ₹ 10 ಸಾವಿರ ದಂಡ ವಿಧಿಸಿದೆ. ಬಂಗಾರಪೇಟೆ ತಾಲ್ಲೂಕಿನ ಕಾವರನಹಳ್ಳಿಯ ಪವನ್‌ ಕಲ್ಯಾಣ್‌ ಅದೇ ಗ್ರಾಮದ ಬಾಲಕಿಯನ್ನು 2017ರ ಏ.4ರಂದು ಅಪಹರಿಸಿ ಬೈಕ್‌ನಲ್ಲಿ ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದ. ಈ ಸಂಬಂಧ ಬಂಗಾರಪೇಟೆ ಠಾಣೆ ಪೊಲೀಸರು ಮಕ್ಕಳ ವಿರುದ್ಧದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಹಾಗೂ ಅಪಹರಣ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ಪವನ್‌ ಕಲ್ಯಾಣ್‌ನನ್ನು ಬಂಧಿಸಿದ್ದರು.

ನಂತರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ.ಎಸ್.ರೇಖಾ ಅವರು ಪವನ್‌ ಕಲ್ಯಾಣ್‌ಗೆ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ಬುಧವಾರ ಆದೇಶ ಹೊರಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.