ADVERTISEMENT

ಕಾಯಿ ಬಿಡದ ಹಾಗಲಕಾಯಿ: ಪರಿಹಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 10:00 IST
Last Updated 21 ಡಿಸೆಂಬರ್ 2019, 10:00 IST
ಹಾಗಲಕಾಯಿ ಬೆಳೆ ಬೆಳೆದು ಕಾಯಿ ಬಿಡದೆ ನಷ್ಟ ಅನುಭವಿಸಿರುವ ಕೋಲಾರ ತಾಲ್ಲೂಕಿನ ಮಂಗಸಂದ್ರ ಗ್ರಾಮದ ರೈತ ನಾರಾಯಣಸ್ವಾಮಿಯವರ ಜಮೀನಿಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.
ಹಾಗಲಕಾಯಿ ಬೆಳೆ ಬೆಳೆದು ಕಾಯಿ ಬಿಡದೆ ನಷ್ಟ ಅನುಭವಿಸಿರುವ ಕೋಲಾರ ತಾಲ್ಲೂಕಿನ ಮಂಗಸಂದ್ರ ಗ್ರಾಮದ ರೈತ ನಾರಾಯಣಸ್ವಾಮಿಯವರ ಜಮೀನಿಗೆ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.   

ಕೋಲಾರ: ತಾಲ್ಲೂಕಿನ ಮಂಗಸಂದ್ರದ ಗ್ರಾಮದ ರೈತ ನಾರಾಯಣಸ್ವಾಮಿ ಎಂಬುವರ ಜಮೀನಿನಲ್ಲಿ ಹಾಗಲಕಾಯಿ ಬೆಳೆ ಸೊಂಪಾಗಿ ಬೆಳೆದಿದ್ದರೂ ಗಿಡಗಳು ಕಾಯಿ ಬಿಡದೆ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ನಾರಾಯಣಸ್ವಾಮಿ ಅವರು ಹಾಗಲಕಾಯಿ ನಾಟಿ ಮಾಡಿ 4 ತಿಂಗಳಾದರೂ ಗಿಡಗಳು ಕಾಯಿ ಬಿಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಜಮೀನಿಗೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ಮಾಡಿದ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಪರಿಹಾರ ನೀಡುವಂತೆ ಒತ್ತಾಯಿಸಿದರು.

‘ನಾರಾಯಣಸ್ವಾಮಿ ಅವರು 40 ಪ್ಯಾಕೆಟ್‌ ಹಾಗಲಕಾಯಿ ಬೀಜ ಖರೀದಿಸಿ ಬಿತ್ತನೆ ಮಾಡಿದ್ದಾರೆ. ಪ್ರತಿ ಪ್ಯಾಕೆಟ್‌ ₹ 400ರಂತೆ ಬೀಜಕ್ಕೆ ₹ 16 ಸಾವಿರ ಖರ್ಚು ಮಾಡಿದ್ದಾರೆ. ಬಿತ್ತನೆ, ಕೂಲಿ ಕಾರ್ಮಿಕರು ಹಾಗೂ ಕೀಟನಾಶಕ ಖರೀದಿಗೆ ಸಾಕಷ್ಟು ಹಣ ವೆಚ್ಚವಾಗಿದೆ. ಆದರೆ, ಹಾಗಲಕಾಯಿ ಗಿಡಗಳು ಕಾಯಿ ಬಿಡದ ಕಾರಣ ನಾರಾಯಣಸ್ವಾಮಿ ಅವರಿಗೆ ದಿಕ್ಕು ತೋಚದಂತಾಗಿದೆ’ ಎಂದು ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ನಾರಾಯಣಗೌಡ ಹೇಳಿದರು.

ADVERTISEMENT

‘ಜಿಲ್ಲೆಯಲ್ಲಿ ನಕಲಿ ಬಿತ್ತನೆ ಬೀಜ ಹಾಗೂ ಕೀಟನಾಶಕ ಮಾರಾಟ ಮಳಿಗೆಗಳು ಹಾದಿ ಬೀದಿಯಲ್ಲಿ ತಲೆ ಎತ್ತಿವೆ. ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಳಿಗೆಗಳ ಮಾಲೀಕರೊಂದಿಗೆ ಕೈಜೋಡಿಸಿದ್ದಾರೆ. ರೈತರು ಬರ ಪರಿಸ್ಥಿತಿಗೆ ಎದೆಗುಂದದೆ ಬೆಳೆ ಬೆಳೆಯುತ್ತಿದ್ದಾರೆ. ಆದರೆ, ರಸಗೊಬ್ಬರ, ಬಿತ್ತನೆ ಬೀಜ, ಕೀಟನಾಶಕ ಮಾರಾಟ ಕಂಪನಿಗಳು, ಅಂಗಡಿಗಳ ಮಾಲೀಕರು ರೈತರಿಗೆ ಮೋಸ ಮಾಡುತ್ತಿದ್ದಾರೆ’ ಎಂದು ದೂರಿದರು

ಮಾಹಿತಿ ಕೊಡುತ್ತಿಲ್ಲ: ‘ಹಾಗಲಕಾಯಿ ಗಿಡಗಳು ಕಾಯಿ ಬಿಡದ ಸಂಬಂಧ ಬಿತ್ತನ ಬೀಜ ಮಾರಾಟ ಮಳಿಗೆ ಮಾಲೀಕರು ಹಾಗೂ ಬೀಜದ ಕಂಪನಿಯ ವ್ಯವಸ್ಥಾಪಕರಿಗೆ ಕರೆ ಮಾಡಿದ್ದೆ. ಆದರೆ, ಅವರು ಸಮಸ್ಯೆಗೆ ಸ್ಪಂದಿಸಲಿಲ್ಲ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಮರ್ಪಕ ಮಾಹಿತಿ ಕೊಡುತ್ತಿಲ್ಲ’ ಎಂದು ರೈತ ನಾರಾಯಣಸ್ವಾಮಿ ಅಳಲು ತೋಡಿಕೊಂಡರು.

‘ಅಧಿಕಾರಿಗಳು ನಾರಾಯಣಸ್ವಾಮಿಯವರ ಜಮೀನಿನಲ್ಲಿ ಪರಿಶೀಲನೆ ಮಾಡಿ ಪ್ರತಿ ಎಕರೆಗೆ ₹ 2 ಲಕ್ಷ ಪರಿಹಾರ ನೀಡಬೇಕು. ನಕಲಿ ಬಿತ್ತನೆ ಬೀಜ ಮಾರಾಟ ಮಾಡಿರುವ ಅಂಗಡಿ ಮಾಲೀಕರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು. ಜತೆಗೆ ಅವರ ವಾಣಿಜ್ಯ ಪರವಾನಗಿ ರದ್ದುಪಡಿಸಬೇಕು’ ಎಂದು ಸಂಘಟನೆ ಸದಸ್ಯರು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.