ಮುಳಬಾಗಿಲು: ತಾಲ್ಲೂಕಿನ ಸಾತನೂರು ಗ್ರಾಮದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಸಮೃದ್ಧಿ ಮಂಜುನಾಥ್ ಬುಧವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ‘ತಾಲ್ಲೂಕಿನಾದ್ಯಂತ ಕೇಂದ್ರ ಸರ್ಕಾರದಿಂದ 50 ಕಿ.ಮೀ ಹಾಗೂ ರಾಜ್ಯ ಸರ್ಕಾರದಿಂದ 25 ಕಿ.ಮೀ ರಸ್ತೆ ಕಾಮಗಾರಿಗೆ ಅವಕಾಶ ಸಿಕ್ಕಿದೆ’ ಎಂದು ಹೇಳಿದರು.
ಸಾತನೂರು ಗ್ರಾಮದಲ್ಲಿ ಈಗಾಗಲೇ ವಾಲ್ಮೀಕಿ ಭವನ ಹಾಗೂ ಹೈಮಾಸ್ಟ್ ದೀಪ ಅಳವಡಿಸಲಾಗಿದೆ. ಸಾರ್ವಜನಿಕರ ಸುಗುಮ ಸಂಚಾರಕ್ಕಾಗಿ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. ಗ್ರಾಮಕ್ಕೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.
ಸಾತನೂರು–ಬಿಸನಹಳ್ಳಿ ಮಧ್ಯೆ ಸುಸಜ್ಜಿತವಾದ ರಸ್ತೆ ಇಲ್ಲದೆ ಜನ ಹಲವು ದಿನ ಪರದಾಡುತ್ತಿದ್ದರು. ಇದನ್ನು ಗಮನಿಸಿ ಒಂದು ಕಿ.ಮೀ ವ್ಯಾಪ್ತಿಯಲ್ಲಿ ರಸ್ತೆ ದುರಸ್ತಿಗೊಳಿಸಲಾಗುತ್ತಿದೆ ಎಂದರು.
ಇತ್ತೀಚೆಗೆ ಮುಳಬಾಗಿಲು ನಗರದಲ್ಲಿ ಶಿಕ್ಷಕಿ ದಿವ್ಯಶ್ರೀ ಅವರ ಕೊಲೆ ನಡೆದಿದೆ. ಈ ಹಿನ್ನೆಲೆಯಲ್ಲಿ 23ರಂದು ಎಲ್ಲ ಪ್ರಾಥಮಿಕ ಶಾಲಾ ಶಿಕ್ಷಕರು ಸೇರಿ ಬೃಹತ್ ಮಟ್ಟದ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗುವುದು. ಈ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಲಾಗುವುದು ಎಂದು ಹೇಳಿದರು.
ಸಾಮೇಗೌಡ, ಚಾಮರೆಡ್ಡಿಹಳ್ಳಿ ಪ್ರಕಾಶ್, ಮುನಿಸ್ವಾಮಿ ಗೌಡ, ಗೊಲ್ಲಹಳ್ಳಿ ಜಗದೀಶ್, ತಹಶೀಲ್ದಾರ್ ಬಿ.ಸಿ. ವೆಂಕಟಾಚಲಪತಿ, ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಸರ್ವೇಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.