ADVERTISEMENT

ಕೋಲಾರ ಜಿಲ್ಲೆಯಲ್ಲಿ ನೀರಿನ ಸೌಕರ್ಯಕ್ಕೆ ₹ 2.50 ಕೋಟಿ ಬಿಡುಗಡೆ: ಜಗದೀಶ್‌

ಸಮಸ್ಯಾತ್ಮಕ ಗ್ರಾಮಗಳಿಗೆ ತ್ವರಿತ ಸೌಲಭ್ಯ: ಜಿ.ಪಂ ಸಿಇಒ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2019, 14:30 IST
Last Updated 8 ಏಪ್ರಿಲ್ 2019, 14:30 IST
ಜಿ.ಜಗದೀಶ್‌
ಜಿ.ಜಗದೀಶ್‌   

ಕೋಲಾರ: ‘ಜಿಲ್ಲೆಯಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ಕೈಗೊಂಡಿರುವ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿವೆ. ಸಮಸ್ಯಾತ್ಮಕ ಗ್ರಾಮಗಳಿಗೆ ತ್ವರಿತವಾಗಿ ನೀರಿನ ಸೌಕರ್ಯ ಕಲ್ಪಿಸಲಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಇಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜನ ಹಾಗೂ ಜಾನುವಾರುಗಳಿಗೆ ನೀರಿನ ಸಮಸ್ಯೆ ಎದುರಾಗಬಾರದು. ಈ ಹಿನ್ನೆಲೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಎಂಜಿನಿಯರ್‌ಗಳಿಗೆ ನೀರಿನ ಸಮಸ್ಯೆ ಸ್ಥಿತಿಗತಿ ಕುರಿತು ನಿಯಮಿತವಾಗಿ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ’ ಎಂದರು.

‘ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಚುನಾವಣೆ ಹಿನ್ನೆಲೆಯಲ್ಲಿ ಸರ್ಕಾರವೇ ನೇರವಾಗಿ ಜಿ.ಪಂ ಸಿಇಒ ಖಾತೆಗೆ ₹ 2.50 ಕೋಟಿ ಬಿಡುಗಡೆ ಮಾಡಿದೆ. ನೀರಿನ ಸಮಸ್ಯೆ ಎದುರಾದರೆ ತಕ್ಷಣವೇ ಟ್ಯಾಂಕರ್ ಅಥವಾ ಖಾಸಗಿ ಕೊಳವೆ ಬಾವಿಗಳಿಂದ ನೀರು ಸರಬರಾಜು ಮಾಡಲಾಗುವುದು’ ಎಂದು ಹೇಳಿದರು.

ADVERTISEMENT

‘ಯಾವುದೇ ಮೂಲದಿಂದ ನೀರು ಲಭ್ಯವಾಗದಿದ್ದರೆ ಸ್ಥಳೀಯರ ಖಾಸಗಿ ಕೊಳವೆ ಬಾವಿ ವಶಕ್ಕೆ ಪಡೆದು ನೀರು ಒದಗಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನೀರು ಲಭ್ಯವಿರುವ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ವಿವರಿಸಿದರು.

ಪ್ರಥಮ ಸ್ಥಾನ: ‘ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆಯು ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ. ಗ್ರಾಮೀಣ ಭಾಗದ ಡಿಜಿಟಲ್ ಸರ್ವಿಸ್‌ ವ್ಯವಸ್ಥೆಯಲ್ಲಿ ಮಾಹಿತಿ ಅಡಕ ಮಾಡುವುದರಲ್ಲಿ ಜಿಲ್ಲೆ ಶೇ 90ರಷ್ಟು ಸಾಧನೆ ಮಾಡಿ ಮುಂಚೂಣಿಯಲ್ಲಿದೆ. ಶೇ 80ರಷ್ಟು ಸಾಧನೆ ಮಾಡಿರುವ ಉತ್ತರ ಕನ್ನಡ ಜಿಲ್ಲೆಯು ದ್ವಿತೀಯ ಹಾಗೂ ಶೇ 78ರಷ್ಟು ಸಾಧನೆ ಮಾಡಿರುವ ಬೆಳಗಾವಿ ಮೂರನೇ ಸ್ಥಾನದಲ್ಲಿದೆ’ ಎಂದು ಮಾಹಿತಿ ನೀಡಿದರು.

‘ನರೇಗಾ ಯೋಜನೆಯಡಿ ಹಿಂದಿನ ಹಣಕಾಸು ವರ್ಷದಲ್ಲಿ ಜಿಲ್ಲೆಗೆ 25 ಲಕ್ಷ ಮಾನವ ದಿನ ಸೃಜಿಸುವ ಗುರಿ ನೀಡಲಾಗಿತ್ತು. ಅಂತಿಮವಾಗಿ 40 ಲಕ್ಷ ಮಾನವ ದಿನ ಸೃಜಿಸಿ ಗುರಿ ಸಾಧಿಸಲಾಯಿತು. 2019–20ನೇ ಸಾಲಿನಲ್ಲಿ 57 ಲಕ್ಷ ಮಾನವ ದಿನ ಸೃಜಿಸುವ ಗುರಿ ಕೇಳಿದ್ದೆವು. ಆದರೆ, ನರೇಗಾ ಅನುಷ್ಠಾನದಲ್ಲಿ ಮೊದಲ ಸ್ಥಾನದಲ್ಲಿರುವ ಜಿಲ್ಲೆಗೆ ಸರ್ಕಾರ 70 ಲಕ್ಷ ಮಾನವ ದಿನ ಸೃಜಿಸುವ ಗುರಿ ನೀಡಿದೆ’ ಎಂದರು.

200 ಅಂಗನವಾಡಿ: ‘ನರೇಗಾ ಅಡಿ ಜಿಲ್ಲೆಯಲ್ಲಿ ಹಿಂದಿನ ವರ್ಷ 150 ಅಂಗನವಾಡಿ ಕೇಂದ್ರ ನಿರ್ಮಿಸುವ ಗುರಿ ಇತ್ತು. ಈ ಪೈಕಿ 102 ಅಂಗನವಾಡಿ ಕಾಮಗಾರಿ ಪೂರ್ಣಗೊಂಡಿದ್ದು, 48 ಕೇಂದ್ರಗಳು ಬಾಕಿ ಇವೆ. ಈ ಬಾರಿ 200 ಅಂಗನವಾಡಿ ಕಟ್ಟಡ ಕೇಳಲಾಗಿದೆ. ಶಾಲಾ ಕಾಂಪೌಂಡ್, ಆಟದ ಮೈದಾನ ನಿರ್ಮಾಣಕ್ಕೆ ಒತ್ತು ನೀಡಲಾಗುವುದು. ನೀರು ಸಂಗ್ರಹಕ್ಕೆ ಸಣ್ಣ ಪ್ರಮಾಣದ ಜಲಾನಯನ ಪ್ರದೇಶ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ’ ಎಂದು ವಿವರಿಸಿದರು.

‘ನೀಲಗಿರಿ, ಅಕೇಷಿಯಾ ಮರ ತೆರವುಗೊಳಿಸಿ ಮಾವು ಸೇರಿದಂತೆ ಉಪಯುಕ್ತ ಗಿಡಗಳನ್ನು ನೆಡಲು, ದನದ ಕೊಟ್ಟಿಗೆ ನಿರ್ಮಾಣ, ರೇಷ್ಮೆ ಹುಳು ಸಾಕಾಣಿಕೆ ಮನೆ ನಿರ್ಮಾಣಕ್ಕೆ ನರೇಗಾದಲ್ಲಿ ಅವಕಾಶ ಕೋರಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ’ ಎಂದು ಹೇಳಿದರು.

ಹೂಳೆತ್ತುವ ಕೆಲಸ: ‘ಜಿಲ್ಲೆಯ 1,900 ಗ್ರಾಮಗಳಲ್ಲಿ ರೈತರ ಸಹಕಾರದೊಂದಿಗೆ ನರೇಗಾ ಅಡಿ ಗ್ರಾಮಕ್ಕೆ ಒಂದರಂತೆ ಕೆರೆ ಹೂಳೆತ್ತುವ ಕೆಲಸ ದೊರಕಿಸಲು ಉದ್ದೇಶಿಸಲಾಗಿದೆ. ಜತೆಗೆ ಪ್ರಾಣಿ ಪಕ್ಷಿಗಳಿಗೆ ಕೆರೆಯಲ್ಲಿ ದ್ವೀಪ ನಿರ್ಮಿಸಿ ಗಿಡಗಳನ್ನು ನೆಡಲಾಗುತ್ತದೆ. ಕೆರೆಗಳನ್ನು ಗುರುತಿಸುವಂತೆ ಪಿಡಿಒಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

‘ಗ್ರಾಮದ ಕೆರೆಯಲ್ಲಿ ಆ ಭಾಗದ ಪ್ರತಿ ಕುಟುಂಬಕ್ಕೂ ನಿಗದಿತ ಪ್ರಮಾಣದಲ್ಲಿ ಹೂಳೆತ್ತಲು ಜಾಗ ಗುರುತಿಸಿ ನೀಡಲಾಗುವುದು. ಪತಿ- ಪತ್ನಿಗೆ ಸೇರಿ ದಿನಕ್ಕೆ ₹ 500 ಕೂಲಿ ನೀಡಲಾಗುವುದು. ಬಿಡುವಿನ ವೇಳೆಯಲ್ಲೇ ಹೂಳು ತೆಗೆಯಬಹುದು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಂಘ ಸಂಸ್ಥೆಗಳ ಸಹಕಾರ ಪಡೆಯಲಾಗುವುದು. ಕೆರೆ ಮಣ್ಣು ಸಾಗಾಣಿಕೆಗೆ ನೆರವಾಗಲು ರಾಜ್ಯ ಸರ್ಕಾರದ ಜಲಾಮೃತ ಯೋಜನೆಯನ್ನು ಜತೆಗೆ ಸೇರಿಸಿಕೊಳ್ಳಲಾಗುವುದು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.