ADVERTISEMENT

ಸಾಮಾನ್ಯ ಸಭೆ ಕರೆಯಲು ಮನವಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2021, 14:28 IST
Last Updated 9 ಫೆಬ್ರುವರಿ 2021, 14:28 IST

ಕೋಲಾರ: ನಗರದಲ್ಲಿನ ಕುಡಿಯುವ ನೀರು, ಒಳಚರಂಡಿ ಹಾಗೂ ಕಸದ ಸಮಸ್ಯೆಗಳ ಸಂಬಂಧ ಚರ್ಚಿಸಲು ಶೀಘ್ರವೇ ಸಾಮಾನ್ಯ ಸಭೆ ಕರೆಯುವಂತೆ ಒತ್ತಾಯಿಸಿ ನಗರಸಭಾ ಸದಸ್ಯರು ನಗರಸಭೆ ಆಯುಕ್ತ ಶ್ರೀಕಾಂತ್‌ ಅವರಿಗೆ ಮನವಿ ಮಾಡಿದ್ದಾರೆ.

2020ರ ಡಿ.29ರಂದು ಕೊನೆಯ ಬಾರಿಗೆ ಸಾಮಾನ್ಯ ಸಭೆ ನಡೆದಿದೆ. ಕರ್ನಾಟಕ ಪುರಸಭೆ ಕಾಯ್ದೆ 1964ರ ಪ್ರಕಾರ ಪ್ರತಿ ತಿಂಗಳು ಸಾಮಾನ್ಯ ಸಭೆ ಹಾಗೂ ಸಂದರ್ಭಾನುಸಾರ ತುರ್ತು ಸಭೆ ನಡೆಸಬೇಕು. ಆದರೆ, ಈ ಕಾಯ್ದೆ ಪಾಲನೆ ಆಗುತ್ತಿಲ್ಲ. ಸಾಮಾನ್ಯ ಸಭೆ ನಡೆಯದ ಕಾರಣ ನಗರದ ಸಮಸ್ಯೆಗಳ ಪರಿಹಾರ ಸಾಧ್ಯವಾಗುತ್ತಿಲ್ಲ ಎಂದು ಸದಸ್ಯರು ಮನವಿ ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದ ಹಲವು ವಾರ್ಡ್‌ಗಳಲ್ಲಿ ಮೂಲಸೌಕರ್ಯ ಸಮಸ್ಯೆಯಿದ್ದು, ಜನರಿಗೆ ತೊಂದರೆಯಾಗುತ್ತಿದೆ. ಬೇಸಿಗೆ ಸಮೀಪಿಸುತ್ತಿದ್ದು, ನೀರಿನ ಸಮಸ್ಯೆ ಗಂಭೀರವಾಗುವ ಸಾಧ್ಯತೆಯಿದೆ. ಸಾಕಷ್ಟು ಬಡಾವಣೆಗಳಲ್ಲಿ ಬೀದಿ ದೀಪಗಳು ಕೆಟ್ಟಿವೆ. ಕಸ ಸಂಗ್ರಹಣೆ ಮತ್ತು ವಿಲೇವಾರಿ ಪ್ರಕ್ರಿಯೆ ಹಳಿ ತಪ್ಪಿದೆ. ಈ ವಿಚಾರವಾಗಿ ನಗರವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಬಡಾವಣೆಗಳಲ್ಲಿ ಓಡಾಡುವುದೇ ಕಷ್ಟವಾಗಿದೆ ಎಂದು ಹೇಳಿದ್ದಾರೆ.

ADVERTISEMENT

ನಗರಸಭೆ ಸದಸ್ಯರಾದ ಸೈಯದ್ ಅಫ್ಜರ್‌, ಎನ್‌.ಅಂಬರೀಷ್‌, ಸಿ.ರಾಕೇಶ್, ನಾಜೀಯಾ ತಾಜ್, ತಾಸಿನ್‌ ತಾಜ್, ಮುಬೀನಾ ತಾಜ್, ನೂರಿ, ನಗ್ಮಾ ಬಾನು, ಇದಾಯತ್‌ ಉಲ್ಲಾ, ಸೈಯದ್‌ ಸಮೀವುಲ್ಲಾ, ಫೈರೋಜ್ ಖಾನ್, ಎಂ.ಸುರೇಶ್‌ಬಾಬು, ವಿ.ಸಂಗೀತಾ, ಬಿ.ಅಸ್ಲಂ ಪಾಷಾ ಮನವಿ ಪತ್ರಕ್ಕೆ ಸಹಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.