ADVERTISEMENT

ರವಿ ಬೆಳಗೆರೆ ಸಾಹಿತ್ಯ ಲೋಕದ ಧೃವತಾರೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2020, 15:21 IST
Last Updated 14 ನವೆಂಬರ್ 2020, 15:21 IST
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ವತಿಯಿಂದ ಕೋಲಾರದಲ್ಲಿ ಶನಿವಾರ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ವತಿಯಿಂದ ಕೋಲಾರದಲ್ಲಿ ಶನಿವಾರ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.   

ಕೋಲಾರ: ‘ಸಾಹಿತಿ ಹಾಗೂ ಪತ್ರಕರ್ತ ರವಿ ಬೆಳಗೆರೆ ಅವರ ಬರವಣಿಗೆ ಓದುಗರನ್ನು ಆಕರ್ಷಿಸುತ್ತದೆ. ಸತ್ಯ ಮತ್ತು ಅರ್ಥಪೂರ್ಣ ವಿಚಾರ ಮಂಡನೆಯಲ್ಲಿ ಅವರ ಬರವಣಿಗೆ ಶೈಲಿ ಓದುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿತ್ತು’ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ಅಧ್ಯಕ್ಷ ಪಿ.ನಾರಾಯಣಪ್ಪ ಅಭಿಪ್ರಾಯಪಟ್ಟರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್‌ ವತಿಯಿಂದ ಇಲ್ಲಿ ಶನಿವಾರ ಹಮ್ಮಿಕೊಂಡಿದ್ದ ರವಿ ಬೆಳೆಗೆರೆ ಅವರ ಶ್ರದ್ಧಾಂಜಲಿ ಸಭೆಯಲ್ಲಿ ಮಾತಾನಾಡಿ, ‘ರವಿ ಬೆಳಗೆರೆ ಅವರ ಸಾವಿನಿಂದ ಕನ್ನಡ ಸಾಹಿತ್ಯ ಲೋಕದ ಧೃವತಾರೆ ಕಣ್ಮರೆಯಾದಂತಾಗಿದೆ’ ಎಂದು ಹೇಳಿದರು.

‘ರವಿ ಬೆಳಗೆರೆಯವರ ಬರಹಗಳು ಓದುಗರನ್ನು ಚಿಂತನೆಗೆ ಹಚ್ಚುತ್ತಿದ್ದವು. ರಾಜ್ಯದ ಜನತೆಗೆ ಚಿರಪರಿಚಿತರಾಗಿ ಮಾರ್ಗದರ್ಶನ ನೀಡುವ ಅವರ ಭಾಷಣಗಳು ಮತ್ತು ಕಾದಂಬರಿಗಳು ಸಮಾಜದ ಒಳಿತನ್ನು ಬಯಸುತ್ತಾ ಕೆಡುಕನ್ನು ತಿದ್ದುವ ಕೆಲಸ ಮಾಡಿದವು’ ಎಂದು ಬಣ್ಣಿಸಿದರು.

ADVERTISEMENT

‘ಅಪರೂಪದ ವ್ಯಕ್ತಿತ್ವದ ರವಿ ಬೆಳಗೆರೆ ಅವರು ತಮ್ಮ ಬರವಣಿಗೆ ಮೂಲಕವೇ ರಾಜ್ಯದಲ್ಲಿ ಮನೆ ಮಾತಾಗಿದ್ದರು. ನಾಡಿನ ಲಕ್ಷಾಂತರ ಯುವಕ ಯುವತಿಯರಲ್ಲಿ ಓದಿನ ಗೀಳು ಬೆಳೆಸಿದ ರವಿ ಬೆಳಗೆರೆ ಅವರು ನಿಜಕ್ಕೂ ಅಕ್ಷರ ಮಾಂತ್ರಿಕ’ ಎಂದು ಶಿಕ್ಷಣ ಇಲಾಖೆ ಇಸಿಓ ಆರ್.ಶ್ರೀನಿವಾಸನ್ ಸ್ಮರಿಸಿದರು.

‘ಕನ್ನಡ ಸಾಹಿತ್ಯ ಕೃಷಿಯಲ್ಲಿ ವೈಶಿಷ್ಟ್ಯತೆ ಉಳಿಸಿಕೊಂಡಿದ್ದ ರವಿ ಬೆಳಗೆರೆ ಅವರು ಚಲನಚಿತ್ರ ನಟರಾಗಿ, ಪತ್ರಕರ್ತರಾಗಿ ಗುರುತಿಸಿಕೊಂಡರು. ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ದಿಕ್ಕು ತೋರಿದರು’ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್‌ ಹೇಳಿದರು.

ಸರ್ಕಾರಿ ನೂತನ ಪದವಿ ಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ವಿ.ರುದ್ರಪ್ಪ, ಸಾಹಿತಿಗಳಾದ ಶರಣಪ್ಪ ಗಬ್ಬೂರು, ಡ್ಯಾನಿಡ ಕೃಷ್ಣಮೂರ್ತಿ, ನಾರಾಯಣಸ್ವಾಮಿ, ರಾಮಚಂದ್ರಪ್ಪ, ಜಗನ್ನಾಥ್‌ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.