ADVERTISEMENT

ಕೆರೆಯಲ್ಲೇ ರಸ್ತೆ, ಶೌಚಾಲಯ, ಚಿತಾಗಾರ!

ಕೆಜಿಎಫ್ ತಾಲ್ಲೂಕು ಜಕ್ಕರಸನಕುಪ್ಪ ಗ್ರಾಮ ಪಂಚಾಯಿತಿ ವಿವಾದ

ಕೃಷ್ಣಮೂರ್ತಿ
Published 6 ಸೆಪ್ಟೆಂಬರ್ 2021, 8:32 IST
Last Updated 6 ಸೆಪ್ಟೆಂಬರ್ 2021, 8:32 IST
ಜಕ್ಕರಸನಕುಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ಸಂಗನಹಳ್ಳಿ ಕೆರೆಯಲ್ಲಿ ನರೇಗಾದಲ್ಲಿ ಚಿತಾಗಾರ ನಿರ್ಮಿಸುತ್ತಿರುವುದು
ಜಕ್ಕರಸನಕುಪ್ಪ ಗ್ರಾಮ ಪಂಚಾಯಿತಿಗೆ ಸೇರಿದ ಸಂಗನಹಳ್ಳಿ ಕೆರೆಯಲ್ಲಿ ನರೇಗಾದಲ್ಲಿ ಚಿತಾಗಾರ ನಿರ್ಮಿಸುತ್ತಿರುವುದು   

ಕೆಜಿಎಫ್: ನರೇಗಾ ಯೋಜನೆಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ನೆಪದಲ್ಲಿ ಕೆರೆಯಲ್ಲಿ ರಸ್ತೆ ನಿರ್ಮಿಸಿರುವ ಜಕ್ಕರಸನಕುಪ್ಪ ಗ್ರಾಮ ಪಂಚಾಯಿತಿ ವಿವಾದ ಸೃಷ್ಟಿಸಿದೆ.

ಜಕ್ಕರಸನಕುಪ್ಪ ಗ್ರಾಮ ಪಂಚಾಯಿತಿಯ ಸಂಗನಹಳ್ಳಿಯ ದೊಡ್ಡಕೆರೆ ಈಗ ವಿವಾದಕ್ಕೆ ಈಡಾಗಿದ್ದು, ಸುಮಾರು ₹23 ಲಕ್ಷ ವೆಚ್ಚದಲ್ಲಿ ಕಾಮಗಾರಿಗಳನ್ನು ಕೆರೆಯಲ್ಲಿ ಮಾಡಲಾಗಿದೆ. ಇದಕ್ಕಾಗಿ ಸಾವಿರಾರು ಮಾನವ ದಿನಗಳನ್ನು ವ್ಯಯಿಸಲಾಗಿದೆ.

ಗ್ರಾಮದ ಸರ್ವೆ ನಂಬರ್ 5ರಲ್ಲಿರುವ ದೊಡ್ಡ ಕೆರೆ ಸುಮಾರು 78.27 ಎಕರೆ ಪ್ರದೇಶ ವ್ಯಾಪ್ತಿಯನ್ನು ಹೊಂದಿದೆ. ಈ ಭಾಗದಲ್ಲಿಯೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ ಕೆರೆಗೆ ನೀರುಣಿಸುವ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದರಿಂದ ಸುಮಾರು ಎರಡು ದಶಕಗಳಿಂದ ಕೆರೆಗೆ ನೀರೇ ಬಂದಿಲ್ಲ. ಮಳೆಯ ನೀರು ಅಲ್ಲಲ್ಲಿ ಸಣ್ಣಪುಟ್ಟ ಹಳ್ಳಗಳನ್ನು ತುಂಬಿಸುತ್ತದೆಯೇ ಹೊರೆತು ಕೆರೆಯನ್ನು ತುಂಬಿಸುವುದಿಲ್ಲ.

ADVERTISEMENT

2017ರಲ್ಲಿ ಈ ಭಾಗದ ಬಹುತೇಕ ಕೆರೆಗಳು ಕೋಡಿ ಹೋಗಿದ್ದರೂ, ಸಂಗನಹಳ್ಳಿ ಕೆರೆ ಮಾತ್ರ ಜಲಕ್ಷಾಮವನ್ನು ಎದುರಿಸುತ್ತಿತ್ತು. ಕೆರೆಗೆ ನೀರು ಬರದಿರುವುದನ್ನು ಬಂಡವಾಳ ಮಾಡಿಕೊಂಡು ಜಕ್ಕರಸನಕುಪ್ಪ ಗ್ರಾಮ ಪಂಚಾಯಿತಿ ಕೆರೆಯಲ್ಲಿಯೇ ರಸ್ತೆ ನಿರ್ಮಾಣ, ಶೌಚಾಲಯ, ಚಿತಾಗಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ.

ನರೇಗಾದಲ್ಲಿ ಕೆರೆಯ ಮೇಲ್ಭಾಗದಲ್ಲಿ ರಸ್ತೆ ನಿರ್ಮಾಣ ಮಾಡಲಾಗಿದೆ. ನಂತರ ಕೆರೆಯ ಒಳಭಾಗದಲ್ಲಿ ಕಟ್ಟೆಯ ಪಕ್ಕದಲ್ಲಿಯೇ ಮತ್ತೊಂದು ರಸ್ತೆ ನಿರ್ಮಾಣ ಮಾಡಿದೆ. ಇವೆರಡೂ ರಸ್ತೆಗೆ ಕೂಡು ರಸ್ತೆಯನ್ನು ಸಹ ನಿರ್ಮಾಣ ಮಾಡಲಾಗಿದೆ.

ಕೆರೆಯ ಮಧ್ಯಭಾಗದಲ್ಲಿ ರಸ್ತೆ ನಿರ್ಮಾಣ ಮಾಡಿರುವುದರಿಂದ ರಸ್ತೆಯ ಎರಡೂ ಬದಿಗಳಲ್ಲಿ ಗ್ರಾಮಸ್ಥರು ಕೆರೆಯನ್ನು ಒತ್ತುವರಿ ಮಾಡಿಕೊಂಡು ಬೆಳೆಬೆಳೆಯುತ್ತಿದ್ದಾರೆ. ಕೋಡಿ ನೀರು ಹೋಗುವ ಜಾಗದಲ್ಲಿ ಕೂಡ ಜೋಳದ ಬೆಳೆಯನ್ನು ನಾಟಿ ಮಾಡಲಾಗಿದೆ. ಅದರ ಪಕ್ಕದಲ್ಲಿಯೇ ಸಾರ್ವಜನಿಕ ಶೌಚಾಲಯವನ್ನು ಎರಡು ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಲಾಗಿದೆ. ಆದರೆ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಿ ಎರಡು ವರ್ಷವಾಗಿದ್ದರೂ, ಇನ್ನೂ ಸಾರ್ವಜನಿಕ ಉಪಯೋಗಕ್ಕೆ ಲೋಕಾರ್ಪಣೆ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಸಂಗನಹಳ್ಳಿಯಲ್ಲಿ ನಡೆದ ವಾರ್ಡ್ ಸಭೆಯಲ್ಲಿ ರೈತರು ತಮ್ಮ ಹೊಲಗಳಿಗೆ ಹೋಗಲು ರಸ್ತೆ ಬೇಕು ಎಂದು ಕೇಳಿದ್ದರು. ಅವರ ಕೋರಿಕೆ ಮೇರೆಗೆ ಹಿಂದಿನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೋದಂಡರಾಮ ಅವರ ಅವಧಿಯಲ್ಲಿ ಕಾಮಗಾರಿಗೆ ಅನುಮೋದನೆ ಸಿಕ್ಕಿತ್ತು ಎಂದು ಪಂಚಾಯಿತಿ ಅಧಿಕಾರಿಗಳು ಮಾಹಿತಿ ನೀಡಿದರು.

ತನಿಖೆ ನಡೆಸಿ ಕ್ರಮ

ನರೇಗಾದಲ್ಲಿ ನಡೆಯುವ ಕಾಮಗಾರಿ ಯೋಜನೆಗಳನ್ನು ತಾಲ್ಲೂಕು ಪಂಚಾಯಿತಿ ತಯಾರಿಸಿ, ಅದಕ್ಕೆ ಜಿಲ್ಲಾ ಪಂಚಾಯಿತಿಯಿಂದ ಅನುಮೋದನೆ ಪಡೆಯಲಾಗುತ್ತದೆ. ಕೆರೆಯಲ್ಲಿ ಕಾಮಗಾರಿ ಮಾಡಿದ ಬಗ್ಗೆ ಮಾಹಿತಿ ಇಲ್ಲ. ಕೆರೆಯಲ್ಲಿ ಕಾಮಗಾರಿ ನಡೆಸಿದ್ದರೆ, ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಅಧಿಕಾರಿ ಮಂಜುನಾಥ್ ಹೇಳಿದ್ದಾರೆ.

ಕೆರೆ ರಕ್ಷಣೆ ಬಗ್ಗೆ ಕ್ರಮ ಕೈಗೊಂಡಿಲ್ಲ

ಕೆರೆಗಳ ಒತ್ತುವರಿಯಾಗಿದ್ದಲ್ಲಿ ತೆರವುಗೊಳಿಸಲು ಸಹಾಯಕ ಕಮಿಷನರ್ ಮತ್ತು ತಹಶೀಲ್ದಾರ್ ಪ್ರಮುಖ ಪಾತ್ರ ವಹಿಸಬೇಕು. ಕಂದಾಯ ನಿರೀಕ್ಷಕರು ಮತ್ತು ಸರ್ವೆಯರ್‌ಗಳು ಕೆರೆಗಳ ಸರ್ವೆ ಕಾರ್ಯವನ್ನು ಕೈಗೊಳ್ಳಬೇಕು. ತಮ್ಮ ವ್ಯಾಪ್ತಿಗೆ ಬರುವ ಕೆರೆಗಳನ್ನು ಜಿಲ್ಲಾ ಪಂಚಾಯಿತಿಯ ಇಲಾಖೆ ಸಂರಕ್ಷಿಸಬೇಕು ಎಂದು ಜೂನ್ 23ರಂದು ಕೆರೆ ಸಂರಕ್ಷಣೆ ಕುರಿತ ಜಿಲ್ಲಾ ಮಟ್ಟದ ಅಪೆಕ್ಸ್ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಯಾವುದೇ ಇಲಾಖೆ ಕೂಡ ಕೆರೆಯ ರಕ್ಷಣೆ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.