ಕೋಲಾರ: ‘ದೇಶದಲ್ಲಿ ಎಲ್ಲಿಯೂ ಅಹಿಂಸೆ ನಡೆಯಬಾರದು ಮತ್ತು ಅಹಿಂಸೆಗೆ ಅವಕಾಶ ಕೊಡಬಾರದು. ರಾಜಕಾರಣ ಬೇರೆ ಬೇರೆಯಾದರೂ ಕಾನೂನು ಎಲ್ಲರಿಗೂ ಒಂದೇ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಹೇಳಿದರು.
ಇಲ್ಲಿ ಶುಕ್ರವಾರ ಇಫ್ಕೋ ಟೊಕಿಯೋ ಸಂಸ್ಥೆ ವತಿಯಿಂದ ಮಕ್ಕಳ ಶಿಕ್ಷಣಕ್ಕೆ ಹಣಕಾಸು ನೆರವಿನ ಚೆಕ್ ವಿತರಿಸಿ ಮಾತನಾಡಿ, ‘ದೇಶದಲ್ಲಿ ಮಹಾತ್ಮ ಗಾಂಧೀಜಿಯ ಶಾಂತಿ, ಅಹಿಂಸೆ ತತ್ವದಡಿ ಹೋರಾಟ ನಡೆಸಿ ಸ್ವಾತಂತ್ರ್ಯ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ. ಹೀಗಾಗಿ ಎಲ್ಲರೂ ಗಾಂಧೀಜಿ ತತ್ವಾದರ್ಶ ಪಾಲಿಸಬೇಕು’ ಎಂದರು.
‘ಬೆಂಗಳೂರಿನ ದೇವರಜೀವನಹಳ್ಳಿ ಮತ್ತು ಕಾಡುಗೊಂಡನಹಳ್ಳಿ ಗಲಭೆಯು ಜಾತಿ ಆಧಾರದಲ್ಲಿ ನಡೆಯಲಿಲ್ಲ. ರಾಜಕೀಯ ದುರುದ್ದೇಶಕ್ಕೆ ಈ ಗಲಭೆಯಾಗಿದ್ದು, ಇದನ್ನು ದೊಡ್ಡದು ಮಾಡಲಾಗುತ್ತಿದೆ. ಇದು ಅಮಾನವೀಯ ಘಟನೆಯಾಗಿದ್ದು, ಎಲ್ಲರೂ ಖಂಡಿಸಬೇಕು’ ಎಂದು ತಿಳಿಸಿದರು.
‘ಯಾರೇ ತಪ್ಪು ಮಾಡಿದರೂ ಕಾನೂನಾತ್ಮಕವಾಗಿ ಶಿಕ್ಷೆಯಾಗಬೇಕು. ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷ ನಿಷೇಧಿಸಲು ಆಗುವುದಿಲ್ಲ. ಪಾಪುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆ ನಿಷೇಧಿಸಲು ಸರ್ಕಾರಕ್ಕೆ ಅಧಿಕಾರವಿದೆ’ ಎಂದು ಅಭಿಪ್ರಾಯಪಟ್ಟರು.
‘ಯರಗೋಳ್ ಯೋಜನೆ ಕಾಮಗಾರಿ ಜನವರಿ ವೇಳೆಗೆ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ಭರವಸೆ ನೀಡಿದ್ದಾರೆ. ಮಾರ್ಕಂಡೇಯ ಕೆರೆ ತುಂಬಿ ಕೋಡಿ ಹರಿದರೆ ಆ ನೀರು ಯರಗೋಳ್ ಮಾರ್ಗವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿತ್ತು. ನೀರು ಸಂಗ್ರಹಣೆಗೆ ಜಿಲ್ಲೆಯಲ್ಲಿ ಡ್ಯಾಮ್ ಇರಲಿಲ್ಲಿ. ಈಗ ಡ್ಯಾಮ್ ಭರ್ತಿಯಾದರೆ ಮಾತ್ರ ನೀರು ತಮಿಳುನಾಡಿಗೆ ಹೋಗಲು ಸಾಧ್ಯ’ ಎಂದು ವಿವರಿಸಿದರು.
ಮಳೆ ಕಡಿಮೆ: ‘ಯರಗೋಳ್ ಡ್ಯಾಮ್‌ಗೆ ನೀರು ಬಂದರೂ ಸಹ ಮಳೆ ನೀರು ಮಿಶ್ರವಾಗದಂತೆ ಜಾಕ್‍ವೆಲ್ ಮೂಲಕ ನಿಯಂತ್ರಿಸಬಹುದು. ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗುತ್ತಿದೆ. ಹೆಚ್ಚು ಮಳೆಯಾದರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಕೆ.ಸಿ ವ್ಯಾಲಿ ನೀರಿನಿಂದ ಅಂತರ್ಜಲ ವೃದ್ಧಿಯಾಗಲಿದ್ದು, ಕೊಳವೆ ಬಾವಿಗಳು ಮರುಪೂರಣವಾಗುತ್ತವೆ’ ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ, ಕೋಲಾರ ಎಪಿಎಂಸಿ ಅಧ್ಯಕ್ಷ ಮಂಜುನಾಥ್, ನರಸಾಪುರ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಮುನಿರಾಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.