ADVERTISEMENT

ಕೋಲಾರ: ದಿನಗೂಲಿ ನೌಕರರ ವೇತನಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 15:02 IST
Last Updated 7 ಸೆಪ್ಟೆಂಬರ್ 2020, 15:02 IST
ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳಲ್ಲಿನ ದಿನಗೂಲಿ ನೌಕರರಿಗೆ ವೇತನ ನೀಡುವಂತೆ ಒತ್ತಾಯಿಸಿ ಮಾಜಿ ಶಾಸಕ ವೈ.ಸಂಪಂಗಿ ಕೋಲಾರದಲ್ಲಿ ಸೋಮವಾರ ಖಜಾನೆ ಇಲಾಖೆ ಉಪ ನಿರ್ದೇಶಕಿ ರುಕ್ಮಿಣಿ ಅವರಿಗೆ ಮನವಿ ಸಲ್ಲಿಸಿದರು.
ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳಲ್ಲಿನ ದಿನಗೂಲಿ ನೌಕರರಿಗೆ ವೇತನ ನೀಡುವಂತೆ ಒತ್ತಾಯಿಸಿ ಮಾಜಿ ಶಾಸಕ ವೈ.ಸಂಪಂಗಿ ಕೋಲಾರದಲ್ಲಿ ಸೋಮವಾರ ಖಜಾನೆ ಇಲಾಖೆ ಉಪ ನಿರ್ದೇಶಕಿ ರುಕ್ಮಿಣಿ ಅವರಿಗೆ ಮನವಿ ಸಲ್ಲಿಸಿದರು.   

ಕೋಲಾರ: ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿನಿಲಯಗಳಲ್ಲಿನ ದಿನಗೂಲಿ ನೌಕರರಿಗೆ ವೇತನ ನೀಡುವಂತೆ ಒತ್ತಾಯಿಸಿ ಮಾಜಿ ಶಾಸಕ ವೈ.ಸಂಪಂಗಿ ಅವರು ಜಿಲ್ಲಾ ಖಜಾನೆ ಇಲಾಖೆ ಅಧಿಕಾರಿಗಳಿಗೆ ಇಲ್ಲಿ ಸೋಮವಾರ ಮನವಿ ಸಲ್ಲಿಸಿದರು.

‘ಕೋವಿಡ್‌–19ಆತಂಕದ ನಡುವೆಯೂ ಸಮಾಜ ಕಲ್ಯಾಣ ಇಲಾಖೆ ದಿನಗೂಲಿ ನೌಕರರು ಜೀವದ ಹಂಗು ತೊರೆದು ಕೆಲಸ ಮಾಡುತ್ತಿದ್ದಾರೆ. ಆದರೆ, ಇವರಿಗೆ ತಿಂಗಳಿಂದ ಸಂಬಳ ಕೊಟ್ಟಿಲ್ಲ. ಖಜಾನೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನಿಯಮಾವಳಿಯ ನೆಪದಲ್ಲಿ ಸಂಬಳ ಬಿಡುಗಡೆ ಮಾಡಿಲ್ಲ’ ಎಂದು ಸಂಪಂಗಿ ಅಸಮಾಧಾನ ವ್ಯಕ್ತಪಡಿಸಿದರು.

‘ಸಂಬಳವಿಲ್ಲದ ಕಾರಣ ನೌಕರರಿಗೆ ಜೀವನ ನಿರ್ವಹಣೆ ಮಾಡುವುದು ಕಷ್ಟವಾಗಿದೆ. ಸಾಕಷ್ಟು ನೌಕರರು ಬಡ್ಡಿ ಸಾಲ ಮಾಡಿ ಬದುಕು ಸಾಗಿಸುತ್ತಿದ್ದಾರೆ. ಅಧಿಕಾರಿಗಳಿಗೆ ಈ ನೌಕರರ ಕಷ್ಟದ ಅರಿವಿಲ್ಲ. ಅಧಿಕಾರಿಗಳು ನಿಯಮಾವಳಿಯ ಕಾರಣ ನೀಡುವುದನ್ನು ಬಿಟ್ಟು ಶೀಘ್ರವೇ ಸಂಬಳ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ತಾಂತ್ರಿಕ ಕಾರಣದಿಂದ ನೌಕರರು ಸಂಬಳವಿಲ್ಲದೆ ಸಮಸ್ಯೆ ಅನುಭವಿಸುವಂತಾಗಿದೆ. ಕೊರೊನಾ ಸೋಂಕಿತರಿಗೆ ಅಡುಗೆ ಮಾಡಿಕೊಡುತ್ತಿರುವ ಈ ದಿನಗೂಲಿ ಕಾರ್ಮಿಕರಿಗೂ ಸರ್ಕಾರಿ ನೌಕರರಿಗೆ ನೀಡುವಂತೆ ಆರೋಗ್ಯ ವಿಮೆ ಸೌಲಭ್ಯ ಕಲ್ಪಿಸಬೇಕು’ ಎಂದು ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಖಜಾನೆ ಇಲಾಖೆ ಜಿಲ್ಲಾ ಉಪ ನಿರ್ದೇಶಕರಿ ರುಕ್ಮಿಣಿ, ‘ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ವೇತನ ಪಾವತಿ ಸಂಬಂಧ ನಿಯಮಾನುಸಾರ ದಾಖಲೆಪತ್ರ ಸಲ್ಲಿಸಿಲ್ಲ. ಹೀಗಾಗಿ ವೇತನ ಬಿಡುಗಡೆ ಮಾಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಬಾಲಾಜಿ, ‘ಜಿಲ್ಲೆಯಲ್ಲಿ ಮಾತ್ರ ದಿನಗೂಲಿ ನೌಕರರಿಗೆ ಸಂಬಂಧಿಸಿದ ಸಮಸ್ಯೆಯಿದೆ. ಇದಕ್ಕೆ ಸಂಬಂಧಪಟ್ಟ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನೌಕರರನ್ನು ದಿನಗೂಲಿ ಅಥವಾ ಹೊರಗುತ್ತಿಗೆ ಎಂದು ಪರಿಗಣಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ವೇತನ ಪಾವತಿಗೆ ಸಮಸ್ಯೆಯಾಗುತ್ತಿದೆ. ಖಜಾನೆ ಇಲಾಖೆ ಅಧಿಕಾರಿಗಳು ಸೂಚಿಸಿರುವ ಮಾದರಿಯಲ್ಲೇ ಮಂಗಳವಾರ ದಾಖಲೆಪತ್ರ ಸಲ್ಲಿಸಿ ಸಂಬಳ ಬಿಡುಗಡೆ ಮಾಡಿಸುತ್ತೇವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.