ADVERTISEMENT

ಕೋಲಾರ: ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 16:20 IST
Last Updated 17 ಆಗಸ್ಟ್ 2021, 16:20 IST
ಮಾಲೂರು ತಾಲ್ಲೂಕಿನ ಕೆ.ಜಿ ಹಳ್ಳಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಿಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಟೇಕಲ್ ಹೋಬಳಿ ಘಟಕದ ಸದಸ್ಯರು ಕೋಲಾರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು
ಮಾಲೂರು ತಾಲ್ಲೂಕಿನ ಕೆ.ಜಿ ಹಳ್ಳಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಿಸುವಂತೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಟೇಕಲ್ ಹೋಬಳಿ ಘಟಕದ ಸದಸ್ಯರು ಕೋಲಾರದಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು   

ಕೋಲಾರ: ಮಾಲೂರು ತಾಲ್ಲೂಕಿನ ಕೆ.ಜಿ ಹಳ್ಳಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಟೇಕಲ್ ಹೋಬಳಿ ಘಟಕದ ಸದಸ್ಯರು ಇಲ್ಲಿ ಮಂಗಳವಾರ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.

‘ಕೋಲಾರ, ಮಾಲೂರು, ಬಂಗಾರಪೇಟೆ ಮತ್ತು ಮಾಸ್ತಿ ಮುಖ್ಯ ರಸ್ತೆ ಮಧ್ಯೆ ಹಳಿ ಹಾದು ಹೋಗಿದೆ. ಈ ಭಾಗದಲ್ಲಿ ರೈಲ್ವೆ ಗೇಟ್ ನಿರ್ಮಿಸಲಾಗಿದ್ದು, ಬೆಂಗಳೂರು ಮತ್ತು ಚೆನ್ನೈ ನಡುವೆ ಅರ್ಧ ತಾಸಿಗೊಂದು ರೈಲು ಸಂಚರಿಸುತ್ತವೆ. ಪ್ರತಿ ಬಾರಿ ರೈಲು ಬಂದಾಗ ಗೇಟ್‌ ಹಾಕುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ’ ಎಂದು ಸಂಘಟನೆ ಸದಸ್ಯರು ಅಳಲು ತೋಡಿಕೊಂಡರು.

‘ಪ್ರತಿ ಬಾರಿ ರೈಲ್ವೆ ಗೇಟ್ ಹಾಕಿದಾಗ ಕಿಲೋಮೀಟರ್‌ಗಟ್ಟಲೇ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಆಂಬುಲೆನ್ಸ್‌ಗಳು ವಾಹನ ದಟ್ಟಣೆಯಲ್ಲಿ ಸಿಲುಕಿ ರೋಗಿಗಳಿಗೆ ಸಮಸ್ಯೆಯಾಗುತ್ತಿದೆ. ರೈಲ್ವೆ ಮೇಲ್ಸೇತುವೆಗೆ ಈ ಹಿಂದೆಯೇ ಅನುದಾನ ಬಿಡುಗಡೆಯಾಗಿದೆ. ಆದರೂ ಮೇಲ್ಸೇತುವೆ ನಿರ್ಮಾಣ ಮಾಡಿಲ್ಲ’ ಎಂದು ಸಂಘಟನೆಯ ಜಿಲ್ಲಾ ಸಂಚಾಲಕ ಜೆ.ಎಚ್‌.ಶ್ರೀನಾಥ್ ದೂರಿದರು.

ADVERTISEMENT

‘ಬಂಗಾರಪೇಟೆ, ಮಾಲೂರು, ಮಾಸ್ತಿ ಹಾಗೂ ಕೋಲಾರಕ್ಕೆ ಹೋಗುವ ವಾಹನಗಳು ರೈಲ್ವೆ ಗೇಟ್‌ ಮೂಲಕವೇ ಸಂಚರಿಸಬೇಕು. ಹೀಗಾಗಿ ಈ ಭಾಗದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿವೆ. ಮೇಲ್ಸೇತುವೆ ನಿರ್ಮಾಣಕ್ಕೆ ಅಗತ್ಯವಿರುವ ಜಮೀನು ಸ್ವಾಧೀನಕ್ಕಾಗಿ ರೈತರಿಗೆ ಈಗಾಗಲೇ ಭೂಪರಿಹಾರ ನೀಡಲಾಗಿದೆ. ಆದರೆ, ಕಾಮಗಾರಿ ಮಾತ್ರ ಆರಂಭಿಸಿಲ್ಲ. ಅಧಿಕಾರಿಗಳಿಗೆ ಸಮಸ್ಯೆಯ ಅರಿವಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ವಾಹನ ದಟ್ಟಣೆ ತಪ್ಪಿಸಲು ಮತ್ತು ಸ್ಥಳೀಯರ ಅನುಕೂಲಕ್ಕೆ ರೈಲ್ವೆ ಮೇಲ್ಸೇತುವೆ ಅತ್ಯಗತ್ಯವಾಗಿದೆ. ಹೀಗಾಗಿ ಶೀಘ್ರವೇ ಮೇಲ್ಸೇತುವೆ ನಿರ್ಮಿಸಿ ಸಂಚಾರ ಸಮಸ್ಯೆಗೆ ಮುಕ್ತಿ ನೀಡಬೇಕು’ ಎಂದು ಸಂಘಟನೆ ಸದಸ್ಯರು ಕೋರಿದರು.

ಜಿಲ್ಲಾ ಘಟಕದ ಅಧ್ಯಕ್ಷ ಟಿ.ಎನ್‌.ರಾಮೇಗೌಡ, ಕಾರ್ಯದರ್ಶಿ ಗೋವಿಂದಪ್ಪ, ಮಾಲೂರು ತಾಲ್ಲೂಕು ಘಟಕದ ಉಪಾಧ್ಯಕ್ಷ ಕೆ.ಎಂ ನಾರಾಯಣಸ್ವಾಮಿ, ಪ್ರಧಾನ ಕಾರ್ಯದರ್ಶಿ ಅರುಣ್‌ಕುಮಾರ್‌, ಉಪಾಧ್ಯಕ್ಷ ರಾಮಚಂದ್ರ, ಟೇಕಲ್ ಹೋಬಳಿ ಘಟಕದ ಅಧ್ಯಕ್ಷ ಎನ್‌.ವಿನೋದ್‌ಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.