
ಕೆಜಿಎಫ್: ಸರ್ಕಾರಿ ಸಾರ್ವಜನಿಕ ಆಸ್ಪತ್ರೆ, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಾಗೂ ಸಾಂಕ್ರಾಮಿಕ ರೋಗಿಗಳ ಆಸ್ಪತ್ರೆ ಸಮುಚ್ಛಯ ಹೊಂದಿರುವ ರಾಬರ್ಟ್‌ಸನ್‌ಪೇಟೆ ಆಸ್ಪತ್ರೆಯನ್ನು ಜಿಲ್ಲಾ ಮಟ್ಟದಿಂದ ತಾಲ್ಲೂಕು ಮಟ್ಟದ ಆಸ್ಪತ್ರೆಯಾಗಿ ಕೆಳದರ್ಜೆಗಿಳಿಸಲು ಮುಂದಾಗಿದ್ದು, ವಿವಿಧ ಸಂಘಟನೆಗಳು ಹೋರಾಟದ ಹಾದಿ ತುಳಿಯಲು ಸಜ್ಜಾಗಿವೆ.
ಆಸ್ಪತ್ರೆಯನ್ನು ಕೆಳದರ್ಜೆಗಿಳಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಜಾರಿಗೆ ಆರೋಗ್ಯ ಇಲಾಖೆ ಮುಂದಾಗಿದೆ.
ಕೋಲಾರದಲ್ಲಿರುವ ಎಸ್‌ಎನ್‌ಆರ್ ಆಸ್ಪತ್ರೆಗೆ ಸರಿಸಮನಾಗಿರುವ ಆಸ್ಪತ್ರೆಯಲ್ಲಿ 280 ಹಾಸಿಗೆಗಳು ಇವೆ. ಮೊದಲಿನಿಂದಲೂ ಜಿಲ್ಲಾ ಶಸ್ತ್ರ ಚಿಕಿತ್ಸಕ ಮತ್ತು ಸ್ಥಾನಿಕ ವೈದ್ಯಾಧಿಕಾರಿ ಹುದ್ದೆಗಳನ್ನು ಇಲ್ಲಿ ಸೃಷ್ಟಿಸಲಾಗಿತ್ತು. ಈಗಲೂ ಜಿಲ್ಲಾ ಶಸ್ತ್ರ ಚಿಕಿತ್ಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 1970ರಿಂದಲೂ ಇದ್ದ ಹುದ್ದೆಯನ್ನು ಈಗ ರದ್ದುಗೊಳಿಸಿರುವುದರಿಂದ ಇನ್ನು ಮುಂದೆ ತಾಲ್ಲೂಕು ಮಟ್ಟದ ಆಸ್ಪತ್ರೆಯಾಗಿ ಮುಂದುವರೆಯಲಿದೆ. ಹಾಲಿ ಇರುವ ವೈದ್ಯರು ಮತ್ತು ಸಿಬ್ಬಂದಿ ಸಂಖ್ಯೆ ಕಡಿಮೆಯಾಗುತ್ತಾರೆ ಎಂಬ ಆತಂಕ ವ್ಯಕ್ತವಾಗುತ್ತಿದೆ.
ಮೂರೂ ಆಸ್ಪತ್ರೆಗಳಿಗೆ ಬೇರೆ ಬೇರೆ ವೈದ್ಯರನ್ನು ಆಡಳಿತ ವ್ಯವಸ್ಥೆ ನೇಮಕ ಮಾಡುವುದರಿಂದ, ಮೂರು ಆಸ್ಪತ್ರೆಗಳ ನಡುವೆ ಹೊಂದಾಣಿಕೆ ಕೊರತೆ ಉಂಟಾಗುತ್ತದೆ. ಸಿಬ್ಬಂದಿಯನ್ನು ತುರ್ತು ಸಂದರ್ಭದಲ್ಲಿ ಬಳಸಿಕೊಳ್ಳಲು ಅಸಾಧ್ಯವಾಗುತ್ತದೆ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತದೆ ಎಂಬ ಮಾತುಗಳು ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿವೆ.
ರೆಡಿಯಾಲಿಜಿಸ್ಟ್, ಮೂಳೆ ತಜ್ಞರು, ಅರವಳಿಕೆ ತಜ್ಞ, ಮಕ್ಕಳ ತಜ್ಞ, ಕಿವಿ ಮತ್ತು ಮೂಗು ತಜ್ಞ, ಚರ್ಮ, ಜನರಲ್ ಮೆಡಿಸನ್ ಮತ್ತು ಹೆರಿಗೆ ಮತ್ತು ಪ್ರಸೂತಿ ತಜ್ಞರು ಕರ್ತವ್ಯ ನಿರ್ವಹಿಸುತ್ತಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಯ ಲೆಕ್ಕದಲ್ಲಿ ನೀಡಲಾಗಿದೆ. ಈಗ ತಾಲ್ಲೂಕು ಅಸ್ಪತ್ರೆಯಾದರೆ ಅವರೆಲ್ಲರೂ ಬೇರೆ ಆಸ್ಪತ್ರೆಗೆ ಹೋಗಬೇಕಾಗುತ್ತದೆ. ಸರ್ಕಾರ ಆಸ್ಪತ್ರೆಗಳನ್ನು ಉನ್ನತೀಕರಣ ಮಾಡಲು ಪ್ರಯತ್ನಿಸುವ ಬದಲು ಕೆಳದರ್ಜೆಗೆ ಇಳಿಸುವ ಪ್ರಯತ್ನ ನಡೆಯುತ್ತಿವುದರ ಬಗ್ಗೆ ಸಾರ್ವಜನಿಕರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾ ಮಟ್ಟದ ಆಸ್ಪತ್ರೆ ನೇರವಾಗಿ ಆಯುಕ್ತರ ಸುಪರ್ದಿಗೆ ಬರುತ್ತದೆ. ತಾಲ್ಲೂಕು ಆಸ್ಪತ್ರೆಯಾದರೆ ಆಸ್ಪತ್ರೆ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟು, ಸಂಬಳ ಮತ್ತಿತರ ಅನುದಾನದ ಕೊರತೆ ಉಂಟಾಗುತ್ತದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಆಸ್ಪತ್ರೆಗಿಂತ ಕೆಜಿಎಫ್ ಆಸ್ಪತ್ರೆಗೆ ಹೆಚ್ಚಿನ ರೋಗಿಗಳ ಬರುತ್ತಿದ್ದು, ರೋಗಿಗಳಿಗೆ ತಕ್ಕದಾದ ಚಿಕಿತ್ಸೆ ನೀಡಲು ವೈದ್ಯರು, ಸಿಬ್ಬಂದಿ ಮತ್ತು ಔಷಧಿಗಳ ಸರಬರಾಜು ಕಡಿಮೆಯಾಗುತ್ತದೆ ಎಂಬುದು ಆಸ್ಪತ್ರೆ ಸಿಬ್ಬಂದಿ ಆತಂಕವಾಗಿದೆ.
ಪ್ರತಿನಿತ್ಯ 800 ರಿಂದ 1200 ಹೊರ ರೋಗಿಗಳು ಪ್ರತಿನಿತ್ಯ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ತಿಂಗಳಿಗೆ ಸುಮಾರು 1000 ಒಳರೋಗಿಗಳು ದಾಖಲಾಗುತ್ತಿದ್ದಾರೆ. ನೆರೆಯ ಆಂಧ್ರ ಮತ್ತು ತಮಿಳುನಾಡುಗಳಿಂದಲೂ ರೋಗಿಗಳು ಬರುತ್ತಿದ್ದಾರೆ. ಬಿಜಿಎಂಎಲ್ ಕಂಪನಿ ಆಸ್ಪತ್ರೆ ಮುಚ್ಚಿದ ಮೇಲೆ ಈ ಆಸ್ಪತ್ರೆಗೆ ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಆಸ್ಪತ್ರೆಯನ್ನು ಜಿಲ್ಲಾಮಟ್ಟದ ಆಸ್ಪತ್ರೆಯನ್ನಾಗಿ ಮಾಡಲಾಗಿದೆ ಎಂದು ಆರೋಗ್ಯ ಸಚಿವರ ಪರವಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡರು ಸದನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು. ಇಷ್ಟೆಲ್ಲಾ ಇದ್ದರೂ, ಜಿಲ್ಲಾ ಮಟ್ಟದ ಆಸ್ಪತ್ರೆಯನ್ನು ಯಾವ ಆಧಾರದ ಮೇಲೆ ತಾಲ್ಲೂಕು ದರ್ಜೆಯ ಆಸ್ಪತ್ರೆಯನ್ನಾಗಿ ಮಾಡಲು ಹೊರಟಿದೆ ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಜಿಲ್ಲಾಸ್ಪತ್ರೆಯನ್ನಾಗಿಯೇ ಮುಂದುವರೆಸಿ ನನ್ನನ್ನು ಜಿಲ್ಲಾ ಶಸ್ತ್ರ ಚಿಕಿತ್ಸಕರನ್ನಾಗಿ ನೇಮಕ ಮಾಡಲಾಗಿದೆ. ಈಗ ಪರ್ಯಾಯ ಹುದ್ದೆಯನ್ನು ಸೃಷ್ಟಿಸಿರುವುದರಿಂದ ಆಡಳಿತಾತ್ಮಕ ಮತ್ತು ತಾಂತ್ರಿಕ ತೊಂದರಯಾಗುತ್ತದೆ. ಜಿಲ್ಲಾಸ್ಪತ್ರೆಗೆ ಸಿಗುವ ಸೌಲಭ್ಯ ತಾಲ್ಲೂಕು ಮಟ್ಟದ ಆಸ್ಪತ್ರೆಗೆ ಸಿಗುವುದಿಲ್ಲ. ಆದ್ದರಿಂದ ಜಿಲ್ಲಾಸ್ಪತ್ರೆಯನ್ನಾಗಿಯೇ ಮುಂದುವರೆಸಬೇಕು ಎಂದು ಆಯುಕ್ತರಿಗೆ ಮನವಿ ಮಾಡಲಾಗುವುದು.ಡಾ.ಸುರೇಶ್ ಕುಮಾರ್ ಜಿಲ್ಲಾ ಶಸ್ತ್ರ ಚಿಕಿತ್ಸಕ
ಆಯುಕ್ತರಿಗೆ ಪತ್ರ
2017ರಲ್ಲಿ ಕೆಜಿಎಫ್ ತಾಲ್ಲೂಕು ರಚನೆಯಾದ ಮೇಲೆ ಇದುವರೆವಿಗೂ ಸಾರ್ವಜನಿಕ ಆಸ್ಪತ್ರೆಗೆ ಸ್ಥಾನಮಾನ ನೀಡಿಲ್ಲ. ಆದ್ದರಿಂದ ತಾಲ್ಲೂಕು ಸ್ಥಾನಮಾನ ನೀಡಬೇಕು. ಇದರಿಂದ ಸರ್ಕಾರಕ್ಕೆ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ. ತಾಲ್ಲೂಕು ಆರೋಗ್ಯಾಧಿಕಾರಿಗೆ ಅಧಿಕಾರ ಕೊಡಬೇಕು ಎಂದು ಜಿಲ್ಲಾ ಮತ್ತು ಆರೋಗ್ಯ ಕಲ್ಯಾಣಾಧಿಕಾರಿ ಡಾ.ಜಿ.ಶ್ರೀನಿವಾಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
‘ಆಸ್ಪತ್ರೆಯನ್ನು ಕೆಳದರ್ಜೆಗಿಳಿಸಲು ಬಿಡುವುದಿಲ್ಲ
ನಗರಕ್ಕೆ ಸರ್ಕಾರ ಹೆಚ್ಚಿನ ಅನುದಾನ ಕೊಟ್ಟು ಅಭಿವೃದ್ಧಿ ಪಡಿಸಬೇಕೇ ವಿನಃ ಇರುವ ಸೌಲಭ್ಯವನ್ನು ಕಿತ್ತುಕೊಳ್ಳಬಾರದು. ಬಿಜಿಎಂಎಲ್ ಆಸ್ಪತ್ರೆ ಮುಚ್ಚಿದ ಮೇಲೆ ಬಡವರಿಗೆ ಇರುವುದು ಇದೊಂದೇ ಆಸ್ಪತ್ರೆ. ಯಾವುದೇ ಕಾರಣಕ್ಕೂ ದರ್ಜೆಯನ್ನು ಕಡಿಮೆ ಮಾಡಲು ಬಿಡುವುದಿಲ್ಲ ಎಂದು ಭಾನುವಾರ ಆಸ್ಪತ್ರೆಗೆ ಭೇಟಿ ನೀಡಿದ್ದ ಕೆಜಿಎಫ್ ಸೇವ್ ಸಮಿತಿ ಸದಸ್ಯರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.