ADVERTISEMENT

SSLC & PUC Exams | ಬಂಗಾರಪೇಟೆ: ಟಿ–20 ವಿಶ್ವಕಪ್ ಮುಂದೂಡಲು ಮನವಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 5:06 IST
Last Updated 10 ಫೆಬ್ರುವರಿ 2026, 5:06 IST
ಬಂಗಾರಪೇಟೆ ನಗರದ ಪ್ರವಾಸಿ ಮಂದಿರದಲ್ಲಿ ಕೈಯಲ್ಲಿ ಖಾಲಿ ತಟ್ಟೆ ಹಿಡಿದು ವಿನೂತನವಾಗಿ ಪ್ರತಿಭಟಿಸಿದರು
ಬಂಗಾರಪೇಟೆ ನಗರದ ಪ್ರವಾಸಿ ಮಂದಿರದಲ್ಲಿ ಕೈಯಲ್ಲಿ ಖಾಲಿ ತಟ್ಟೆ ಹಿಡಿದು ವಿನೂತನವಾಗಿ ಪ್ರತಿಭಟಿಸಿದರು   

ಬಂಗಾರಪೇಟೆ: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳು ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಟಿ–20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಮುಂದೂಡಬೇಕು ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ. ನಾರಾಯಣಗೌಡ ಆಗ್ರಹಿಸಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಸೋಮವಾರ ಕೈಯಲ್ಲಿ ಖಾಲಿ ತಟ್ಟೆ ಹಿಡಿದು ವಿನೂತನವಾಗಿ ಪ್ರತಿಭಟಿಸಿ, ಪ್ರಧಾನಿ ಹಾಗೂ ಕ್ರಿಕೆಟ್ ಆಡಳಿತ ಮಂಡಳಿಗೆ ಈ ಕುರಿತು ವಿಶೇಷ ಮನವಿ ಮಾಡಲಾಯಿತು. 

ದೇಶದಲ್ಲಿ ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳಿದ್ದಾರೆ. ಆದರೆ, ಪರೀಕ್ಷೆ ಸಮಯದಲ್ಲಿ ಕ್ರಿಕೆಟ್ ಪಂದ್ಯಗಳು ನಡೆದರೆ ವಿದ್ಯಾರ್ಥಿಗಳ ಏಕಾಗ್ರತೆ ತಪ್ಪುತ್ತದೆ. ಇದು ಮಕ್ಕಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದರು.

ADVERTISEMENT

ಮಕ್ಕಳಿಗೆ ಕ್ರಿಕೆಟ್ ನೋಡಬೇಡಿ ಎಂದು ಹೇಳಲಾಗದ, ಅತ್ತ ಪರೀಕ್ಷೆ ಒತ್ತಡ ನಿಭಾಯಿಸಲಾಗದ ಅಸಹಾಯಕ ಸ್ಥಿತಿಯಲ್ಲಿ ಪೋಷಕರಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಕ್ರಿಕೆಟ್ ಮಂಡಳಿಯೊಂದಿಗೆ ಚರ್ಚಿಸಬೇಕು ಎಂದರು. 

365 ದಿನ ಕಷ್ಟಪಟ್ಟು ಓದಿದ ವಿದ್ಯಾರ್ಥಿಗಳ ಫಲಿತಾಂಶಕ್ಕೆ ಕ್ರಿಕೆಟ್ ಅಡ್ಡಿಯಾಗಬಾರದು. ಪೋಷಕರು ಕೂಲಿ ಮಾಡಿ ತಮ್ಮ ಮಕ್ಕಳ ಶಾಲಾ ಶುಲ್ಕ ಕಟ್ಟಿರುತ್ತಾರೆ. ಅವರ ಬೆವರಿನ ಹನಿಗೆ ಗೌರವ ಸಿಗಬೇಕಾದರೆ ವಿದ್ಯಾರ್ಥಿಗಳು ಆಟಕ್ಕಿಂತ ಓದಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು. 

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ್, ಚಾಂದ್ ಪಾಷಾ, ಕಿರಣ್, ರಾಜು, ಗಿರೀಶ್, ಮುನ್ನಾ, ಮುನಿಕೃಷ್ಣ, ವಿಶ್ವ, ಮುನಿರಾಜು, ಸುಪ್ರಿಂ ಚಲ, ವಕ್ಕಲೇರಿ ಹನುಮಯ್ಯ ಹಾಗೂ ಚಂದ್ರಪ್ಪ ತಿಮ್ಮಣ್ಣ ಭಾಗವಹಿಸಿದ್ದರು.