ADVERTISEMENT

ಕೋಲಾರ: ದಾಖಲೆ ಬಹಿರಂಗಪಡಿಸಿ–ರಾಜೀನಾಮೆ ನೀಡುವೆ ಬ್ಯಾಲಹಳ್ಳಿ ಗೋವಿಂದಗೌಡ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 7:32 IST
Last Updated 25 ಜನವರಿ 2023, 7:32 IST
ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕೋಲಾರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕೋಲಾರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕೋಲಾರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.   

ಕೋಲಾರ: ‘ಡಿಸಿಸಿ ಬ್ಯಾಂಕ್‌ಗೆ ಸಂಬಂಧಿಸಿದಂತೆ ನನ್ನ ವಿರುದ್ಧ ದಾಖಲಾಗಿರುವ 9 ಪ್ರಕರಣಗಳಿಗೆ ತಡೆಯಾಜ್ಞೆ ಪಡೆದುಕೊಂಡಿದ್ದೇನೆ ಎಂಬುದಾಗಿ ಹೇಳಿರುವ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಈ ಸಂಬಂಧ ದಾಖಲೆ ಬಹಿರಂಗಪಡಿಸಿದರೆ ಬ್ಯಾಂಕ್‌ನ ಅಧ್ಯಕ್ಷ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡುವೆ’ ಎಂದು ಕೋಲಾರ–ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸವಾಲು ಹಾಕಿದರು.

‘ಇಂಥ ಸುಳ್ಳು ಹೇಳಿಕೆ ನಿರೀಕ್ಷಿಸಿರಲಿಲ್ಲ. ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್‌ ಕಟ್ಟಿ ಬೆಳೆಸಿದ್ದೇನೆ. 8 ಲಕ್ಷ ಫಲಾನುಭವಿಗಳಿಗೆ ₹ 10 ಸಾವಿರ ಕೋಟಿ ಸಾಲ ನೀಡಿದ್ದೇವೆ. ಬಡವರು, ರೈತರು, ಮಹಿಳೆಯರಿಗೆ ಬೆನ್ನೆಲುಬಾಗಿರುವ ಬ್ಯಾಂಕ್‌ನ ಘನತೆಗೆ ಮಸಿ ಬಳಿಯುವ ಅವರ ಪ್ರಯತ್ನ ಖಂಡನೀಯ’ ಎಂದು ಇಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ
ಹರಿಹಾಯ್ದರು.

‘ಕೆಂಚಾಪುರ ಸೊಸೈಟಿಯಲ್ಲಿ ನಾರಾಯಣರೆಡ್ಡಿ ಅವರಿಗೆ ಸಂಬಂಧಿಸಿದ ಒಂದು ಪ್ರಕರಣ ಈಗಾಗಲೇ ವಿಚಾರಣೆ ಮುಗಿದಿದೆ. ಅದನ್ನು ಹೊರತುಪಡಿಸಿ ಬೇರೆ ಯಾವುದೇ ತಡೆಯಾಜ್ಞೆ ತಂದಿಲ್ಲ. ಮನಬಂದಂತೆ ಹೇಳಿಕೆ ನೀಡುವ ಮೂಲಕ ಒಂದು ಆರ್ಥಿಕ ಸಂಸ್ಥೆಯ ಘನತೆ ಹಾಳು ಮಾಡುವ ಪ್ರಯತ್ನ ಮಾಡಬಾರದು’ ಎಂದರು.

ADVERTISEMENT

‘ಬ್ಯಾಂಕ್‌ನಲ್ಲಿ ತಪ್ಪು ನಡೆದಿದ್ದರೆ ಅದರ ವಿರುದ್ಧ ತನಿಖೆ ನಡೆಸಲು ಮುಕ್ತ ಅವಕಾಶ ನೀಡಿದ್ದೇವೆ. ಜೆಡಿಎಸ್‌ನ ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅಡ್ಡಗಲ್ ಸೊಸೈಟಿಯಲ್ಲಿ ₹ 33 ಕೋಟಿ ಅವ್ಯವಹಾರವಾಗಿದೆ, ಅಲ್ಲಿ ನಕಲಿ ಸಂಘಗಳಿವೆ ಎಂದೆಲ್ಲಾ ಹೇಳಿಕೆ ನೀಡಿದ್ದಾರೆ. ಆದರೆ ಅಲ್ಲಿ ಸಾಲ ನೀಡಿರುವುದೇ ಒಟ್ಟು ₹ 6.80 ಕೋಟಿ. 87 ಮಹಿಳಾ ಸಂಘಗಳಿಗೆ ₹ 4.35 ಕೋಟಿ, 267 ರೈತರಿಗೆ ₹ 2.32 ಕೋಟಿ ಸಾಲ ನೀಡಿದ್ದೇವೆ. ಮಹಿಳೆಯರು ಪ್ರಾಮಾಣಿಕವಾಗಿ ಕಂತು ಪಾವತಿಸುತ್ತಿದ್ದು, ಈಗಾಗಲೇ ₹1.5 ಕೋಟಿ ವಸೂಲಿಯಾಗಿದೆ’ ಎಂದು ತಿರುಗೇಟು ನೀಡಿದರು.

ಕಾಂಗ್ರೆಸ್ ಶಾಸಕರಿಗೆ ಸಾಲ ನೀಡಿರುವ ಕುರಿತು, ‘ನಿಯಮಾನುಸಾರ ಎಸ್.ಎನ್.ನಾರಾಯಣಸ್ವಾಮಿ ಅವರ ಕೋಳಿ ಫಾರಂಗೆ ಅಡಮಾನ ಪಡೆದು ₹ 4 ಕೋಟಿ ಸಾಲ ನೀಡಿದ್ದೇವೆ. ಅವ್ಯವಹಾರ ನಡೆದಿದ್ದರೆ ಸಾಬೀತು ಪಡಿಸಲಿ’ ಎಂದರು.

‘ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಈಗಾಗಲೇ ಸಿದ್ದರಾಮಯ್ಯ ಹೇಳಿದ್ದಾರೆ. ಒಂದು ವೇಳೆ ಅವರು ಇಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವುದಾದರೆ ನನಗೆ ಟಿಕೆಟ್ ನೀಡಲಿ, ನಾನೂ ಪ್ರಬಲ ಆಕಾಂಕ್ಷಿ’ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಎಸ್.ವಿ.ಸುಧಾಕರ್, ಕಡಗಟ್ಟೂರು ದಯಾನಂದ್, ಪಿಎಲ್‍ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಶಿಧರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.