ADVERTISEMENT

ಜಿಲ್ಲಾ ಕೇಂದ್ರಕ್ಕೆ ವರ್ತುಲ ರಸ್ತೆ: ಭರವಸೆ

ವಾಹನ ದಟ್ಟಣೆ ಹೆಚ್ಚಿದೆ: ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 14:11 IST
Last Updated 25 ಸೆಪ್ಟೆಂಬರ್ 2021, 14:11 IST

ಕೋಲಾರ: ‘ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ 20 ಕಿ.ಮೀ ವರ್ತುಲ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಮುನಿರತ್ನ ಭರವಸೆ ನೀಡಿದರು.

ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಜಿಲ್ಲಾ ಕೇಂದ್ರ ಒಳ ಭಾಗದಲ್ಲಿ ವಾಹನ ದಟ್ಟಣೆ ಹೆಚ್ಚಿದೆ. ಹೀಗಾಗಿ ನಗರಕ್ಕೆ ಹೊರ ವರ್ತಲು ರಸ್ತೆಯ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ನಗರದ ಅಭಿವೃದ್ಧಿಗೆ ಬಿಡುಗಡೆಯಾಗಿರುವ ಅನುದಾನ ಸರ್ಕಾರಕ್ಕೆ ವಾಪಸ್‌ ಹೋಗಲು ಬಿಡುವುದಿಲ್ಲ. ಆ ಅನುದಾನದ ಜತೆಗೆ ಮತ್ತಷ್ಟು ಅನುದಾನ ತರುತ್ತೇವೆ. ನಗರದ ರಸ್ತೆಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಪೂರ್ಣ ಪ್ರಮಾಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರ ಜನರಕುಂದು ಕೊರತೆ ಆಲಿಸುತ್ತೇನೆ. ಜಿಲ್ಲೆಯ ಜನರಿಗೆ ಒಳಿತು ಮಾಡುವ ನಿಟ್ಟಿನಲ್ಲಿ ಆಗಬೇಕಿರುವ ಕೆಲಸಗಳತ್ತ ಹೆಚ್ಚು ಗಮನ ಹರಿಸುತ್ತೇನೆ’ ಎಂದು ತಿಳಿಸಿದರು.

‘ಕೋವಿಡ್ 3ನೇ ಅಲೆ ನಿಯಂತ್ರಣದ ಕಡೆಗೆ ಹೆಚ್ಚು ಗಮನ ಹರಿಸುವಂತೆ ಉಸ್ತುವಾರಿ ಸಚಿವನಾದಾಗ ನನಗೆ ಜವಾಬ್ದಾರಿ ನೀಡಲಾಗಿದೆ. ಹೀಗಾಗಿ ಸದ್ಯ ಬೇರೆ ವಿಚಾರಗಳಿಗೆ ಆದ್ಯತೆ ಕೊಡಲು ಸಾಧ್ಯವಾಗುತ್ತಿಲ್ಲ. ಸ್ವಲ್ಪ ದಿನ ಕಳೆದ ನಂತರ ಎಲ್ಲಾ ವಿಚಾರಗಳತ್ತ ಗಮನ ಹರಿಸುತ್ತೇನೆ’ ಎಂದು ಹೇಳಿದರು.

ರಾಜಕೀಯ ಲಾಭಕ್ಕೆ ಬಳಕೆ: ‘ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯು ಬ್ಯಾಂಕನ್ನು ಯಾವ ರೀತಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂಬ ಸಂಗತಿ ಗಮನಕ್ಕೆ ಬಂದಿದೆ. ಮುಂದೆ ಇದನ್ನು ಸರಿಪಡಿಸುತ್ತೇವೆ. ಬ್ಯಾಂಕ್ ಸದಾ ಬ್ಯಾಂಕ್ ಆಗಿಯೇ ಉಳಿಯಬೇಕೇ ಹೊರತು ರಾಜಕಾರಣಕ್ಕೆ ಬಳಸಿಕೊಳ್ಳಬಾರದು. ಬ್ಯಾಂಕ್‌ ವ್ಯವಹಾರದಲ್ಲಿ ರಾಜಕೀಯ ನುಸುಳಲು ಅವಕಾಶ ಕೊಡುವುದಿಲ್ಲ’ ಎಂದರು.

‘ಅವಿಭಜಿತ ಕೋಲಾರ ಜಿಲ್ಲೆಯ ಹಾಲು ಒಕ್ಕೂಟ (ಕೋಚಿಮುಲ್‌) ವಿಭಜನೆ ಸಂಬಂಧ ನಾನು ಮತ್ತು ಸಚಿವ ಸುಧಾಕರ್ ಮುಖ್ಯಮಂತ್ರಿಗಳ ಜತೆ ಮಾತನಾಡಿದ್ದು, ಸದ್ಯದಲ್ಲೇ ಗೊಂದಲಕ್ಕೆ ತೆರೆ ಬೀಳಲಿದೆ. ಕೋಚಿಮುಲ್ ಮತ್ತು ಡಿಸಿಸಿ ಬ್ಯಾಂಕ್ ವಿಚಾರವಾಗಿ ಇಬ್ಬರು ಸಚಿವರೊಂದಿಗೆ ಚರ್ಚಿಸಬೇಕಿದೆ. ಅವಳಿ ಜಿಲ್ಲೆಯ ಶಾಸಕರು ನಿಯೋಗ ಹೋಗಿರಬಹುದು. ಆದರೆ, ಕಾನೂನು ಮಾತ್ರ ಕೆಲಸ ಮಾಡುತ್ತದೆ. ನಾವು ಕಾನೂನಿನ ಚೌಕಟಿನಲ್ಲೇ ಕೆಲಸ ಮಾಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.

‘ಕೋಲಾರ ಜಿಲ್ಲೆಯ ಅಭಿವೃದ್ಧಿಗೆ ಬದ್ದತೆ ಇದೆ. ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವು, ಟೊಮೆಟೊ, ಹೂವು ಬೆಳೆಯುತ್ತಿದ್ದು, ರೈತರ ಹಿತದೃಷ್ಟಿಯಿಂದ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಬೇಕಿದೆ. ಲಾಲ್‌ಬಾಗ್‌ ಮಾದರಿಯಲ್ಲಿ ಜಿಲ್ಲೆಯ ವಿವಿಧೆಡೆ ಹಣ್ಣು, ತರಕಾರಿ ಮಾರುಕಟ್ಟೆ ಸ್ಥಾಪಿಸುವ ಯೋಚನೆಯಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.