ADVERTISEMENT

RTI ಅರ್ಜಿದಾರರಿಗೆ ಮಾಹಿತಿ ನೀಡಲು ವಿಫಲ: ಕೋಲಾರ ತಹಶೀಲ್ದಾರ್‌ಗೆ ₹50 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 7:24 IST
Last Updated 9 ಜನವರಿ 2026, 7:24 IST
ಡಾ.ನಯನಾ
ಡಾ.ನಯನಾ   

ಕೋಲಾರ: ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಸಲ್ಲಿಸಿದ್ದ ಎರಡು ಅರ್ಜಿಗಳಿಗೆ ಸಂಬಂಧಿಸಿದಂತೆ ಗೋಮಾಳ ಜಮೀನಿನ ದಾಖಲೆಯ ಮಾಹಿತಿ ನೀಡಲು ವಿಫಲರಾದ ಕೋಲಾರ ತಹಶೀಲ್ದಾರ್ ಡಾ.ನಯನಾ ಅವರಿಗೆ ರಾಜ್ಯ ಮಾಹಿತಿ ಆಯೋಗ ಒಟ್ಟು ₹ 50 ಸಾವಿರ ದಂಡ ವಿಧಿಸಿ ಆದೇಶ ಹೊರಡಿಸಿದೆ.

ಕೋಲಾರ ತಾಲ್ಲೂಕು ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆಗಿರುವ ನಯನಾ ಎರಡೂ ಅರ್ಜಿಗಳಿಗೆ ಸಂಬಂಧಿಸಿದ ಮಾಹಿತಿ ನೀಡಿರಲಿಲ್ಲ.

ಈ ಸಂಬಂಧ ಮೇಲ್ಮನವಿ ವಿಚಾರಣೆ ನಡೆಸಿರುವ ರಾಜ್ಯ ಮಾಹಿತಿ ಆಯೋಗದ ಮಾಹಿತಿ ಆಯುಕ್ತ ಬದ್ರುದ್ದೀನ್‌ ಕೆ., ಎರಡೂ ಪ್ರಕರಣಗಳಲ್ಲಿ ತಹಶೀಲ್ದಾರ್‌ಗೆ ‌ತಲಾ ₹ 25 ಸಾವಿರ ದಂಡ ವಿಧಿಸಿ ಆದೇಶಿಸಿದ್ದಾರೆ. ಜೊತೆಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಕೋಲಾರ ಉಪವಿಭಾಗಾಧಿಕಾರಿ ಕಚೇರಿಯಿಂದ ಕೋಲಾರ ತಹಶೀಲ್ದಾರ್‌ಗೆ ಕಚೇರಿಗೆ ರವಾನೆಯಾಗಿದ್ದ ಗೋಮಾಳ ಜಮೀನಿನ ದಾಖಲೆವೊಂದನ್ನು ನೀಡುವಂತೆ 2024ರ ಮಾರ್ಚ್ 30 ಹಾಗೂ ಏ.3ರಂದು ಬೆಂಗಳೂರಿನ ಯಶವಂತಪುರದ ಸಾಮಾಜಿಕ ಕಾರ್ಯಕರ್ತ ಮಲ್ಲಿಕಾರ್ಜುನ ರಾಜು ಕೆ. ಎಂಬುವರು ಆರ್‌ಟಿಐ ಅರ್ಜಿ ಸಲ್ಲಿಸಿ ಮಾಹಿತಿ ಕೋರಿದ್ದರು.

ಸಕಾಲಕ್ಕೆ ಮಾಹಿತಿ ಒದಗಿಸದ ಕಾರಣ ಅರ್ಜಿದಾರ 2024ರ ಜೂನ್‌ 26ರಂದು ಮೊದಲ ಬಾರಿ ಪ್ರಥಮ ಮೇಲ್ಮನವಿ ಪ್ರಾಧಿಕಾರಕ್ಕೆ (ಉಪವಿಭಾಗಾಧಿಕಾರಿ) ಮೇಲ್ಮನವಿ ಸಲ್ಲಿಸಿದ್ದರು. ಅಲ್ಲೂ ಮಾಹಿತಿ ಸಿಗದ ಕಾರಣ ಅ.7ರಂದು ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. 2025ರ ಜೂನ್‌ 11ರಂದು ಆಯೋಗ ಉಭಯರಿಗೆ ನೋಟಿಸ್‌ ಜಾರಿ ಮಾಡಿತ್ತು. ಅಲ್ಲದೇ, ಅರ್ಜಿದಾರರಿಗೆ ಮಾಹಿತಿ ನೀಡದ ಬಗ್ಗೆ ಖುದ್ದಾಗಿ ವಿಚಾರಣೆಗೆ ಹಾಜರಾಗಿ ವಿವರಣೆ ನೀಡುವಂತೆ ನ.4ರಂದು ನಿರ್ದೇಶಿಸಿತ್ತು. ನಯನಾ ವಿಚಾರಣೆಗೆ ಹಾಜರಾಗಿರಲಿಲ್ಲ, ನೋಟಿಸ್‌ಗೆ ಉತ್ತರವನ್ನೂ ನೀಡಿರಲಿಲ್ಲ. ಹೀಗಾಗಿ, ದಂಡ ವಿಧಿಸಲಾಗಿದೆ.

ಪ್ರಥಮ ಮೇಲ್ಮನವಿ ವಿಚಾರಣೆ ನಡೆಸದೇ ಇರುವುದು ಮಾಹಿತಿ ಹಕ್ಕು ಕಾಯ್ದೆಯ ಸ್ಪಷ್ಟ ಉಲ್ಲಂಘನೆಯಾಗಿರುತ್ತದೆ. ಮಾಹಿತಿ ಕೋರಿ ಬರುವ ಅರ್ಜಿಗಳನ್ನು ಕಾಲಮಿತಿಯೊಳಗೆ ಇತ್ಯರ್ಥಗೊಳಿಸಬೇಕೆಂದು ಪ್ರಥಮ ಮೇಲ್ಮನವಿ ಪ್ರಾಧಿಕಾರಿಗೆ ಆಯೋಗ ಎಚ್ಚರಿಕೆ ಕೂಡ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಜ.27ರ ಬೆಳಿಗ್ಗೆ 11 ಗಂಟೆಗೆ ನಿಗದಿಪಡಿಸಿದೆ.

ಏಕೆ ಶಿಸ್ತು ಕ್ರಮ ಕೈಗೊಳ್ಳಬಾರದು ?

ಎರಡೂ ಪ್ರಕರಣಗಳಲ್ಲಿ ಮಾಹಿತಿ ನೀಡಲು ವಿಫಲವಾಗಿರುವ ವಿಚಾರಣೆಗೆ ಗೈರಾಗಿರುವ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆಗಿರುವ ಕೋಲಾರ ತಹಶೀಲ್ದಾರ್‌ ಡಾ.ನಯನಾ ವಿರುದ್ಧ ಕಾನೂನಿನಡಿ ಶಿಸ್ತು ಕ್ರಮ ಕೈಗೊಳ್ಳುವಂತೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಏಕೆ ಶಿಫಾರಸು ಮಾಡಬಾರದು ಎಂದು ಆಯೋಗ ಕೇಳಿದೆ. ಈ ಬಗ್ಗೆ ಕಾರಣ ಕೇಳಿ ನಯನಾ ಅವರಿಗೆ ನೋಟಿಸ್‌ ನೀಡಿದೆ. ಮುಂದಿನ ವಿಚಾರಣೆಯಲ್ಲಿ ತಪ್ಪದೇ ಖುದ್ದು ಹಾಜರಾಗುವಂತೆ ನಿರ್ದೇಶಿಸಿದೆ. ಎರಡೂ ಪ್ರಕರಣಗಳಲ್ಲಿ ವಿಧಿಸಲಾಗಿರುವ ಒಟ್ಟು ₹ 50 ಸಾವಿರ ದಂಡವನ್ನು ನಯನಾ ಅವರ ಈ ತಿಂಗಳ ವೇತನದಲ್ಲಿ ಕಡಿತಗೊಳಿಸಿ ಆರ್‌ಟಿಐ ಕಾಯ್ದೆ ಖಾತೆಗೆ ಜಮಾ ಮಾಡುವಂತೆ ಜಿಲ್ಲಾಧಿಕಾರಿ ಎಂ.ಆರ್‌.ರವಿ ಅವರಿಗೆ ನಿರ್ದೇಶಿಸಿದೆ.