ADVERTISEMENT

ತಿಂಗಳ 5ರೊಳಗೆ ವೇತನ ಬಟವಾಡೆ ಕಡ್ಡಾಯ: ಡಿಡಿಪಿಐ ನಾಗೇಶ್

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2021, 14:53 IST
Last Updated 13 ಅಕ್ಟೋಬರ್ 2021, 14:53 IST
ಕೋಲಾರದಲ್ಲಿ ಬುಧವಾರ ನಡೆದ ಗುರುಸ್ಪಂದನಾ, ಕಡತಯಜ್ಞ ಮಾಸಾಚರಣೆ ಸಭೆಯಲ್ಲಿ ಡಿಡಿಪಿಐ ಎಸ್.ಜಿ.ನಾಗೇಶ್ ಮಾತನಾಡಿದರು
ಕೋಲಾರದಲ್ಲಿ ಬುಧವಾರ ನಡೆದ ಗುರುಸ್ಪಂದನಾ, ಕಡತಯಜ್ಞ ಮಾಸಾಚರಣೆ ಸಭೆಯಲ್ಲಿ ಡಿಡಿಪಿಐ ಎಸ್.ಜಿ.ನಾಗೇಶ್ ಮಾತನಾಡಿದರು   

ಕೋಲಾರ: ‘ವೇತನ ವಿಳಂಬದ ಕುರಿತು ನೆಪ ಹೇಳಬೇಡಿ. ಪ್ರತಿ ತಿಂಗಳು ಕನಿಷ್ಠ 5ನೇ ತಾರೀಖಿನೊಳಗೆವೇತನ ಬಟವಾಡೆ ಆಗಿರಬೇಕು. ಈ ಸಂಬಂಧ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಬಟವಾಡೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸುತ್ತೋಲೆ ಕಳುಹಿಸಿ’ ಎಂದು ಡಿಡಿಪಿಐ ಎಸ್.ಜಿ.ನಾಗೇಶ್ ಸೂಚಿಸಿದರು.

ಇಲ್ಲಿ ಬುಧವಾರ ನಡೆದ ಗುರುಸ್ಪಂದನಾ, ಕಡತಯಜ್ಞ ಮಾಸಾಚರಣೆ ಕುರಿತ ಸಭೆಯಲ್ಲಿ ಮಾತನಾಡಿ, ‘ಪ್ರತಿ ತಿಂಗಳ 21ರಂದೇ ಎಚ್‍ಆರ್‍ಎಂಎಸ್ ತೆರೆದಿರುತ್ತದೆ. ಅಂದೇ ವೇತನ ಪ್ರಕ್ರಿಯೆ ಆರಂಭಿಸಿ, 27ನೇ ತಾರೀಖಿನೊಳಗೆ ಪೂರ್ಣಗೊಳಿಸಿ ಖಜಾನೆಗೆ ಬಿಲ್‌ ತಲುಪಿಸಿ’ ಎಂದು ತಿಳಿಸಿದರು.

‘ಶಿಕ್ಷಕರ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸಿ. ಸವಾಲನ್ನು ಸಾಧನೆಯಾಗಿಸಿ. ಗುಮಾಸ್ತರನ್ನು ಬದಲಿಸಿ ವೇತನ ಪ್ರಕ್ರಿಯೆಯ ವೇಗ ಹೆಚ್ಚಿಸಿ. ತಿಂಗಳ ಕೊನೆಯೊಳಗೆ ವೇತನವಾಗದಿದ್ದರೆ ಡಿಡಿಒಗಳ ವಿರುದ್ಧ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

‘ಶಿಕ್ಷಕರು ನಿವೃತ್ತಿಯಾದಾಗ ಅವರನ್ನು ಶಿಕ್ಷಕ ಸಂಘಟನೆಗಳ ಮುಖಂಡರು ಗೌರವದಿಂದ ಕಳುಹಿಸಿಕೊಡಬೇಕು. ಅವರಿಗೆ ಸರ್ಕಾರದಿಂದ ಬರಬೇಕಾದ ಎಲ್ಲಾ ಸೌಲಭ್ಯ ತಲುಪಿಸುವಲ್ಲಿ ವಿಳಂಬವಾಗುತ್ತಿದೆ. ಈ ಬಗ್ಗೆ ದೂರು ಬಂದಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣಪ್ಪ, ‘ಕಚೇರಿ ಸಿಬ್ಬಂದಿ ರಾಜವರ್ಧನ್ ಅವರು ಮೃತಪಟ್ಟಿದ್ದು, ಅವರ ವಶದಲ್ಲಿದ್ದ ಏಳೆಂಟು ನಿವೃತ್ತ ಶಿಕ್ಷಕರ ಕಡತಗಳ ವಿಲೇವಾರಿ ವಿಳಂಬವಾಗಿದೆ. ನಾನು ಅಧಿಕಾರ ವಹಿಸಿಕೊಂಡು ಕೇವಲ 3 ತಿಂಗಳಾಗಿದ್ದು, ಎಲ್ಲಾ ಕಡತಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿದ್ದೇನೆ’ ಎಂದು ವಿವರಿಸಿದರು.

‘ನಿವೃತ್ತರಿಗೆ ಗೌರವ ನೀಡಬೇಕು. ತಾಲ್ಲೂಕಿನಲ್ಲಿ ಈ ವರ್ಷ ನಿವೃತ್ತರಾಗುವ ಎಲ್ಲಾ ಶಿಕ್ಷಕರ ಪಟ್ಟಿ ಇಲಾಖೆಯಲ್ಲಿ ಇರಬೇಕು. 3 ತಿಂಗಳ ಮುನ್ನವೇ ಶಿಕ್ಷಕರಿಗೆ ಪತ್ರ ಬರೆದು ಅಗತ್ಯ ದಾಖಲೆಪತ್ರ ತರಿಸಿಕೊಂಡು ಕಳುಹಿಸಬೇಕು’ ಎಂದು ಹೇಳಿದರು.

ಆಡಳಿತದಲ್ಲಿ ಪಾರದರ್ಶಕತೆ: ‘ಅನುಕಂಪ ಆಧಾರಿತ ನೇಮಕ ಕಡತಗಳು ಬಾಕಿ ಉಳಿದಿಲ್ಲ. ಆಡಳಿತದಲ್ಲಿ ಪಾರದರ್ಶಕತೆ ತರಲು ಶಕ್ತಿಮೀರಿ ಶ್ರಮಿಸುತ್ತಿದ್ದೇನೆ’ ಎಂದು ಬಿಇಒ ರಾಮಕೃಷ್ಣಪ್ಪ ತಿಳಿಸಿದರು.

‘ಜಿಲ್ಲೆಯಲ್ಲಿ ವೈದ್ಯಕೀಯ ಬಿಲ್‌ಗಳ ಹಣ ದುರ್ಬಳಕೆ ಕುರಿತು ಹಣಕಾಸು ಇಲಾಖೆಯಲ್ಲಿ ದೂರು ಇರುವುದರಿಂದ ತನಿಖೆ ಮುಗಿಯುವವರೆಗೂ ಬಿಲ್‌ಗಳಿಗೆ ಅನುದಾನ ಸಿಗುವುದಿಲ್ಲ’ ಎಂದು ಶಿಕ್ಷಕರ ಸಂಘದ ಅಧ್ಯಕ್ಷ ಅಪ್ಪಿಗೌಡ ಮತ್ತು ಪ್ರಧಾನ ಕಾರ್ಯದರ್ಶಿ ನಾಗರಾಜ್ ಹೇಳಿದರು.

ಸಭೆಗೆ ಸೂಚನೆ: ‘ಪ್ರತಿ ತಿಂಗಳ 3ನೇ ಶನಿವಾರ ಶಿಕ್ಷಕ ಸಂಘಟನೆಗಳ ಮುಖಂಡರ ಸಭೆ ನಡೆಸಿ ಸಮಸ್ಯೆಗಳನ್ನು ಪಟ್ಟಿ ಮಾಡಿ ಪರಿಹಾರ ಒದಗಿಸಬೇಕು. ಕೆಲ ಸಿಬ್ಬಂದಿಯ ಸೇವಾ ಪುಸ್ತಕಗಳು ಕಣ್ಮರೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳಿ. ಶಿಕ್ಷಕರ ಕಲ್ಯಾಣ ನಿಧಿಯಿಂದ ಶಿಕ್ಷಕರ ಒಂದು ಮಗುವಿಗೆ ಮಾತ್ರ ವಿದ್ಯಾರ್ಥಿವೇತನ ಪಡೆಯಲು ಅವಕಾಶವಿದ್ದು, ಇಬ್ಬರಿಗೆ ಪಡೆದಿರುವ ಪ್ರಕರಣಗಳಿದ್ದರೆ ಕ್ರಮ ವಹಿಸಿ’ ಎಂದು ಡಿಡಿಪಿಐ ಸೂಚಿಸಿದರು.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಚೌಡಪ್ಪ, ಶಿಕ್ಷಣಾಧಿಕಾರಿ ಸಿ.ಆರ್.ಅಶೋಕ್, ಜಿಲ್ಲಾ ಖಾಸಗಿ ಶಾಲೆಗಳ ಸಂಘದ ಅಧ್ಯಕ್ಷ ಸದಾನಂದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.