ADVERTISEMENT

ರಸ್ತೆ ವಿಸ್ತರಣೆ ಕಾಮಗಾರಿ ಕಳಪೆ: ದೂರು

ರಸ್ತೆ ಕಾಮಗಾರಿ ಕಳಪೆ: ಒತ್ತವರಿ ತೆರವುಗೊಳಿಸುವಲ್ಲಿ ತಾರತಮ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 2:09 IST
Last Updated 8 ಫೆಬ್ರುವರಿ 2021, 2:09 IST
ಕೋಲಾರ: ನಗರದಲ್ಲಿ ನಡೆಯುತ್ತಿರುವ ರಸ್ತೆ ವಿಸ್ತರಣೆ ಕಾಮಗಾರಿ ಅತ್ಯಂತ ಕಳಪೆ ಗುಣಮಟ್ಟದ್ದಾಗಿದೆ. ವಿಸ್ತರಣೆ ನೆಪದಲ್ಲಿ ಒತ್ತುವರಿ ತೆರವು ಮಾಡಿಸುವ ವಿಚಾರದಲ್ಲಿ ಕೂಡ ತಾರತಮ್ಯ ಮಾಡಲಾಗುತ್ತಿದೆ ಎಂದು ವಿವಿಧ ಸಂಘಟನೆಗಳ ಮುಖಂಡರು ಆರೋಪಿಸಿದ್ದಾರೆ.
ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುರುಬರಪೇಟೆ ವೆಂಕಟೇಶ್‌, ಮೆಕ್ಕೆ ವೃತ್ತದಿಂದ ಬಂಗಾರಪೇಟೆ ವೃತ್ತದವರೆಗೂ ರಸ್ತೆ ವಿಸ್ತರಣೆ ಮಾಡಲಾಗುತ್ತಿದೆ. ಇದಕ್ಕಾಗಿ ಸುಮಾರು ₹10 ಕೋಟಿ ವ್ಯಯ ಮಾಡಲಾಗುತ್ತಿದೆ. ಆದರೆ ಗುಣಮಟ್ಟ ಕಳಪೆಯಾಗಿದೆ. ಒತ್ತುವರಿ ವಿಷಯದಲ್ಲಿ ಕೂಡ ಬಡವರಿಗೆ ಒಂದು ನ್ಯಾಯ, ಶ್ರೀಮಂತರಿಗೆ ಒಂದು ನ್ಯಾಯ ಎಂಬ ರೀತಿಯಲ್ಲಿ ವರ್ತನೆ ಮಾಡಲಾಗಿದೆ. ಒಂದು ವಾರದೊಳಗೆ ಲೋಪ ಸರಿಪಡಿಸದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿಸ್ತರಣೆ ನೆಪದಲ್ಲಿ ಪುರಾತನ ದೇವಾಲಯಗಳನ್ನು ತೆರವು ಮಾಡುತ್ತಿರುವ ಅಧಿಕಾರಿಗಳು ಸರ್ವಜ್ಞ ಪಾರ್ಕ್ ಮುಂಭಾಗದ ಗೌರವ್ ಆಸ್ಪತ್ರೆಗೆ 6ನ ಅಡಿ, ಪಂಚವಟಿ ಹೋಟೆಲ್‍ಗೆ 4 ಅಡಿ ತೆರವು ಮಾಡದೆ ಒತ್ತಡಗಳಿಗೋ ಅಥವಾ ಆಮಿಷಕ್ಕೂ ಒಳಗಾಗಿ ಬಿಟ್ಟು ಕೊಟ್ಟಿದ್ದಾರೆ. ಅದರೆ ಬಡವರ ಮನೆಗಳನ್ನು ಮಾತ್ರ ಮುಲಾಜಿಲ್ಲದೆ ಕರಾರುವಕ್ಕಾಗಿ ತೆರವು ಮಾಡಿದ್ದಾರೆ ಇದು ಯಾವ ನ್ಯಾಯ? ಬಡವರಿಗೊಂದು ಕಾನೂನು, ಶ್ರೀಮಂತರಿಗೊಂದು ಕಾನೂನು ಇದೆಯೇ ಎಂದು ಪ್ರಶ್ನಿಸಿದರು.
ಎಪಿಎಂಸಿ ಮಾಜಿ ನಿರ್ದೇಶಕ ಹೊಳಲಿ ಪ್ರಕಾಶ್ ಮಾತನಾಡಿ, ಸುಮಾರು ₹10 ಕೋಟಿ ವೆಚ್ಚದಲ್ಲಿ ಮಾಡುತ್ತಿರುವ ಕಾಮಗಾರಿ ಕಳಪೆಯಾಗಿದೆ. ರಸ್ತೆಗಳ ಕಾಮಗಾರಿಯನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ. ರಸ್ತೆ ಬದಿ ಚರಂಡಿಗಳನ್ನು ಮಾಡಿಲ್ಲ. ಕೇಬಲ್ ಡಕ್‍ಗಳನ್ನು ಮಾಡಿಲ್ಲ. ಗುಣಮಟ್ಟ ಕಾಪಾಡಿಲ್ಲ, ಕಾಮಗಾರಿಗಳನ್ನು ಪೂರ್ಣಗೊಳಿಸಿದ ನಂತರ ಕೇಬಲ್ ಅಳವಡಿಸಲು ಹಾಗೂ ಚರಂಡಿ ಕಾಮಗಾರಿಗಳನ್ನು ಮಾಡಲು ರಸ್ತೆಯನ್ನು ಅಗೆದು ಹಾಳು ಮಾಡಿ ಹೋದರೆ ಪ್ರಯೋಜನವೇನು ? ಎಂದು ಪ್ರಶ್ನಿಸಿದರು.
ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡುತ್ತಾರೆ. ಲೋಕೋಪಯೋಗಿ ಎಂಜಿನಿಯರ್ ಮರೆತು ಹೋಗಿದೆ ಎನ್ನುತ್ತಾರೆ. ಇವುಗಳನ್ನು ಮಾಡಲು ಹೆಚ್ಚುವರಿಯಾಗಿ ₹5 ಕೋಟಿ ಅಗತ್ಯವಿದೆ ಎನ್ನುತ್ತಾರೆ. ಮತ್ತೆ ಜಿಲ್ಲಾಧಿಕಾರಿ ಬಳಿ ತೆರಳಿ ಒತ್ತಾಯಿಸಿದರೆ ಹೆಚ್ಚುವರಿಯಾಗಿ ₹5 ಕೋಟಿ ಮಂಜೂರು ಮಾಡಲು ಪ್ರಸ್ತಾವ ಸಲ್ಲಿಸುವುದಾಗಿ ಹೇಳಿದ್ದಾರೆ ಹೊರತುಸ್ಪಷ್ಟವಾದ ಮಾಹಿತಿ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಪ್ರವಾಸಿ ಮಂದಿರ ಕಾಂಪೌಂಡ್ ಗೋಡೆಗಳನ್ನು ರಸ್ತೆ ವಿಸ್ತರಣೆ ನೆಪದಲ್ಲಿ ತೆರವು ಮಾಡಿ ಮತ್ತೆ ಕಾಂಪೌಂಡ್ ನಿರ್ಮಿಸಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಎಷ್ಟು ನಷ್ಟವಾಗಿದೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಪರಿಜ್ಞಾನ ಇಲ್ಲವೇ ಎಂದು ಪ್ರಶ್ನಿಸಿದರು.
ರಾಷ್ಟ್ರೀಯ ರಸ್ತೆ ಸಪ್ತಾಹಗಳನ್ನುಆಚರಿಸುವ ಸರ್ಕಾರಿ ಇಲಾಖೆಗಳು ರಾಷ್ಟ್ರೀಯ ಹೆದ್ದಾರಿಯಲ್ಲಿಕನಿಷ್ಠ ಸುಣ್ಣ ಬಣ್ಣ ದೀಪಗಳನ್ನು ಹಾಕುವ ಅಪಘಾತಗಳನ್ನು ನಿಯಂತ್ರಿಸಬೇಕೆಂಬ ಕಾಳಜಿ ಇಲ್ಲದೆ ಸಪ್ತಾಹ ಆಚರಿಸುವುದರಲ್ಲಿ ಎಷ್ಟು ಮಾತ್ರ ಅರ್ಥವಿದೆ. ಸೇತುವೆಗಳ ನಿರ್ಮಾಣಗಳು ಅವೈಜ್ಞಾನಿಕವಾಗಿ ಇದೆ.ನಿಯಮಾನುಸಾರ ಹೆದ್ದಾರಿಗಳನ್ನು ನಿರ್ವಹಣೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ಕಿಡಿ ಕಾರಿದರು.

ಕರವೇ ನಾರಾಯಣಸ್ವಾಮಿ, ಸುಧೀರ್, ರೈತ ಸಂಘದ ರಾಜ್ಯ ಉಪಾಧ್ಯಕ್ಷ ನಾರಾಯಣಗೌಡ, ಕಲ್ವಮಂಜಲಿ ರಾಮು ಶಿವಣ್ಣ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.