ADVERTISEMENT

ರಾಜಕಾಲುವೆಯಲ್ಲಿ ನಿವೇಶನ ವಿಂಗಡಣೆ

ಕಾಲುವೆ ನಿರಂತರ ಒತ್ತುವರಿ, ಜಾಗ ಕಬಳಿಸುವ ಪ್ರಯತ್ನ

ಕಾಂತರಾಜು ಸಿ. ಕನಕಪುರ
Published 30 ಜೂನ್ 2020, 9:25 IST
Last Updated 30 ಜೂನ್ 2020, 9:25 IST
ಬಂಗಾರಪೇಟೆ ಅಮರಾವತಿ ನಗರದ ಗಾಯತ್ರಿ ದೇಗುಲದ ಬಳಿ ರಾಜಕಾಲುವೆಗೆ ಮಣ್ಣು ಸುರಿದಿರುವುದು
ಬಂಗಾರಪೇಟೆ ಅಮರಾವತಿ ನಗರದ ಗಾಯತ್ರಿ ದೇಗುಲದ ಬಳಿ ರಾಜಕಾಲುವೆಗೆ ಮಣ್ಣು ಸುರಿದಿರುವುದು   

ಬಂಗಾರಪೇಟೆ: ಪಟ್ಟಣದ ಗಾಯತ್ರಿ ದೇಗುಲದ ಬಳಿ ರಾಜಕಾಲುವೆಗೆ ಮಣ್ಣು ತಳ್ಳಿ ನಿವೇಶನ ವಿಂಗಡಿಸುವ ಪ್ರಯತ್ನ ಸದ್ದಿಲ್ಲದೆ ನಡೆದಿದೆ.

ಪಟ್ಟಣದ ದೊಡ್ಡಕೆರೆ ಮತ್ತು ಅತ್ತಿಗಿರಿಕೊಪ್ಪ ಕೆರೆಗೆ ಸಂಪರ್ಕ ಕಲ್ಪಿಸುವ ವಿಸ್ತಾರವಾದ ಈ ರಾಜಕಾಲುವೆ ಅಮರಾವತಿ ನಗರ, ಕುಪ್ಪಸ್ವಾಮಿ ಮದುಲಿಯಾರ್ ಬಡಾವಣೆ, ಮುನಿಯಮ್ಮ ಬಡಾವಣೆ ಸೇರಿದಂತೆ ಕೆಲ ಬಡಾವಣೆಗಳ ಮೂಲಕ ಹಾದುಹೋಗಿದೆ.

ಪ್ರಸ್ತುತ ಕಾಲುವೆಗೆ ಮಣ್ಣು ತಳ್ಳಿರುವ ಜಾಗವನ್ನು ಕಬಳಿಸಲು ಹಲವು ವರ್ಷದಿಂದ ಪ್ರಯತ್ನ ನಡೆದಿದೆ. ಗಾಯತ್ರಿ ವಿಪ್ರಭವನದ ಪೂರ್ವಕ್ಕೆ ಸುಮಾರು 150 ಅಡಿ ವಿಸ್ತಾರವಾದ ಕಾಲುವೆ ಜಾಗವಿದ್ದು, ಅದನ್ನು ನಿವೇಶನವನ್ನಾಗಿ ವಿಂಗಡಿಸಿ ಕೋಟಿಗಟ್ಟಲೆ ಲಾಭ ಗಳಿಸುವ ಹುನ್ನಾರ ನಡೆದಿದೆ.

ADVERTISEMENT

ಪ್ರಜಾವಾಣಿ ವರದಿ: ಡಿ.ಕೆ.ರವಿ ಜಿಲ್ಲಾಧಿಕಾರಿಯಾಗಿದ್ದ ಸಂದರ್ಭ ಇದೇ ಜಾಗದಲ್ಲಿ ಮಣ್ಣುರಾಶಿ ಹಾಕಿ ಕಾಲುವೆ ಮಚ್ಚುವ ಪ್ರಯತ್ನ ನಡೆದಿತ್ತು. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ ವರದಿ ಪ್ರಕಟಗೊಂಡ ಕೂಡಲೆ ಎಚ್ಚೆತ್ತುಕೊಂಡ ಅಂದಿನ ಪುರಸಭೆ ಅಧಿಕಾರಿಗಳು ಕಾಲುವೆಗೆ ಮಣ್ಣು ಹಾಕದಂತೆ
ತಡೆದಿದ್ದರು.

ಆರು ವರ್ಷದಿಂದ ತಟಸ್ಥವಾಗಿದ್ದ ಪ್ರಭಾವಿ ವ್ಯಕ್ತಿ ಈಗ ಏಕಾಏಕಿ ಕಾಲುವೆಗೆ ಮಣ್ಣು ಸುರಿದು ನಿವೇಶನ ವಿಂಗಡಿಸಿರುವುದು ಹಲವು ಅನುಮಾನಕ್ಕೆ ಎಡೆಮಾಡಿದೆ. ಕಾಲುವೆ ಒತ್ತುವರಿಯಿಂದಾಗಿ ಸುಮಾರು 150 ಅಡಿ ವಿಸ್ತಾರವಾದ ಕಾಲುವೆ ಕೆಲವೆಡೆ 40-50 ಅಡಿಗೆ ಕುಗ್ಗಿದೆ.

ಹದ್ದು ಮೀರಿದ ಹಳ್ಳ: ಸುಮಾರು 25ಕ್ಕಿಂತ ಹೆಚ್ಚು ಕೆರೆಗಳಲ್ಲಿನ ನೀರು ಕಾಲುವೆಯಲ್ಲಿ ಹರಿಯಲಿದ್ದು ‘ಹದ್ದು ಮೀರಿದ ಹಳ್ಳ’ ಎನ್ನುವ ಹೆಸರಿದೆ. 2005ರಲ್ಲಿ ಅತಿವೃಷ್ಠಿಯಾದ ಸಂದರ್ಭದಲ್ಲಿ ಕಾಲುವೆ ಸಮೀಪದ ಮೂರು ನಗರಗಳ ಬಹುತೇಕ ಮನೆಗಳಿಗೆ ನೀರು ನುಗ್ಗಿ ದೊಡ್ಡ ಅವಾಂತರವೇ ಸೃಷ್ಟಿಯಾಗಿತ್ತು.

ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್, ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಈಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ, ಒತ್ತುವರಿ ತೆರವುಗೊಳಿಸುವಂತೆ ಆದೇಶಿಸಿದ್ದರು. ಕಾಲುವೆ ವಿಸ್ತರಣೆಗೆ ₹50 ಲಕ್ಷ ಅನುದಾನ ಕೂಡ ಬಿಡುಗಡೆ ಮಾಡಲಾಗಿತ್ತು. ಆದರೆ ಕಾಲುವೆ ವಿಸ್ತರಣೆ ಕಾರ್ಯ ಮಾತ್ರ ನಡೆದಿಲ್ಲ ಎನ್ನುವುದು ಸ್ಥಳೀಯರ ಕೊರುಗು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.