ADVERTISEMENT

ಹಂದಿ ಹಾವಳಿ; ನಷ್ಟ ಪರಿಹಾರಕ್ಕೆ ಆಗ್ರಹ

ಕಾಶೀಪುರ ಅರಣ್ಯ ಇಲಾಖೆ ಕಚೇರಿ ಎದುರು ರೈತಸಂಘದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 8:24 IST
Last Updated 1 ಅಕ್ಟೋಬರ್ 2020, 8:24 IST
ಕಾಡುಪ್ರಾಣಿಗಳ ಹಾವಳಿಯಿಂದ ನಷ್ಟವಾಗಿರುವ ರೈತರ ಪ್ರತಿ ಎಕರೆಗೆ ₹2 ಲಕ್ಷ ಪರಿಹಾರ ನೀಡಲು ಒತ್ತಾಯಿಸಿ ರೈತ ಸಂಘದಿಂದ ಮುಳಬಾಗಿಲು ಕಾಶೀಪುರ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಯಿತು
ಕಾಡುಪ್ರಾಣಿಗಳ ಹಾವಳಿಯಿಂದ ನಷ್ಟವಾಗಿರುವ ರೈತರ ಪ್ರತಿ ಎಕರೆಗೆ ₹2 ಲಕ್ಷ ಪರಿಹಾರ ನೀಡಲು ಒತ್ತಾಯಿಸಿ ರೈತ ಸಂಘದಿಂದ ಮುಳಬಾಗಿಲು ಕಾಶೀಪುರ ಅರಣ್ಯ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಯಿತು   

ಮುಳಬಾಗಿಲು: ತಾಲ್ಲೂಕಿನಾದ್ಯಂತ ಕಾಡುಪ್ರಾಣಿಗಳ ಹಾವಳಿಯಿಂದ ನಷ್ಟವಾಗಿರುವ ರೈತರ ಪ್ರತಿ ಎಕರೆಗೆ ₹ 2 ಲಕ್ಷ ಪರಿಹಾರ ನೀಡುವ ಜತೆಗೆ ಶಾಶ್ವತ ಪರಿಹಾರ ಕಲ್ಪಿಸಲುಒತ್ತಾಯಿಸಿ ರೈತಸಂಘದಿಂದ ನಗರ ಹೊರವಲಯದ ಕಾಶೀಪುರ ಗ್ರಾಮದ ಅರಣ್ಯ ಇಲಾಖೆ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿ, ಉಪವಲಯ ಅರಣ್ಯ ಅಧಿಕಾರಿ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.

ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ‘ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬ ಗಾದೆಯಂತೆ ಸತತ ಬರಗಾಲದಿಂದ ತತ್ತರಿಸಿದ್ದ ತಾಲ್ಲೂಕಿನಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ರಾಗಿ, ಜೋಳ, ಶೇಂಗಾ, ತೊಗರಿ ಮುಂತಾದ ಬೆಳೆ ಬಿತ್ತನೆ ಮಾಡಿದ್ದು ಉತ್ತಮ ಫಸಲು ಸಹ ಬಂದಿದೆ. ಆದರೆ ಕಾಡುಪ್ರಾಣಿಗಳಾದ ಜಿಂಕೆ ನವಿಲು ಜೊತೆಗೆ ಪ್ರಮುಖವಾಗಿ ಶೇಂಗಾ ಬೆಳೆಯನ್ನು ನಾಶ ಮಾಡುವ ಕಾಡುಹಂದಿಗಳ ಹಾವಳಿಯಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವುದೇ ರೈತರಿಗೆ ಹರಸಾಹಸವಾಗಿದೆ’ ಎಂದರು.

ರಾತ್ರಿ ವೇಳೆ ಮನೆ, ಸಂಸಾರ ಬಿಟ್ಟು ಹೊಲಗಳ ಬಳಿ ಕಾವಲು ಕಾದರೂ ಬೆಳೆ ರಕ್ಷಣೆ ಮಾಡಿಕೊಳ್ಳಲು ಆಗುತ್ತಿಲ್ಲ. ಇನ್ನು ಅರಣ್ಯ ಇಲಾಖೆ ಅಧಿಕಾರಿಗಳು ಇದ್ದೂ ಇಲ್ಲದಂತಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮುಳಬಾಗಲು ತಾಲ್ಲೂಕು ಅಧ್ಯಕ್ಷ ಫಾರೂಖ್‌ ಪಾಷಾ ಮಾತನಾಡಿ, ‘ರೈತರ ಕಷ್ಟಗಳನ್ನು ಕೇಳುವ ತಾಳ್ಮೆ ಅಧಿಕಾರಿಗಳಿಗಿಲ್ಲ. ಸಾವಿರಾರು ಎಕರೆ ಜಮೀನುಗಳಲ್ಲಿ ಬೆಳೆದಿರುವ ಬೆಳೆ ಕಣ್ಣ ಮುಂದೆಯೇ ನಾಶವಾಗುತ್ತಿದ್ದರೆ ಏನೂ ಮಾಡಲಾಗದ ಪರಿಸ್ಥಿತಿಯಲ್ಲಿ ರೈತ ಕೈಕಟ್ಟಿ ಕೂರುವಂತಹ ಪರಿಸ್ಥಿತಿಯಿದೆ’ ಎಂದರು.

ಮನವಿ ಸ್ವೀಕರಿಸಿ ಮಾತನಾಡಿದ ಅಧಿಕಾರಿ ಕೃಷ್ಣಮೂರ್ತಿ, ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದರು. ಮನವಿ ನೀಡುವಾಗ ಈ ಕಂಬಳ್ಳಿ ಮಂಜುನಾಥ್, ವಿಜಯಾ, ಸುಪ್ರೀಂಚಲ, ವಿಶ್ವನಾಥ್, ಪುತ್ತೇರಿ ರಾಜು, ಮನೋಜ್, ಕಾರ್ತಿಕ್‌, ಮಣಿ, ನವೀನ್, ವೇಣು, ಆದರ್ಶ್‌, ಸಿದ್ಧಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.