ADVERTISEMENT

ರಾಜಧನ ಬಾಕಿ: ಬಾಯಿಗೆ ಬಂದಂತೆ ಆರೋಪ

ಮಾಲೂರು ಶಾಸಕ ನಂಜೇಗೌಡ ವಿರುದ್ಧ ಸಂಸದ ಮುನಿಸ್ವಾಮಿ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2021, 15:49 IST
Last Updated 21 ಮಾರ್ಚ್ 2021, 15:49 IST
ಎಸ್‌.ಮುನಿಸ್ವಾಮಿ
ಎಸ್‌.ಮುನಿಸ್ವಾಮಿ   

ಕೋಲಾರ: ‘ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಜಿಲ್ಲೆಯ ರಾಜಕಾರಣಿಯೊಬ್ಬರು ₹ 60 ಕೋಟಿ ರಾಜಧನ ಬಾಕಿ ಉಳಿಸಿಕೊಂಡಿದ್ದು, ಅದನ್ನು ಮರೆಮಾಚಲು ಸರ್ಕಾರದ ವಿರುದ್ಧ ಬಾಯಿಗೆ ಬಂದಂತೆ ಆರೋಪ ಮಾಡುತ್ತಾರೆ. ಅವರು ಏನು ಮಾತನಾಡುತ್ತಾನೆ ಎಂಬುದು ಅವರಿಗೆ ಗೊತ್ತಿಲ್ಲ’ ಎಂದು ಸಂಸದ ಎಸ್‌.ಮುನಿಸ್ವಾಮಿ ಪರೋಕ್ಷವಾಗಿ ಮಾಲೂರು ಶಾಸಕ ಕೆ.ವೈ.ನಂಜೇಗೌಡ ವಿರುದ್ಧ ವಾಗ್ದಾಳಿ ನಡೆಸಿದರು.

ತಾಲ್ಲೂಕಿನ ನರಸಾಪುರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಚಿಕ್ಕಬಳ್ಳಾಪುರ ಮತ್ತು ಶಿವಮೊಗ್ಗದಲ್ಲಿ ನಡೆದ ಜಿಲೆಟಿನ್‌ ಸ್ಫೋಟ ದುರಂತದ ನಂತರ ಎಚ್ಚೆತ್ತಿರುವ ಸರ್ಕಾರ ಕಲ್ಲು ಗಣಿಗಾರಿಕೆ ಮಾಲೀಕರ ಹೆಸರಿನಲ್ಲೇ ಜಿಲೆಟಿನ್‌ ಸ್ಫೋಟದ ಲೈಸನ್ಸ್‌ ಇರಬೇಕೆಂಬ ನಿಯಮ ರೂಪಿಸಿದೆ’ ಎಂದರು.

‘ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಕ್ರಷರ್‌ ಮಾಲೀಕರಿಗೆ ತೊಂದರೆ ಕೊಡಲ್ಲ. ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುವವರು ಕಾನೂನು ರೀತಿ ಇರಲಿ ಎಂಬುದು ಸರ್ಕಾರದ ಆಶಯ. ಇದನ್ನು ತಪ್ಪು ಎನ್ನುವುದು ಸರಿಯಲ್ಲ. ಕಾಂಗ್ರೆಸ್‌ನವರು ಹಿಂದಿನಿಂದಲೂ ತಪ್ಪು ಮಾಡಿಕೊಂಡು ಬಂದಿದ್ದಾರೆ. ಅದನ್ನು ಸರಿಪಡಿಸುವ ಏಕೈಕ ಉದ್ದೇಶಕ್ಕೆ ಕ್ರಷರ್‌ ಮಾಲೀಕರ ಹೆಸರಿನಲ್ಲೇ ಸ್ಫೋಟದ ಪರವಾನಗಿ ಇರಬೇಕೆಂಬ ನಿಯಮ ರೂಪಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧೆಡೆಯಿಂದ ಬಂದು ಸ್ಥಳೀಯವಾಗಿ 10 ಕ್ರಷರ್‌ಗಳಲ್ಲೇ ಒಬ್ಬರೇ ಜಿಲೆಟಿನ್‌ ಸ್ಫೋಟ ಮಾಡುತ್ತಿದ್ದಾರೆ. ಅವರು ಅನುಭವಿಗಳಲ್ಲ. ಅಂತಹ ಸಂದರ್ಭದಲ್ಲಿ ಅನಾಹುತ ಸಂಭವಿಸುತ್ತವೆ. ಚಿಕ್ಕಬಳ್ಳಾಪುರ ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಸಂಭವಿಸಿದ ಜಿಲೆಟಿನ್‌ ಸ್ಫೋಟದಲ್ಲಿ ಕುಟುಂಬ ಸದಸ್ಯರನ್ನು ಕಳೆದುಕೊಂಡವರಿಗೆ ಅದರ ನೋವು ಗೊತ್ತು’ ಎಂದು ತಿಳಿಸಿದರು.

ಸುರಕ್ಷತೆ ಮುಖ್ಯ: ‘ರಾಜ್ಯದಲ್ಲಿ ಬಡವರು, ಶ್ರೀಮಂತರು ಸೇರಿದಂತೆ ಎಲ್ಲರಿಗೂ ಒಂದೇ ಕಾನೂನು. ಸರ್ಕಾರಕ್ಕೆ ಜನರ ಸುರಕ್ಷತೆ ಮುಖ್ಯ. ಸರ್ಕಾರಕ್ಕೂ ಆಡಳಿತ ನಿರ್ವಹಣೆಗೆ ಹಣ ಬೇಕು. ಹೀಗಾಗಿ ಕ್ರಷರ್‌ ಮಾಲೀಕರಿಗೆ ತೊಂದರೆ ಕೊಡಲ್ಲ. ಕ್ರಷರ್‌ ಮಾಲೀಕರು ಸರ್ಕಾರದಿಂದ ಲೈಸನ್ಸ್‌ ಪಡೆದು ಕಾನೂನು ಪ್ರಕಾರ ಗಣಿಗಾರಿಕೆ ಮುಂದುವರಿಸಲಿ’ ಎಂದು ಸಲಹೆ ನೀಡಿದರು.

‘ಜಿಲ್ಲೆಯಲ್ಲಿ ಚಪ್ಪಡಿ ತೆಗೆಯುವ ಕಲ್ಲು ಕುಟಿಕರಿಂದ ಸ್ಥಳದಲ್ಲೇ ರಾಜಧನ ಪಡೆದು ಗಣಿಗಾರಿಕೆಗೆ ಜಾಗ ಹಂಚಿಕೆ ಮಾಡಲಾಗುತ್ತದೆ. ಈ ಸಂಬಂಧ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ್‌ ನಿರಾಣಿ ಅವರೊಂದಿಗೆ ಮಾತನಾಡಿದ್ದೇನೆ. ಜಾತ್ಯಾತೀತವಾಗಿ, ಪಕ್ಷಾತೀತವಾಗಿ ವಿವಿಧ ಸಮುದಾಯದವರು ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ. ಅವರಿಗೆ ಅನುಕೂಲ ಮಾಡಿಕೊಡುತ್ತೇವೆ’ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.