ADVERTISEMENT

ಕೋಲಾರ: ಟ್ಯಾಂಕರ್‌ ಬಿಲ್‌ ಬಿಡುಗಡೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 16:13 IST
Last Updated 27 ನವೆಂಬರ್ 2020, 16:13 IST

ಕೋಲಾರ: ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ಟ್ಯಾಂಕರ್ ನೀರು ಸರಬರಾಜಿನ ಬಿಲ್‌ ಮತ್ತು ವಿವಿಧ ಯೋಜನೆಗಳ ಕಾಮಗಾರಿಯ ಬಿಲ್‌ ಪಾವತಿಸಬೇಕು ಎಂದು ರಾಜ್ಯ ರೈತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ್‌ಗೌಡ ಮನವಿ ಮಾಡಿದ್ದಾರೆ.

ಟ್ಯಾಂಕರ್‌ ನೀರಿನ ಬಿಲ್‌, ನರೇಗಾ ಮತ್ತು ಮನೆ ನಿರ್ಮಾಣದ ಬಿಲ್‌ ಬಾಕಿ ಉಳಿಸಿಕೊಳ್ಳಲಾಗಿದೆ. ಈ ಸಂಬಂಧ ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳನ್ನು ಪ್ರಶ್ನಿಸಿದರೆ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳನ್ನು ಕೇಳುವಂತೆ ಸಬೂಬು ಹೇಳುತ್ತಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ದೂರಿದ್ದಾರೆ.

ಅಧಿಕಾರಿಗಳ ಆದೇಶದಂತೆ ಟ್ಯಾಂಕರ್‌ ಮಾಲೀಕರು ಸಮಸ್ಯಾತ್ಮಕ ಗ್ರಾಮಗಳಿಗೆ ನೀರು ಸರಬರಾಜು ಮಾಡಿದ್ದಾರೆ. ಬಿಲ್‌ ಸಲ್ಲಿಸಿ ಹಲವು ತಿಂಗಳಾದರೂ ಅಧಿಕಾರಿಗಳು ಹಣ ಪಾವತಿಸಿಲ್ಲ. ಇದರಿಂದ ಟ್ಯಾಂಕರ್‌ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಅಧಿಕಾರಿಗಳು ಬಿಲ್‌ ಪಾವತಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ADVERTISEMENT

ಸರ್ಕಾರ ವಿವಿಧ ವಸತಿ ಯೋಜನೆಗಳಡಿ ಮನೆ ನಿರ್ಮಿಸಿಕೊಂಡಿರುವವರಿಗೆ ಈವರೆಗೂ ಹಣ ಬಿಡುಗಡೆಯಾಗಿಲ್ಲ. ಅಧಿಕಾರಿಗಳನ್ನು ಕೇಳಿದರೆ ಅವರಿಗೆ ತಾಂತ್ರಿಕ ದೋಷದ ನೆಪ ಹೇಳುತ್ತಾರೆ. ಗ್ರಾಮೀಣ ಭಾಗದಲ್ಲಿ ಜಲಗಾರರಾಗಿ ಹಲವು ವರ್ಷಗಳಿಂದ ವೇತನ ಕೊಟ್ಟಿಲ್ಲ. ನರೇಗಾ ಯೋಜನೆಯಡಿ ಕೆಲಸ ಮಾಡಿರುವವರಿಗೆ ಈವರೆಗೂ ಕೂಲಿ ಹಣ ಬಿಡುಗಡೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶೀಘ್ರವೇ ಟ್ಯಾಂಕರ್‌ ಬಿಲ್‌, ನರೇಗಾ ಕೂಲಿ ಮತ್ತು ವಸತಿ ಯೋಜನೆ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡದಿದ್ದರೆ ಜಿಲ್ಲಾ ಪಂಚಾಯಿತಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.