ADVERTISEMENT

ರಾಜ್ಯ ಸರ್ಕಾರಿ ನೌಕರರ ದಿನಾಚರಣೆ; ಪೂರ್ವಭಾವಿ ಸಭೆಗೆ ಮನವಿ

ಜಿಲ್ಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 16:47 IST
Last Updated 9 ಏಪ್ರಿಲ್ 2021, 16:47 IST
ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಸಂಬಂಧ ಪೂರ್ವಭಾವಿ ಸಭೆ ನಡೆಸುವಂತೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸದಸ್ಯರು ಕೋಲಾರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರಿ ನೌಕರರ ದಿನಾಚರಣೆ ಸಂಬಂಧ ಪೂರ್ವಭಾವಿ ಸಭೆ ನಡೆಸುವಂತೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸದಸ್ಯರು ಕೋಲಾರದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.   

ಕೋಲಾರ: ಸರ್ಕಾರದ ಆದೇಶದಂತೆ ಏ.21ರಂದು ಜಿಲ್ಲೆಯಲ್ಲಿ ರಾಜ್ಯ ಸರ್ಕಾರಿ ನೌಕರರ ದಿನ ಆಚರಿಸಲು ಪೂರ್ವಭಾವಿ ಸಭೆ ನಡೆಸಬೇಕೆಂದು ಒತ್ತಾಯಿಸಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸದಸ್ಯರು ಇಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಆರ್‌.ಸೆಲ್ವಮಣಿ ಅವರಿಗೆ ಮನವಿ ಸಲ್ಲಿಸಿದರು.

‘ರಾಜ್ಯ ಸರ್ಕಾರದ ಸುತ್ತೋಲೆಯಂತೆ ಜಿಲ್ಲಾ ಮಟ್ಟದಲ್ಲಿ ನೌಕರರ ದಿನಾಚರಣೆ ನಡೆಸಬೇಕು. ಜತೆಗೆ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಬೇಕು. ಈ ಸಂಬಂಧ ಜಿಲ್ಲಾ ಮತ್ತು ತಾಲ್ಲೂಕು ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು, ಇಲಾಖಾ ಮುಖ್ಯಸ್ಥರನ್ನು ಒಳಗೊಂಡಂತೆ ಪೂರ್ವಭಾವಿ ಸಭೆ ಕರೆಯಬೇಕು’ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಸುರೇಶ್‌ಬಾಬು ಮನವಿ ಮಾಡಿದರು.

‘ರಾಜ್ಯ ಸರ್ಕಾರದ ಮಾರ್ಚ್‌ 5ರ ಸುತ್ತೋಲೆಯಂತೆ ಸರ್ಕಾರಿ ಅಧಿಕಾರಿಗಳು ಅಥವಾ ನೌಕರರ ವಿರುದ್ಧ ಸ್ವೀಕೃತವಾದ ದೂರುಗಳನ್ನು ಪರಿಗಣಿಸಬಾರದು. ಇಂತಹ ದೂರುಗಳು ವೈಯಕ್ತಿಕ ದ್ವೇಷ ಅಥವಾ ಪೂರ್ವಾಗ್ರಹ ಪೀಡಿತವಾಗಿರುತ್ತವೆ. ಪೂರಕ ದಾಖಲೆಪತ್ರ, ವಿಳಾಸವಿಲ್ಲದ ದೂರುಗಳನ್ನು ಪರಿಗಣಿಸದಂತೆ ಎಲ್ಲಾ ಇಲಾಖೆಗಳಿಗೂ ಸೂಚನೆ ನೀಡಬೇಕು’ ಎಂದು ಕೋರಿದರು.

ADVERTISEMENT

‘ಅನಾಮಧೇಯ ದೂರುಗಳಿಂದ ನೌಕರರಿಗೆ ನಿರ್ಭೀತಿಯಿಂದ ಕರ್ತವ್ಯ ನಿರ್ವಹಿಸಲು ಅಡಚಣೆಯಾಗಿದೆ, ದೂರು ಸ್ವೀಕೃತವಾದಾಗ ದೂರು ನೀಡಿರುವ ವ್ಯಕ್ತಿಯ ವಿಳಾಸ ಖಚಿತಪಡಿಸಿಕೊಂಡು ಆರೋಪ ಮೇಲ್ನೋಟಕ್ಕೆ ಸತ್ಯವೆಂದು ಕಂಡುಬಂದಲ್ಲಿ ಮಾತ್ರ ಆ ಅರ್ಜಿಗಳನ್ನು ಪ್ರಾಥಮಿಕ ತನಿಖೆಗೆ ಒಳಪಡಿಸಬೇಕು’ ಎಂದು ಹೇಳಿದರು.

ಬಂಧನಕ್ಕೆ ಒತ್ತಾಯ: ಕೆಜಿಎಫ್ ತಾಲ್ಲೂಕಿನ ಗ್ರಾಮ ಲೆಕ್ಕಿಗರಾದ ಪ್ರೇಮಾ ಎಂಬುವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಕೆಜಿಎಫ್‌ನ ಸಾರಿಗೆ ಇಲಾಖೆ ನೌಕರ ಮುರಳಿ ಎಂಬುವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಪ್ರಾಣ ಬೆದರಿಕೆ ಹಾಕಿರುವ ಆರೋಪಿ ಬಾಬು ಅವರನ್ನು ಬಂಧಿಸಬೇಕು ಎಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.

ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಕೆಜಿಎಫ್‌ ಪೊಲೀಸ್‌ ಜಿಲ್ಲಾ ವರಿಷ್ಠಾಧಿಕಾರಿಗೆ ಕರೆ ಮಾಡಿ ನೌಕರ ಮುರಳಿ ಅವರ ದೂರಿನ ಅನ್ವಯ ಆರೋಪಿ ಬಾಬುರನ್ನು ಬಂಧಿಸುವಂತೆ ಸೂಚಿಸಿದರು.

ಸಂಘದ ಗೌರವಾಧ್ಯಕ್ಷ ಶ್ರೀನಿವಾಸರೆಡ್ಡಿ, ರಾಜ್ಯ ಪರಿಷತ್ ಸದಸ್ಯ ಗೌತಮ್, ಹಿರಿಯ ಉಪಾಧ್ಯಕ್ಷ ಸುಬ್ರಮಣಿ, ಉಪಾಧ್ಯಕ್ಷ ಪುರುಷೋತ್ತಮ್, ಜಿಲ್ಲಾ ಗ್ರಾಮ ಲೆಕ್ಕಿಗರ ಸಂಘದ ಅಧ್ಯಕ್ಷ ಅಜಯ್‌ ಹಾಜರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.