ADVERTISEMENT

ಕೋಲಾರ: ₹ 5 ಕೋಟಿ ವೆಚ್ಚದಲ್ಲಿ ರಸ್ತೆ ಅಗಲೀಕರಣ; ಸಂಸದ ಮುನಿಸ್ವಾಮಿ ಹೇಳಿಕೆ

ನಗರವಾಸಿಗಳ ಬಹುದಿನದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2020, 15:22 IST
Last Updated 28 ಆಗಸ್ಟ್ 2020, 15:22 IST
ಕೋಲಾರದ ಬಂಗಾರಪೇಟೆ ವೃತ್ತದಿಂದ ಕ್ಲಾಕ್‌ ಟವರ್‌ವರೆಗಿನ ರಸ್ತೆ ಅಗಲೀಕರಣ ಕಾಮಗಾರಿಗೆ ಜನಪ್ರತಿನಿಧಿಗಳು ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು.
ಕೋಲಾರದ ಬಂಗಾರಪೇಟೆ ವೃತ್ತದಿಂದ ಕ್ಲಾಕ್‌ ಟವರ್‌ವರೆಗಿನ ರಸ್ತೆ ಅಗಲೀಕರಣ ಕಾಮಗಾರಿಗೆ ಜನಪ್ರತಿನಿಧಿಗಳು ಶುಕ್ರವಾರ ಗುದ್ದಲಿ ಪೂಜೆ ನೆರವೇರಿಸಿದರು.   

ಕೋಲಾರ: ‘ನಗರವಾಸಿಗಳ ಬಹುದಿನದ ಬೇಡಿಕೆಯಂತೆ ₹ 5 ಕೋಟಿ ಅಂದಾಜು ವೆಚ್ಚದಲ್ಲಿ ಬಂಗಾರಪೇಟೆ ವೃತ್ತದಿಂದ ಕ್ಲಾಕ್‌ ಟವರ್‌ವರೆಗಿನ 1 ಕಿ.ಮೀ ಉದ್ದದ ರಸ್ತೆಯನ್ನು ಅಭಿವೃದ್ಧಿಪಡಿಸಿ ಸ್ವಚ್ಛ ನಗರವಾಗಿ ಮಾಡುತ್ತೇವೆ’ ಎಂದು ಸಂಸದ ಎಸ್‌.ಮುನಿಸ್ವಾಮಿ ಹೇಳಿದರು.

ಇಲ್ಲಿ ಶುಕ್ರವಾರ ಕಠಾರಿ ಗಂಗಮ್ಮ ದೇವಾಲಯದ ಮುಂಭಾಗ ನಡೆದ ರಸ್ತೆ ಅಗಲೀಕರಣ ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿ, ‘ರಸ್ತೆ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಜತೆಗೆ ಕಾಮಗಾರಿಯನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕು’ ಎಂದು ಗುತ್ತಿಗೆದಾರರಿಗೆ ಸೂಚಿಸಿದರು.

‘ಕೋಲಾರ ಜಿಲ್ಲಾ ಕೇಂದ್ರವಾದರೂ ಹಳ್ಳಿಗಿಂತ ಕಡೆಯಾಗಿದೆ. ಉತ್ತಮ ರಸ್ತೆಗಳಿಲ್ಲ ಎಂಬ ನೋವು ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಲ್ಲಿತ್ತು. ಯುಜಿಡಿ ಹಾಗೂ ಕುಡಿಯುವ ನೀರು ಸರಬರಾಜಿನ ಪೈಪ್‌ಲೈನ್‌ ಕಾಮಗಾರಿಯಿಂದ ನಗರದ ಬಹುತೇಕ ರಸ್ತೆಗಳು ಹಾಳಾಗಿದ್ದು, ನಗರವಾಸಿಗಳು ಪ್ರತಿನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ’ ಎಂದರು.

ADVERTISEMENT

‘ರಸ್ತೆ ಅಗಲೀಕರಣದ ಟೆಂಡರ್‌ ಪಡೆದಿರುವ ಗುತ್ತಿಗೆದಾರರು ಸ್ಥಳೀಯರೇ ಆಗಿದ್ದಾರೆ. ಹೀಗಾಗಿ ಅವರಿಗೂ ಕೋಲಾರ ನಗರದ ಅಭಿವೃದ್ಧಿ ಬಗ್ಗೆ ಅಪಾರ ಕಾಳಜಿಯಿದೆ. ಅವರು ಗುಣಮಟ್ಟದ ಕಾಮಗಾರಿ ನಡೆಸುವ ನಂಬಿಕೆಯಿದೆ. ಜತೆಗೆ 11 ತಿಂಗಳ ಗಡುವಿಗಿಂತ ಮುಂಚಿವಾಗಿ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸವಿದೆ. ನಾನು ಆಗಾಗ್ಗೆ ಕಾಮಗಾರಿ ಸ್ಥಳಕ್ಕೆ ಭೇಟಿ ಕೊಟ್ಟು ಗುಣಮುಟ್ಟ ಪರಿಶೀಲನೆ ಮಾಡುತ್ತೇನೆ’ ಎಂದು ತಿಳಿಸಿದರು.

ವರ್ತುಲರಸ್ತೆ: ‘ಕೋಲಾರ ಹೊರವಲಯದಲ್ಲಿ ವರ್ತುಲ ರಸ್ತೆ ನಿರ್ಮಾಣದ ಸಂಬಂಧ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು ಅವರಿಗೆ ಮನವಿ ಮಾಡಲಾಗಿದೆ. ಎಲ್ಲಾ ಜನಪ್ರತಿನಿಧಿಗಳು ಚರ್ಚಿಸಿ ವರ್ತುಲ ರಸ್ತೆ ಯಾವ ರೀತಿ ಇರಬೇಕೆಂದು ನಿರ್ಧಾರ ಮಾಡುವಂತೆ ಸಚಿವರು ಸೂಚಿಸಿದ್ದಾರೆ. ಈ ಸಂಬಂಧ ಶೀಘ್ರವೇ ಅಂತಿಮ ನಿರ್ಧಾರ ಕೈಗೊಂಡು ಸಚಿವರ ನೇತೃತ್ವದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಚರ್ಚಿಸುತ್ತೇವೆ’ ಎಂದು ಭರವಸೆ ನೀಡಿದರು.

ಅನುಮತಿ ನೀಡಿದ್ದರು: ‘ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಕೋಲಾರದ ಸುತ್ತ ವರ್ತುಲ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡಿದ್ದರು. ವರ್ತುಲ ರಸ್ತೆಗೆ ₹ 240 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ವಿವರಿಸಿದರು.

‘ನಗರದಲ್ಲಿ ಈಗಾಗಲೇ ಅಮೃತ್ ಸಿಟಿ ಯೋಜನೆಯಡಿ ಹಲವು ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ನಗರದ ಕೆಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇನ್ನೂ ಮಾಡಬೇಕಾದ ಕೆಲಸ ಸಾಕಷ್ಟಿವೆ. ನಗರವನ್ನು ಸಕಲ ರೀತಿಯಲ್ಲೂ ಅಭಿವೃದ್ಧಿ ಮಾಡುತ್ತೇವೆ’ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್.ನಾಗೇಶ್, ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಓಂಶಕ್ತಿ ಚಲಪತಿ, ಸದಸ್ಯ ಅಪ್ಪಿ ನಾರಾಯಣಸ್ವಾಮಿ, ನಗರಸಭೆ ಸದಸ್ಯರಾದ ರಾಕೇಶ್, ಮಂಜುನಾಥ್, ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್ ಆರ್.ಚಂದ್ರಶೇಖರ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೊಣ್ಣೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.