ಕೆಜಿಎಫ್: ಇಲ್ಲಿನ ಬೆಮಲ್ ಆಲದ ಮರದಿಂದ ಕೃಷ್ಣಾವರಂ ಗ್ರಾಮದವರೆಗಿನ ರಾಜ್ಯ ಹೆದ್ದಾರಿ ಅಕ್ಕಪಕ್ಕ ಒತ್ತುವರಿಯಾಗಿದ್ದು, ಇಲ್ಲಿ ಅಪಘಾತಗಳು ಹೆಚ್ಚುತ್ತಿರುವುದು ನಾಗರಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಬಂಗಾರಪೇಟೆಯಿಂದ ಕೆಜಿಎಫ್ ನಗರವನ್ನು ಮುಟ್ಟದೇ ಬೇತಮಂಗಲ ಮತ್ತು ಆಂಧ್ರದ ವಿ.ಕೋಟೆಗೆ ಹೋಗಲು ಈ ಮಾರ್ಗವನ್ನು ಬಳಸಲಾಗುತ್ತಿದೆ. ಇದು ರಾಜ್ಯ ಹೆದ್ದಾರಿಯಾಗಿದೆ. ಇತ್ತೀಚೆಗೆ ಈ ರಸ್ತೆಯನ್ನು ಅಭಿವೃದ್ಧಿ ಪಡಿಸಲಾಗಿದೆ. ರಸ್ತೆ ಚೆನ್ನಾಗಿರುವುದರಿಂದ ವಾಹನಸವಾರರು ಮಿತಿಮೀರಿದ ವೇಗದಲ್ಲಿ ಸಾಗುತ್ತಿದ್ದಾರೆ. ರಸ್ತೆಯ ಅಕ್ಕಪಕ್ಕ ಜಾಗ ಒತ್ತುವರಿಯಾಗಿದ್ದು, ಕೆಲವರು ರಸ್ತೆಯಲ್ಲೇ ವಾಹನ ನಿಲ್ಲಿಸುತ್ತಿರುವುದು ಅಪಘಾತಕ್ಕೆ ಕಾರಣವಾಗುತ್ತಿದೆ ಎಂಬುದು ನಾಗರಿಕರ ಆರೋಪ.
ಬೆಮಲ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅತಿಹೆಚ್ಚು ಅಪಘಾತವಾಗುವ ವಲಯ ಎಂಬ ಕುಖ್ಯಾತಿಗೆ ಈ ರಸ್ತೆ ಪಾತ್ರವಾಗಿದೆ. ರಸ್ತೆಯ ಒಂದು ಬದಿ ಕೆಜಿಎಫ್ ತಾಲ್ಲೂಕಿಗೆ ಸೇರಿದೆ. ಮತ್ತೊಂದು ಬದಿ ಬಂಗಾರಪೇಟೆ ತಾಲ್ಲೂಕಿಗೆ ಸೇರಿದೆ. ರಸ್ತೆಯ ದಕ್ಷಿಣ ಭಾಗ ರಾಬರ್ಟಸನ್‌ಪೇಟೆ ನಗರಸಭೆಯ ವ್ಯಾಪ್ತಿಗೆ ಬಂದರೆ, ಉತ್ತರದ ಭಾಗ ದೊಡ್ಡೂರು ಕರಪನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರುತ್ತದೆ.
ಮಂಗಳವಾರವಷ್ಟೇ ಈ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಅಸ್ಸಾಂ ಮೂಲದ ಕಾರ್ಮಿಕ ಮೃತಪಟ್ಟು, ತಮಿಳುನಾಡು ಮೂಲದ ಕಾರ್ಮಿಕ ತೀವ್ರವಾಗಿ ಗಾಯಗೊಂಡಿದ್ದ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಸ್ಥಳಕ್ಕೆ ಆಗಮಿಸಿ, ರಸ್ತೆಯಲ್ಲಿ ವೇಗದ ಮಿತಿಯನ್ನು ತಡೆಯಲು ಬೆಮಲ್ ಪೊಲೀಸರಿಗೆ ಸೂಚನೆಗಳನ್ನು ನೀಡಿದರು. ಬುಧವಾರ ರಸ್ತೆಯಲ್ಲಿ ವೇಗ ಮಿತಿ ಮಾಡಲು ಬ್ಯಾರಿಕೇಡ್ ಅಳವಡಿಸಲಾಗಿದೆ.
ಈ ಹಿಂದೆ ಬೆಮೆಲ್ ಕಾಲೊನಿಯಲ್ಲಿ ನಡೆಯುತ್ತಿದ್ದ ‘ಪೇಮೆಂಟ್ ಮಾರ್ಕೆಟ್’ (ಕಾರ್ಮಿಕರ ಸಂಬಳ ದಿನ ನಡೆಯುವ ಸಂತೆ) ಇದೀಗ ಆಲದಮರ–ಬೇತಮಂಗಲ ರಸ್ತೆಯ ಅಕ್ಕಪಕ್ಕಕ್ಕೆ ಸ್ಥಳಾಂತರವಾಗಿದೆ. ಹಾಗಾಗಿ, ತಿಂಗಳ ಕೊನೆಯದಿನ ಈ ರಸ್ತೆಯಲ್ಲಿ ಜನಸಂಚಾರ ಹೆಚ್ಚಿದ್ದು, ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.
ಆಲದ ಮರದ ಬಳಿಯ ರಸ್ತೆಯ ಒಂದು ಭಾಗ ನಗರಸಭೆ ವ್ಯಾಪ್ತಿಗೆ ಬಂದರೂ, ಅದರ ಉಸ್ತುವಾರಿ ಲೋಕೋಪಯೋಗಿ ಇಲಾಖೆಗೆ ಸೇರುತ್ತದೆ. ಈಗ ಆಗಿರುವ ಒತ್ತುವರಿಯನ್ನು ಅವರೇ ತೆರವು ಗೊಳಿಸಬೇಕು ಎಂದು ನಗರಸಭೆ ಆಯುಕ್ತ ಪವನ್‌ಕುಮಾರ್ ಹೇಳುತ್ತಾರೆ.
ಪದೇಪದೇ ಈ ರಸ್ತೆಯಲ್ಲಿ ಅಪಘಾತವಾಗಿ ಜನ ಪ್ರಾಣ ಕಳೆದುಕೊಳ್ಳುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.ಅನ್ಬರಸನ್ ನಿವಾಸಿ
ರಸ್ತೆಯ ಅಕ್ಕಪಕ್ಕದಲ್ಲಿ ಒತ್ತುವರಿಯಾಗಿರುವುದನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.ರವಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.