
ಕೋಲಾರ: ಕಂದಾಯ ಇಲಾಖೆಯಲ್ಲಿ ಮೊದಲ ಬಾರಿ ಕಂದಾಯ ನ್ಯಾಯಾಲಯಗಳ ವಿಚಾರಣೆಯನ್ನು ನೇರ ಪ್ರಸಾರ ಮಾಡಲು ನಿರ್ಧರಿಸಲಾಗಿದೆ. ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ ಆರಂಭವಾಗಲಿದ್ದು, ಸಾರ್ವಜನಿಕರು ಮನೆಯಲ್ಲೇ ಕುಳಿತು ತಮ್ಮ ಕೇಸಿನ ಪ್ರಗತಿ ವೀಕ್ಷಿಸಬಹುದು. ಇದರಿಂದ ಮಧ್ಯವರ್ತಿಗಳ ಹಾವಳಿಗೆ ಬ್ರೇಕ್ ಬೀಳಲಿದೆ, ಪಾರದರ್ಶಕತೆ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಆರ್.ರವಿ ತಿಳಿಸಿದರು.
ಕರ್ನಾಟಕ ಭೂಸುಧಾರಣಾ ಅಧಿನಿಯಮ 1964ಕ್ಕೆ ತಂದಿರುವ ತಿದ್ದುಪಡಿಗಳ ಕುರಿತು ಮಂಗಳವಾರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಾಗಿ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಾಗಾರವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕಂದಾಯ ಇಲಾಖೆಯ ಸಾರ್ವಜನಿಕ ಸೇವೆಗಳಲ್ಲಿ ಪಾರದರ್ಶಕತೆ ಮತ್ತು ವೇಗವನ್ನು ಹೆಚ್ಚಿಸಲು ಕಾನೂನುಗಳಲ್ಲಿ ಐತಿಹಾಸಿಕ ತಿದ್ದುಪಡಿ ತಂದಿದ್ದು, ಈ ಬದಲಾವಣೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಸನ್ನದ್ಧರಾಗಬೇಕು ಎಂದು ಸೂಚಿಸಿದರು.
ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಪೂರಕವಾಗಿ ಭೂಮಿ ಮಂಜೂರಾತಿ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ. ಎರಡು ಎಕರೆವರೆಗಿನ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಬಳಸಲು ಇನ್ನು ಮುಂದೆ ಜಿಲ್ಲಾಧಿಕಾರಿ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಪ್ರಮಾಣಪತ್ರ ಸಲ್ಲಿಸಿದ 15 ದಿನಗಳೊಳಗೆ ಸಂಬಂಧಪಟ್ಟ ಇಲಾಖೆಗಳು ಪ್ರತಿಕ್ರಿಯಿಸದಿದ್ದರೆ, ಅದನ್ನು 'ಅನುಮೋದಿತ' ಎಂಬುದಾಗಿ ಪರಿಗಣಿಸಲಾಗುತ್ತದೆ ಎಂದರು.
ಯಾವುದೇ ವಿವಾದ ಅಥವಾ ಆಕ್ಷೇಪಣೆಗಳಿಲ್ಲದ ಆಸ್ತಿ ವರ್ಗಾವಣೆ ಪ್ರಕರಣಗಳಲ್ಲಿ ಅಧಿಕಾರಿಗಳ ಸಹಿ ಅಥವಾ ಆದೇಶಕ್ಕಾಗಿ ಕಾಯುವ ಅವಧಿಗೆ ಅಂತ್ಯ ಹಾಕಲಾಗಿದೆ. ತಂತ್ರಜ್ಞಾನದ ನೆರವಿನಿಂದ ಅಂತಹ ಪ್ರಕರಣಗಳಲ್ಲಿ ಸ್ವಯಂಚಾಲಿತವಾಗಿ ಮ್ಯುಟೇಶನ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ವಿವರಿಸಿದರು.
ಅಧಿಕಾರಿಗಳು ಕೇವಲ ಆಡಳಿತಾತ್ಮಕ ಕೆಲಸಗಳಿಗೆ ಸೀಮಿತವಾಗಬಾರದು. ಕಂದಾಯ ಕಾಯ್ದೆಯ ಹೊಸ ತಿದ್ದುಪಡಿಗಳ ಬಗ್ಗೆ ನಿರಂತರವಾಗಿ ಜ್ಞಾನ ನವೀಕರಿಸಿಕೊಳ್ಳಬೇಕು. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದೇ ನಮ್ಮ ಪ್ರಥಮ ಆದ್ಯತೆಯಾಗಲಿ ಎಂದರು.
ನಿವೃತ್ತ ಉಪವಿಭಾಗಾಧಿಕಾರಿ ರಾಮಂಜಿನಪ್ಪ ಅವರು ತಿದ್ದುಪಡಿಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಿದರು.
ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್.ಎಂ.ಮಂಗಳಾ, ಉಪವಿಭಾಗಾಧಿಕಾರಿ ಡಾ.ಮೈತ್ರಿ, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಮೈಲಾರಪ್ಪ ಹಾಗೂ ಜಿಲ್ಲೆಯ ಎಲ್ಲಾ ತಹಶೀಲ್ದಾರ್‌ಗಳು, ಕಂದಾಯ ನಿರೀಕ್ಷಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.