ADVERTISEMENT

ಮಾಲೂರು: ಆರ್‌ಎಸ್‌ಎಸ್‌ನಿಂದ ಪಥಸಂಚಲನ, ಬಿಗಿ ಭದ್ರತೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 7:20 IST
Last Updated 27 ಅಕ್ಟೋಬರ್ 2025, 7:20 IST
ಮಾಲೂರು ನಗರದಲ್ಲಿ ಭಾನುವಾರ ಆರ್‌ಎಸ್‌ಎಸ್‌ನಿಂದ ಆಕರ್ಷಕ ಪಥಸಂಚಲನ ನಡೆಯಿತು
ಮಾಲೂರು ನಗರದಲ್ಲಿ ಭಾನುವಾರ ಆರ್‌ಎಸ್‌ಎಸ್‌ನಿಂದ ಆಕರ್ಷಕ ಪಥಸಂಚಲನ ನಡೆಯಿತು   

ಮಾಲೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‍ಎಸ್‌) ಶತಮಾನೋತ್ಸವ ಹಾಗೂ ವಿಜಯದಶಮಿ ಅಂಗವಾಗಿ ನಗರದಲ್ಲಿ ಭಾನುವಾರ ಸಾವಿರಾರು ಗಣವೇಷಧಾರಿಗಳು ಪಥಸಂಚಲನ ನಡೆಸಿದರು. ರಾಜ್ಯದಲ್ಲಿ ಆರ್‌ಎಸ್‌ಎಸ್‌ ವಿಚಾರವಾಗಿ ಜಟಾಪಟಿ ನಡೆಯುತ್ತಿರುವ ಕಾರಣ ಪೊಲೀಸರು ಭಾರಿ ಬಿಗಿ ಭದ್ರತೆ ಒದಗಿಸಿದ್ದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಟದ ಮೈದಾನದಲ್ಲಿ (ಹೋಂಡಾ ಸ್ಟೇಡಿಯಂ) ಮಾಲೂರು ತಾಲ್ಲೂಕು ಘಟಕದ ನೇತೃತ್ವದಲ್ಲಿ ಆರಂಭಗೊಂಡ ಪಥಸಂಚಲನದಲ್ಲಿ ಭಾರತಮಾತೆ ಹಾಗೂ ಸಂಘದ ಸಂಸ್ಥಾಪಕ ಡಾ.ಕೇಶವ್ ಬಲಿರಾಮ್‌ ಹೆಡಗೇವಾರ್‌ ಭಾವಚಿತ್ರವನ್ನು ತೆರದ ಜೀಪಿನಲ್ಲಿ ಮೆರವಣಿಗೆ ನಡೆಸಲಾಯಿತು. 

ಜೀಪಿನ ಹಿಂದೆ ಮುಂದೆ ನೂರಾರು ಆರ್‌‌ಎಸ್‍ಎಸ್ ಗಣವೇಷಧಾರಿಗಳು ದಂಡ ಹಿಡಿದು, ಕೆಲವರು ಡ್ರಮ್‌ ಬಾರಿಸುತ್ತಾ ಪಥಸಂಚಲನದಲ್ಲಿ ಭಾಗವಹಿಸಿದ್ದರು.

ADVERTISEMENT

ಮಾಜಿ ಸಂಸದ ಎಸ್‌.ಮುನಿಸ್ವಾಮಿ, ಮಾಜಿ ಶಾಸಕ ಕೆ.ಎಸ್.ಮಂಜುನಾಥಗೌಡ ಸೇರಿದಂತೆ ತಾಲ್ಲೂಕು ಘಟಕದ ಹಾಗೂ ನಾಗರಿಕರು ಗಣವೇಷಧಾರಿಗಳಾಗಿ ವಾದ್ಯಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು. ರಸ್ತೆಯ ಇಕ್ಕೆಲಗಳಲ್ಲಿ ಜನರು ನಿಂತು ಆಸಕ್ತಿಯಿಂದ ವೀಕ್ಷಿಸಿದರು. ಅಲ್ಲದೇ, ಗಣವೇಷಧಾರಿಗಳ ಮೇಲೆ ಪುಷ್ಪ ಮಳೆಗರೆದು ಜಯಘೋಷ ಹಾಕಿದರು. ಪಥಸಂಚಲನದಲ್ಲಿದ್ದ ಭಗವಾಧ್ವಜ ಹಾಗೂ ಸಂಘದ ಸಂಸ್ಥಾಪಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಮದ್ಯಾಹ್ನ 3 ಗಂಟೆಗೆ ಗಣವೇಷಧಾರಿಗಳು ಜಮಾಯಿಸಿದರು. ಪಥಸಂಚಲನಕ್ಕೆ ನಾಗರಿಕರು ಪಕ್ಷಭೇದ ತೊರೆದು ಭಾಗವಹಿಸಿದ್ದರು. ಕೆಲವು ಪೋಷಕರು ತಮ್ಮ ಮಕ್ಕಳನ್ನು ಗಣವೇಷಧಾರಿಗಳನ್ನಾಗಿ ಮಾಡಿ ಕರೆತಂದಿದ್ದರು. ಇನ್ನು ಕೆಲವು ಪುಟಾಣಿ ಮಕ್ಕಳು ಸ್ವಾತಂತ್ಯ್ರ ಹೋರಾಟಗಾರರ ವೇಷ ಧರಿಸಿದಿ, ಆಕರ್ಷಣೀಯವಾಗಿತ್ತು.

ಸುಮಾರು ನಾಲ್ಕೂವರೆ ಸಾವಿರ ಗಣವೇಷಧಾರಿಗಳು ಪಥಸಂಚಲನದಲ್ಲಿ ಭಾಗವಹಿಸಿದ್ದರು. ಪಟ್ಟಣದ ತಾಲ್ಲೂಕು ಕಚೇರಿ ರಸ್ತೆ, ಗಾಂಧಿ ಸರ್ಕಲ್ , ಶ್ರೀಧರ್ಮರಾಯಸ್ವಾಮಿ ದೇವಾಲಯ ಸರ್ಕಲ್, ಆಗ್ರಹಾರ ಬೀದಿ ಮೂಲಕ ಮಹರಾಜ ಸರ್ಕಲ್ , ಬಾಬುರಾವು ಬೀದಿ, ಕೆಂಪೇಗೌಡ ಸರ್ಕಲ್, ಮಾರುತಿ ಬಡಾವಣೆ ಮೂಲಕ ಅರಳೇರಿ ಸರ್ಕಲ್ ರಸ್ತೆ ಮೂಲಕ ಮತ್ತೆ ಹೋಂಡಾ ಸ್ಟೇಡಿಯಂಗೆ ಸಂಜೆ 5.40ಕ್ಕೆ ಬಂದು ಸೇರಿತು. ಪಥಸಂಚಲನದಲ್ಲಿ ಭಾಗವಹಿಸಿದ್ದ ಗಣವೇಷಧಾರಿಗಳಿಗೆ ಪ್ರತಿ ಸರ್ಕಲ್ ಮತ್ತು ರಸ್ತೆಗಳಲ್ಲಿ ನಾಗರಿಕರು ಹೂವಿನ ಸಿಂಚನ ಎಸಗಿದರು.

ಬಿಗಿ ಬಂದೋಬಸ್ತ್: ಪಥಸಂಚಲನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ.ಮತ್ತು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಶಂಕರ್‌, ಡಿವೈಎಸ್ಪಿ ಎಂ.ಎಚ್‌.ನಾಗ್ತೆ, ಸರ್ಕಲ್ ಇನ್‌ಸ್ಪೆಕ್ಟರ್‌ ರಾಮಪ್ಪ, ಮಾಸ್ತಿ ಸರ್ಕಲ್ ಇನ್‌ಸ್ಪೆಕ್ಟರ್‌ ಓಂಪ್ರಕಾಶ್ ಗೌಡ, ಗುಪ್ತಚರ ಇಲಾಖೆಯ ಇನ್‌ಸ್ಪೆಕ್ಟರ್‌ ದೇವರಾಜ್ ಬಿರೇದಾರ್‌ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಹಮ್ಮಿಕೊಳ್ಳಲಾಗಿತ್ತು.

ಮಾಜಿ ಸಂಸದ ಎಸ್‌.ಮುನಿಸ್ವಾಮಿ ಮಾತನಾಡಿ, ಪಥಸಂಚಲನ ನಾಗರಿಕರ ಸಹಕಾರದಿಂದ ಅದ್ದೂರಿಯಾಗಿ ನಡೆದಿದೆ. ನಗರದಲ್ಲಿ ಸುಮಾರು 7 ಕಿ.ಮೀನಷ್ಟು ಪಥ ಸಂಚಲನ ನಡೆಸಲಾಯಿತು. ರಾಜ್ಯದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿ ಮಾಲೂರು ತಾಲೂಕಿನಲ್ಲಿ ಪಾಲ್ಗೊಂಡಿದ್ದರು ಎಂದರು.

ಕಾಂಗ್ರೆಸ್ ಪಕ್ಷದವರು ರಾಜ್ಯದಲ್ಲಿ ಬಾಂಬ್ ಹಾಕಿದವರ ಪರವಾಗಿ ಮಾತನಾಡುತ್ತಾರೆ. ವಿಧಾಸೌಧದ ಒಳಗಡೆ ಪಾಕಿಸ್ತಾನದ ಪರವಾಗಿ ಜಯಕಾರ ಹಾಕಿದವರನ್ನು ರಕ್ಷಿಸುವ ಕೆಲಸ ಮಾಡುತ್ತಾರೆ. ದೇಶಕ್ಕಾಗಿ ಪ್ರಾಣ ಕೊಡುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದವರ ಕಾಲಿಗೆ ಹೂವು ಹಾಕಬೇಕು ಎಂದು ಹೇಳಿದರು.

ಮಾಜಿ ಶಾಸಕ ಕೆ.ಎಸ್‌.ಮಂಜುನಾಥಗೌಡ ಮಾತನಾಡಿ, ಆರ್‌ಎಸ್‌ಎಸ್‌ ದೇಶಭಕ್ತಿಯನ್ನು ತುಂಬುತ್ತದೆ. ವಿರೋಧ ಪಕ್ಷದವರು ಏನೇ ಹೇಳಿದರೂ ಜನರಲ್ಲಿ ದೇಶಭಕ್ತಿ ತುಂಬುವುದು ಆರ್‌ಎಸ್‌ಎಸ್ ಎಂದು ಸಾಬೀತು ಮಾಡಿದೆ. ಆರ್‌ಎಸ್‌ಎಸ್ ವಿರುದ್ಧ ಮಾತನಾಡುವರಿಗೂ ಮುಂದಿನ ದಿನಗಳಲ್ಲಿ ಮನವರಿಕೆಯಾಗಲಿದೆ ಎಂದರು.


ಮಾಜಿ ಸಚಿವ ಎಸ್‌.ಎನ್.ಕೃಷ್ಣಯ್ಯ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಓಂ ಶಕ್ತಿ ಚಲಪತಿ, ತಾಲ್ಲೂಕು ಅಧ್ಯಕ್ಷ ಟಿ.ಬಿ.ಕೃಷ್ಣಪ್ಪ, ಮುಖಂಡರಾದ ಆರ್‌.ಪ್ರಭಾಕರ್, ನಗರಸಭಾ ಸದಸ್ಯರಾದ ರಾಮಮೂರ್ತಿ, ಎಂ.ವಿ.ವೇಮನ್ನ, ವೆಂಕಟೇಶ್, ಜಿ.ಪಂ.ಮಾಜಿ ಸದಸ್ಯ ಚಿನ್ನಸ್ವಾಮಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು, ಮಕ್ಕಳು ಸೇರಿದಂತೆ ನಾಗರಿಕರು ಭಾಗವಹಿಸಿದ್ದರು.

ಆರ್‌ಎಸ್‌ಎಸ್ ನ ಆಕರ್ಷಕ ಪಥ ಸಂಚಲನದಲ್ಲಿ ಮಗುವಿಗೆ ಕಿತ್ತೂರು ರಾಣಿ ಚೆನ್ನಮ್ಮ ವೇಷ
ಆರ್‌ಎಸ್‌ಎಸ್‌ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ಮಕ್ಕಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.